ನವದೆಹಲಿ: ಇನ್ಫೋಸಿಸ್ ಫೌಂಡೇಶನ್‌ನ ಮಾಜಿ ಅಧ್ಯಕ್ಷೆ, ಹೆಸರಾಂತ ಲೇಖಕಿ ಸುಧಾ ಮೂರ್ತಿ ಗುರುವಾರ ರಾಜ್ಯಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಭಾಪತಿಗಳಾದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಸಂಸತ್ ಭವನದ ತಮ್ಮ ಚೇಂಬರ್‌ನಲ್ಲಿ ಸುಧಾ ಮೂರ್ತಿ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನದಂದು ಸುಧಾ ಮೂರ್ತಿ ಅವರನ್ನು ರಾಜ್ಯಸಭೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ನಾಮನಿರ್ದೇಶನ ಮಾಡಿದ್ದರು. ಇಂದು ಸಂಸತ್ತಿನ ಮೇಲ್ಮನೆ ಸದಸ್ಯರಾಗಿ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯಸಭೆಯ ಸಭಾನಾಯಕ ಪಿಯೂಷ್ ಗೋಯಲ್, ಸುಧಾ ಮೂರ್ತಿ ಅವರ ಪತಿ ಮತ್ತು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಕೂಡ ಉಪಸ್ಥಿತರಿದ್ದರು.
ಅನೇಕ ಸಮಾಜಸೇವಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ 73 ವರ್ಷದ ಸುಧಾ ಮೂರ್ತಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. 2006ರಲ್ಲಿ ಪದ್ಮಶ್ರೀ ಮತ್ತು 2023ರಲ್ಲಿ ಪದ್ಮಭೂಷಣ ಗೌರವಕ್ಕೆ ಭಾಜನರಾಗಿದ್ದಾರೆ. ಅಲ್ಲದೇ, ತಮ್ಮ 'ಗ್ರ್ಯಾಂಡ್ಪೆರೆಂಟ್ಸ್ ಬ್ಯಾಗ್ ಆಫ್ ಸ್ಟೋರಿಸ್'ಎಂಬ ಕಥಾ ಸಂಕಲನಕ್ಕೆ ಸುಧಾ ಮೂರ್ತಿ 2023ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಇ ಪದವಿ ಪಡೆದುಕೊಂಡಿರುವ ಸುಧಾ ಮೂರ್ತಿ, ದೇಶದ ಅತೀ ದೊಡ್ಡ ವಾಹನ ಉತ್ಪಾದಕ ಸಂಸ್ಥೆ ಟೆಲ್ಕೋ (ಟಾಟಾ ಎಂಜಿನಿಯರಿಂಗ್ ಅಂಡ್ ಲೋಕೋಮೋಟಿವ್ ಕಂಪನಿ)ಗೆ ನೇಮಕವಾದ ಮೊದಲ ಮಹಿಳಾ ಎಂಜಿನಿಯರ್ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ನಂತರದಲ್ಲಿ ನಾರಾಯಣ ಮೂರ್ತಿ ಅವರಿಗೆ ಇನ್ಫೋಸಿಸ್ ಸಂಸ್ಥೆ ಆರಂಭಿಸುವಲ್ಲಿ ಆಧಾರಸ್ತಂಭವಾಗಿದ್ದು, ಇದನ್ನು ಸ್ಥಾಪನೆಯ ಸಮಯದಲ್ಲಿ ಅವರು ತಮ್ಮ ಉಳಿತಾಯದ 10,000 ರೂ.ಗಳನ್ನು ನೀಡಿದ್ದರು. ಬಳಿಕ ಇನ್ಫೋಸಿಸ್ ಫೌಂಡೇಶನ್ ಸಹ ಸ್ಥಾಪನೆ ಮಾಡಿದಾಗ ಅದರ ಟ್ರಸ್ಟಿಯಾಗಿ ಮುಂದುವರೆದಿದ್ದಾರೆ. 2021ರ ಡಿಸೆಂಬರ್ನಲ್ಲಿ ಈ ಫೌಂಡೇಶನ್‌ನ ಅಧ್ಯಕ್ಷರಾಗಿ ನಿವೃತ್ತರಾಗಿದ್ದರು.
ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿಯ ಪುತ್ರಿಯಾದ ಅಕ್ಷತಾ ಅವರು ಬ್ರಿಟನ್ನ ರಿಷಿ ಸುನಕ್ ಅವರನ್ನು ವಿವಾಹವಾಗಿದ್ದಾರೆ. ರಿಷಿ ಸುನಕ್ ಹಾಲಿ ಪ್ರಧಾನಿಯಾಗಿದ್ದಾರೆ. ಸುಧಾ ಮೂರ್ತಿ ಅವರ ಸೇವಾ ಕಾರ್ಯ ಗುರುತಿಸಿ ರಾಜ್ಯಸಭೆಗೆ ಆಯ್ಕೆ ಮಾಡಲಾಗಿದೆ. ಕಲೆ, ಸಾಹಿತ್ಯ, ವಿಜ್ಞಾನ, ಕ್ರೀಡೆ, ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದವರ 12 ಜನರನ್ನು ರಾಜ್ಯಸಭೆಗೆ ನೇರವಾಗಿ ನಾಮನಿರ್ದೇಶನ ಮಾಡುವ ಅಧಿಕಾರವನ್ನು ರಾಷ್ಟ್ರಪತಿ ಹೊಂದಿದ್ದಾರೆ.
ಇದನ್ನೂ ಓದಿ: ಕನ್ನಡತಿ ಸುಧಾಮೂರ್ತಿ ರಾಜ್ಯಸಭೆಗೆ ನಾಮನಿರ್ದೇಶನ