ಇಂದೋರ್ (ಮಧ್ಯಪ್ರದೇಶ): ಅಯೋಧ್ಯಾ ಶ್ರೀರಾಮನ ದರ್ಶನಕ್ಕೆ ಹೊರಟಿದ್ದ ವೇಳೆ ಅಪಘಾತಕ್ಕೀಡಾಗಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದು, ಆತನ ಅಂಗಾಂಗಗಳನ್ನು ಇಬ್ಬರು ರೋಗಿಗಳಿಗೆ ಕಸಿ ಮಾಡಿ ಜೀವದಾನ ನೀಡಲಾಗಿದೆ. ಪುರುಷೋತ್ತಮನ ಕಾಣಲು ಹೊರಟಿದ್ದಾತನ ಅಕಾಲಿಕ ಮರಣ ರಾಮಭಕ್ತರಿಗೆ ನೋವು ತಂದಿದೆ.
ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಮೂಲದ ದೇವಾಂಶ್ ಜೋಶಿ (21) ಮೃತಪಟ್ಟ ವಿದ್ಯಾರ್ಥಿ. ಈತ ಇಲ್ಲಿನ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ. ಫೆಬ್ರವರಿ 28 ರಂದು ಶ್ರೀರಾಮನ ದರ್ಶನಕ್ಕಾಗಿ ಅಯೋಧ್ಯೆಗೆ ತೆರಳುತ್ತಿದ್ದ. ಈ ವೇಳೆ ಎರಗಿದ ಜವರಾಯ ರಸ್ತೆ ಅಪಘಾತದಲ್ಲಿ ಈತನನ್ನು ಬಲಿ ತೆಗೆದುಕೊಂಡಿದ್ದಾನೆ.
ಘಟನೆಯಲ್ಲಿ ಜೋಶಿ ತಲೆಗೆ ತೀವ್ರ ಪೆಟ್ಟಾಗಿತ್ತು. ತಕ್ಷಣವೇ ಆತನನ್ನು ಇಂದೋರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಪಾಸಣೆ ನಡೆಸಿದ ವೈದ್ಯರು ಮೆದುಳು ನಿಷ್ಕ್ರಿವಾಗಿದ್ದನ್ನು ಗುರುತಿಸಿದ್ದಾರೆ. ಚಿಕಿತ್ಸೆ ನೀಡಿದರೂ, ಬದುಕುಳಿಯಲಾರ ಎಂದು ದೃಢವಾದ ಬಳಿಕ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಅಂಗಾಂಗ ದಾನ ಪಡೆಯಲಾಗಿದೆ.
ಮಗ ಬ್ರೇನ್ ಡೆಡ್ನಿಂದ ಇನ್ನು ಬದುಕಲಾರ ಎಂದು ತಿಳಿದ ಕುಟುಂಬಸ್ಥರು, ಆತನ ಅಂಗಗಳು ಬೇರೊಬ್ಬರ ಜೀವ ಕಾಪಾಡಲಿ ಎಂದು ಆಶಿಸಿ, ಕಿಡ್ನಿ ಮತ್ತು ಮೂತ್ರಪಿಂಡವನ್ನು ದಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ಇಲ್ಲಿನ ಮಹಾತ್ಮ ಗಾಂಧಿ ಸ್ಮಾರಕ ವೈದ್ಯಕೀಯ ಸರ್ಕಾರಿ ಕಾಲೇಜಿನಲ್ಲಿ ಚಿಕಿತ್ಸೆ ನಡೆಸಿ ಅಂಗಾಂಗಗಳನ್ನು ಪಡೆಯಲಾಗಿದೆ.
ಇಬ್ಬರಿಗೆ ಮರುಜೀವ: ರಾಮಭಕ್ತ ಜೋಶಿಯ ಅಂಗದಲ್ಲಿನ ಕಿಡ್ನಿ ಮತ್ತು ಮೂತ್ರಪಿಂಡವನ್ನು ಪಡೆದ ವೈದ್ಯರು ಅಗತ್ಯವಿರುವ ರೋಗಿಗಳಿಗೆ ಕಸಿ ಮಾಡಿದ್ದಾರೆ. ಇದರಿಂದ ಅವರಿಬ್ಬರು ಮರುಜೀವ ಪಡೆದಿದ್ದಾರೆ. ವಿಶೇಷವೆಂದರೆ, ಮೃತ ಜೋಶಿ ಒಂದೇ ಜನ್ಮತಾ ಒಂದೇ ಯಕೃತ್ತು ಹೊಂದಿದ್ದ. ಆತನ ಹೃದಯವು ಕಸಿ ಮಾಡಲು ಯೋಗ್ಯವಾಗಿರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಅಯೋಧ್ಯಾಧೀಶ ಶ್ರೀರಾಮನ ದರ್ಶನಕ್ಕೆ ದೇಶ- ವಿದೇಶಗಳಿಂದ ಲಕ್ಷಾಂತರ ಭಕ್ತರು ರಾಮನಗರಿಗೆ ಬರುತ್ತಿದ್ದಾರೆ. ಜನವರಿ 22 ರಂದು ಭವ್ಯ ರಾಮಮಂದಿರವನ್ನು ಉದ್ಘಾಟನೆ ಮಾಡಿದ ಒಂದು ದಿನದ ನಂತರದಿಂದ (ಜನವರಿ 23) ನಿತ್ಯವೂ ಭಕ್ತರಿಗೆ ಪ್ರವೇಶಾವಕಾಶ ನೀಡಲಾಗಿದೆ. ಈವರೆಗೆ 50 ಲಕ್ಷಕ್ಕೂ ಅಧಿಕ ಭಕ್ತರು ಬಾಲರಾಮನ ಕಣ್ತುಂಬಿಕೊಂಡಿದ್ದಾರೆ. ನಿತ್ಯವೂ ಲಕ್ಷಗಟ್ಟಲೆ ಭಕ್ತರು ವಿಶ್ವದ ಅತಿದೊಡ್ಡ ಹಿಂದು ದೇಗುಲಕ್ಕೆ ಭೇಟಿ ನೀಡುತ್ತಿದ್ದು, ಭದ್ರತೆಗಾಗಿ ಅಲ್ಲಿನ ಸರ್ಕಾರ ಸಾವಿರಾರು ಸಿಬ್ಬಂದಿಯನ್ನು ನಿಯೋಜಿಸಿದೆ.
ಶ್ರೀರಾಮನ ದರ್ಶನಕ್ಕೆ 2031ರ ವೇಳೆಗೆ ಪ್ರತಿವರ್ಷ ಅಯೋಧ್ಯೆಗೆ 10.62 ಕೋಟಿ ಭಕ್ತಾದಿಗಳು ಭೇಟಿ ನೀಡುವ ನಿರೀಕ್ಷೆ ಇದೆ. ಜನರ ಅಲ್ಪಾವಧಿ ಮತ್ತು ದೀರ್ಘಾವಧಿಯ ವಸತಿ ಅಗತ್ಯತೆಗಳನ್ನು ಪೂರೈಸಲು ಅಯೋಧ್ಯೆಯಲ್ಲಿ 8500 ರಿಂದ 12,500 ಬ್ರಾಂಡೆಡ್ ಹೋಟೆಲ್ ರೂಮ್ಗಳು ಬೇಕಾಗಲಿವೆ ಎಂದು ಹೋಟೆಲ್ ನಿರ್ವಹಣಾ ಸಂಸ್ಥೆಯ ವಿಶ್ಲೇಷಣಾ ವರದಿಯಲ್ಲಿ ಹೇಳಿದೆ.
ಇದನ್ನು ಓದಿ: ಅಯೋಧ್ಯೆಗೆ ಬೇಕು 8,500 ರಿಂದ 12,500 ಬ್ರಾಂಡೆಡ್ ಹೋಟೆಲ್ ಕೊಠಡಿಗಳು