ನವದೆಹಲಿ: ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ್ ದಿಸ್ಸಾನಾಯಕೆ ಮೂರು ದಿನಗಳ ಭಾರತದ ಪ್ರವಾಸದಲ್ಲಿದ್ದಾರೆ. ಭಾನುವಾರ ರಾಷ್ಟ್ರ ರಾಜಧಾನಿಗೆ ಬಂದಿಳಿದ ಅವರು ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿಯಾದರು. ಶ್ರೀಲಂಕಾ ಅಧ್ಯಕ್ಷರಾದ ಬಳಿಕ ದಿಸ್ಸೆನಾಯಕ ನಡೆಸುತ್ತಿರುವ ಮೊದಲ ವಿದೇಶ ಪ್ರವಾಸ ಇದಾಗಿದೆ. ಸೋಮವಾರದಂದು ದಿಸ್ಸಾನಾಯಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ವ್ಯಾಪಾರ, ಹೂಡಿಕೆ, ಶಕ್ತಿ ಮತ್ತು ಸಾಗರ ಭದ್ರತೆ ಸೇರಿದಂತೆ ಹಲವು ವಿಚಾರಗಳ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಭಾನುವಾರ ಪ್ರತ್ಯೇಕವಾಗಿ ಜೈಶಂಕರ್ ಮತ್ತು ದೋವಲ್ ಅವರನ್ನು ಭೇಟಿಯಾದ ದಿಸ್ಸೆನಾಯಕ, ಎರಡೂ ನೆರೆ ದೇಶಗಳ ನಡುವಿನ ಸಂಬಂಧಗಳನ್ನು ವಿಸ್ತರಿಸುವ ಮಾರ್ಗ ಸೇರಿದಂತೆ ಹಲವು ವಿಚಾರಗಳ ಕುರಿತು ಸಮಾಲೋಚನೆ ನಡೆಸಿದರು.
ಎಕ್ಸ್ ಪೋಸ್ಟ್ನಲ್ಲಿ ಮಾತುಕತೆ ವಿವರ ನೀಡಿದ ಲಂಕಾ ಅಧ್ಯಕ್ಷರು: ಈ ಕುರಿತು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ದಿಸ್ಸಾನಾಯಕೆ, ಜೈ ಶಂಕರ್ ಮತ್ತು ಅಜಿತ್ ದೋವಲ್ ಜೊತೆ ಪರಸ್ಪರ ಹಿತಾಸಕ್ತಿಯ ವಿಚಾರಗಳ ಕುರಿತು ಫಲಪ್ರದ ಮಾತುಕತೆ ನಡೆಸಲಾಯಿತು ಎಂದು ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಶ್ರೀಲಂಕಾ ಅಧ್ಯಕ್ಷರ ಜೊತೆ ಭಾರತೀಯ ನಾಯಕರ ನಡುವೆ ನಡೆದ ಅಧಿಕೃತ ಚರ್ಚೆಗಳ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇಂದು ದಿಸ್ಸೆನಾಯಕ ನಿಯೋಗವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದು, ಇಲ್ಲಿ ಲಂಕಾ ತಮಿಳು ಸಮುದಾಯದ ಕುರಿತು ಚರ್ಚೆಯಾಗಲಿದೆ.
ಶ್ರೀಲಂಕಾದಲ್ಲಿರುವ ತಮಿಳು ಸಮುದಾಯ ವಿಕೇಂದ್ರಿಕರಣ ಅಧಿಕಾರವನ್ನು ನೀಡುವ 13ನೇ ತಿದ್ದುಪಡಿಯನ್ನು ಜಾರಿಗೆ ತರಲು ಒತ್ತಾಯಿಸುತ್ತಿದೆ. 1987ರಲ್ಲಿ ಭಾರತ ಶ್ರೀಲಂಕಾ ನಡುವಿನ ಒಪ್ಪಂದದ ವೇಳೆ ಈ 3ನೇ ತಿದ್ದುಪಡಿಯನ್ನು ತರಲಾಗಿತ್ತು. ಈ ಮಾತುಕತೆ ವೇಳೆ ಭಾರತವೂ ಶ್ರೀಲಂಕಾ ಆರ್ಥಿಕತೆಯನ್ನು ಬಲಪಡಿಸುವ ಕುರಿತ ತನ್ನ ಬದ್ದತೆಯನ್ನು ಒತ್ತಿ ಹೇಳಲಿದೆ.
ಭಾನುವಾರ ನವದೆಹಲಿಗೆ ಬಂದಿಳಿದ ಶ್ರೀಲಂಕಾ ಅಧ್ಯಕ್ಷರನ್ನು ವಿಮಾನ ನಿಲ್ದಾಣದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್ ಮುರುಗನ್ ಬರಮಾಡಿಕೊಂಡರು.
ದಿಸ್ಸಾನಾಯಕೆ ಭೇಟಿ ಕುರಿತು ಪೋಸ್ಟ್ ಮಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಂದೀರ್ ಜೈಸ್ವಾಲ್, ಈ ಭೇಟಿಯು ಭಾರತ ಮತ್ತು ಶ್ರೀಲಂಕಾ ಬಂಧವನ್ನು ಮತ್ತುಷ್ಟು ಅಭಿವೃದ್ಧಿ ಮಾಡಲು ಮತ್ತು ಜನ ಕೇಂದ್ರಿತ ಸಹಭಾಗಿತ್ವದ ವೇಗಕ್ಕೆ ಅವಕಾಶ ನೀಡುತ್ತದೆ ಎಂದು ತಿಳಿಸುತ್ತಾ ಸ್ವಾಗತ ಕೋರಿದ್ದಾರೆ. ಈ ಭೇಟಿಯಲ್ಲಿ ಶ್ರೀ ಲಂಕಾ ಅಧ್ಯಕ್ಷರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲಿದ್ದಾರೆ.
ದೆಹಲಿಯಲ್ಲಿನ ಉದ್ಯಮ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಹೂಡಿಕೆ ಮತ್ತು ವಾಣಿಜ್ಯ ಸಂಪರ್ಕಗಳನ್ನು ಉತ್ತೇಜಿಸಲು ನಿರ್ಧರಿಸಿದ್ದಾರೆ. ಈ ಭೇಟಿಯಲ್ಲಿ ಅವರು, ಬಿಹಾರದ ಬೋಧಗಯಾಕ್ಕೂ ಭೇಟಿ ನೀಡಲಿದ್ದಾರೆ. (ಪಿಟಿಐ)
ಇದನ್ನೂ ಓದಿ: ತೀವ್ರ ಚಳಿಗೆ ನಡುಗುತ್ತಿದೆ ಉತ್ತರ ಭಾರತ: ಬಡವರಿಗೆ, ನಿರ್ಗತಿಕರ ನೆರವಿಗೆ ಇವೆ ಆಶ್ರಯಧಾಮಗಳು!