ಕಪುರ್ತಲಾ (ಪಂಜಾಬ್): ಅಮೃತಸರದಿಂದ ದೆಹಲಿಗೆ ಹೊರಟಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (22488) ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇಲ್ಲಿನ ಫಗ್ವಾರಾ ಎಂಬ ಸ್ಥಳದಲ್ಲಿ ಈ ಘಟನೆ ನಡೆದಿರುವುದಾಗಿ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಗಂತುಕರು ರೈಲಿನ ಸಿ-3 ಕೋಚ್ ಮೇಲೆ ಇದ್ದಕ್ಕಿದ್ದಂತೆ ಕಲ್ಲು ತೂರಾಟ ನಡೆಸಿದ್ದರಿಂದ ಪ್ರಯಾಣಿಕರಲ್ಲಿ ಕೆಲ ಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಘಟನೆ ಬಳಿಕ ಯಾವುದೇ ಅನಾಹುತ ಸಂಭವಿಸದಿರುವುದನ್ನು ತಿಳಿದು ನಿಟ್ಟಿಸಿರು ಬಿಟ್ಟರು.
ತಾವು ಕಳಿತ ಸೀಟಿನ ಬಳಿಯೇ ಕಲ್ಲುಗಳು ತಾಗಿದ್ದರಿಂದ ಭಾರೀ ಶಬ್ದ ಕೇಳಿ ಬಂದಿತು. ತಕ್ಷಣ ನಾವು ಬೆಚ್ಚಿಬಿದ್ದೆವು ಎಂದು ಗುರುಗ್ರಾಮ್ ನಿವಾಸಿಗಳಾದ ಪೂನಂ ಕಲ್ರಾ ಮತ್ತು ಡಾಲಿ ತುಕ್ರಾಲ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಕಲ್ಲು ತೂರಾಟದಿಂದ ರೈಲಿನ ಎರಡು ಕಿಟಕಿಗಳು ಹಾನಿಗೊಳಗಾಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದು ಮಕ್ಕಳು ಮಾಡಿರುವ ಕೆಲಸವೆಂದು ಕೆಲವರು ಹೇಳುತ್ತಿದ್ದರೆ, ಇನ್ನೂ ಕೆಲವರು ಇದು ಕಿಡಿಗೇಡಿಗಳ ಕೃತ್ಯವೆಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಂದ ರೈಲ್ವೆ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ವಂದೇ ಭಾರತ್ ರೈಲಿನ ಹಲವು ಪ್ರಶ್ನೆಗಳು ಉದ್ಭವ; ಫಗ್ವಾರಾ- ಗುರಾಯಾ ರೈಲ್ವೆ ಮಾರ್ಗದಲ್ಲಿ ತುಂಬಾ ದಿನಗಳಿಂದ ಟ್ರೈನಿನ ಮೇಲೆ ಕಲ್ಲು ತೂರಾಟ ನಡೆದ ಘಟನೆಗಳು ಜರುಗಿಲ್ಲ. ಆದ್ರೆ ಅಮೃತಸರ್- ದೆಹಲಿ ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ನಡೆದ ಈ ಕೃತ್ಯದ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಭುವನೇಶ್ವರ: 'ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲಿಗೆ ಕಿಡಿಗೇಡಿಗಳಿಂದ ಕಲ್ಲು, ಕಿಟಕಿ ಗಾಜುಗಳಿಗೆ ಹಾನಿ