ನವದೆಹಲಿ: ಉತ್ತರ ಭಾರತದಲ್ಲಿ ಚಳಿಗಾಲ ಬೇಸಿಗೆಯಂತಹ ಪರಿಸ್ಥಿತಿಗಳಿಗೆ ತ್ವರಿತವಾಗಿ ಪರಿವರ್ತನೆಗೊಳ್ಳುತ್ತಿದೆ. ಕ್ರಮೇಣ ವಸಂತಕಾಲ ಕಣ್ಮರೆಯಾಗುತ್ತಿದೆ. ಈ ಕುರಿತು ಅಮೆರಿಕದ ಕ್ಲೈಮೇಟ್ ಸೆಂಟ್ರಲ್ ಸಂಶೋಧಕರು 1970ರಿಂದ ಈವರೆಗಿನ ತಾಪಮಾನದ ದತ್ತಾಂಶದ ವಿಶ್ಲೇಷಣೆ ಮಾಡಿದ್ದಾರೆ.
ಭಾರತದಲ್ಲಿ ಚಳಿಗಾಲದ ತಿಂಗಳುಗಳನ್ನು (ಡಿಸೆಂಬರ್‌ನಿಂದ ಫೆಬ್ರವರಿ) ಕೇಂದ್ರೀಕರಿಸುವ ಜಾಗತಿಕ ತಾಪಮಾನದ ಸ್ಥಿತಿಗತಿಗಳನ್ನು ಈ ತಂಡವು ವಿಶ್ಲೇಷಿಸಿದೆ. ಉತ್ತರ ಭಾರತದಾದ್ಯಂತ ಚಳಿಗಾಲದ ಕೊನೆಯಲ್ಲಿ ಸಂಭವಿಸುವ ತಾಪಮಾನದಲ್ಲಿನ ಹಠಾತ್ ಬದಲಾವಣೆಗಳ ಕುರಿತು ಮಾಡಿರುವ ಮಹತ್ವದ ಮಾಹಿತಿ ಇದೀಗ ಬಹಿರಂಗವಾಗಿದೆ.
ಸಂಶೋಧಕರು ಹೇಳಿದ್ದೇನು?: ಉತ್ತರ ಭಾರತದಲ್ಲಿನ ರಾಜ್ಯಗಳ ಸರಾಸರಿ ತಾಪಮಾನವು ಜನವರಿಯಲ್ಲಿ ತಂಪಾಗಿಸುವ ಪ್ರವೃತ್ತಿ ಅಥವಾ ತಾಪಮಾನದಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ. ನಂತರ ಫೆಬ್ರುವರಿಯಲ್ಲಿ ಏರಿಕೆಯಾಗಿದೆ. ಈ ಪ್ರದೇಶಗಳು ಈಗ ತಂಪಾದ ಚಳಿಗಾಲದಂತಹ ತಾಪಮಾನದಿಂದ ಮಾರ್ಚ್‌ನಲ್ಲಿ ಹೆಚ್ಚು ಬೆಚ್ಚಗಿನ ಪರಿಸ್ಥಿತಿಗಳಿಗೆ ಹಠಾತ್ ಬದಲಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ಈ ಬದಲಾವಣೆಯನ್ನು ತೋರಿಸಲು, ಸಂಶೋಧಕರು ಜನವರಿ ಮತ್ತು ಫೆಬ್ರುವರಿಯಲ್ಲಿನ ತಾಪಮಾನದ ಅಂಕಿಅಂಶಗಳ ನಡುವಿನ ವ್ಯತ್ಯಾಸವನ್ನು ಲೆಕ್ಕ ಹಾಕಿದ್ದಾರೆ. 1970ರಿಂದ ಸರಾಸರಿ ತಾಪಮಾನದಲ್ಲಿ ಬದಲಾವಣೆ ಕಂಡುಬಂದಿರುವುದು ಇದರಿಂದ ತಿಳಿದುಬಂದಿದೆ. ರಾಜಸ್ಥಾನದಲ್ಲಿ ತಾಪ ಏರಿಕೆಯ ಅಂಕಿಅಂಶಗಳನ್ನು ಗಮನಿಸಿದರೆ, ಅತ್ಯಂತ ಗಮನಾರ್ಹವಾಗಿ ಹೆಚ್ಚಳವಾಗಿದೆ. ಅಲ್ಲಿ ಫೆಬ್ರುವರಿಯಲ್ಲಿ ಸರಾಸರಿ ತಾಪಮಾನವು 2.6 ಡಿಗ್ರಿ ಇತ್ತು. ಜನವರಿಗಿಂತ ಫೆಬ್ರವರಿ ತಿಂಗಳಲ್ಲೇ ಹೆಚ್ಚು ಉಷ್ಣಾಂಶ ದಾಖಲಾಗಿದೆ.
ರಾಜಸ್ಥಾನ, ಹರಿಯಾಣ, ದೆಹಲಿ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಲಡಾಖ್, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ್ ರಾಜ್ಯಗಳಲ್ಲಿ ಜನವರಿ ಹಾಗೂ ಫೆಬ್ರುವರಿಯಲ್ಲಿ 2 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ವ್ಯತ್ಯಾಸ ಗೋಚರಿಸಿದೆ. ಇದು ಭಾರತದ ಹಲವು ಭಾಗಗಳಲ್ಲಿ ವಸಂತ ಕಾಲ ಮಾಯವಾದಂತೆ ಭಾಸವಾಗುತ್ತಿದೆ ಎಂಬ ವರದಿಗಳನ್ನು ಇದು ಬೆಂಬಲಿಸುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆಯಾಗಿ ದೇಶಾದ್ಯಂತ ಚಳಿಗಾಲದಲ್ಲಿ ತಾಪಮಾನ ಏರಿಕೆಯಾಗುತ್ತಿದೆ ಎಂಬುದು ವಿಶ್ಲೇಷಣೆಯಿಂದ ತಿಳಿದುಬಂದಿರುವ ಮಹತ್ವದ ಅಂಶ. ಈ ತಿಂಗಳುಗಳಲ್ಲಿ ಪ್ರತಿಯೊಂದು ಪ್ರದೇಶವು ನಿವ್ವಳ ತಾಪಮಾನದ ಸ್ಥಿತಿಗತಿಗಳನ್ನು ತೋರಿಸುತ್ತದೆ. ಮಣಿಪುರದಲ್ಲಿ 1970ರಿಂದ (2.3 ಡಿಗ್ರಿ ಸೆಲ್ಸಿಯಸ್) ಸರಾಸರಿ ಚಳಿಗಾಲದ (ಡಿಸೆಂಬರ್‌ನಿಂದ ಫೆಬ್ರುವರಿ) ತಾಪಮಾನದಲ್ಲಿ ಅತೀ ದೊಡ್ಡ ಬದಲಾವಣೆ ಕಂಡುಬಂದಿದೆ. ಆದರೆ, ದೆಹಲಿಯಲ್ಲಿ (0.2 ಡಿಗ್ರಿ ಸೆಲ್ಸಿಯಸ್) ಸಣ್ಣ ಪ್ರಮಾಣದ ಬದಲಾವಣೆಯಾಗಿದೆ.
ದೇಶದ ದಕ್ಷಿಣ ಭಾಗದಲ್ಲಿ ಡಿಸೆಂಬರ್ ಮತ್ತು ಜನವರಿಯಲ್ಲಿ ತಾಪಮಾನ ಏರಿಕೆಯಾಗಿರುವುದು ಕಂಡುಬಂದಿದೆ. ಸಿಕ್ಕಿಂ (2.4 ಡಿಗ್ರಿ ಸೆಲ್ಸಿಯಸ್) ಮತ್ತು ಮಣಿಪುರ (2.1 ಡಿಗ್ರಿ ಸೆಲ್ಸಿಯಸ್) ಕ್ರಮವಾಗಿ ಡಿಸೆಂಬರ್ ಮತ್ತು ಜನವರಿಯಲ್ಲಿ ತಾಪಮಾನದಲ್ಲಿ ಅತೀ ದೊಡ್ಡ ಬದಲಾವಣೆಗಳಾಗಿವೆ.
"ಜನವರಿಯಲ್ಲಿ ಮಧ್ಯ ಮತ್ತು ಉತ್ತರ ಭಾರತದ ರಾಜ್ಯಗಳಲ್ಲಿ ವಾತಾವರಣ ತಂಪಾಗಿತ್ತು. ಆದರೆ, ಫೆಬ್ರುವರಿಯಲ್ಲಿ ಚಳಿಗಾಲದಿಂದ ವಸಂತಕಾಲದ ಸಂದರ್ಭದಲ್ಲಿ ತಾಪಮಾನದಲ್ಲಿ ತ್ವರಿತ ಜಿಗಿತವಾಗಿದೆ' ಎಂದು ಹವಾಮಾನ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಆ್ಯಂಡ್ರ್ಯೂ ಪರ್ಶಿಂಗ್ ಹೇಳಿದರು.
1850ರಿಂದ ಜಾಗತಿಕ ಸರಾಸರಿ ತಾಪಮಾನವು 1.3 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿದೆ. ಹವಾಮಾನದ ಪ್ರಭಾವ ಉಲ್ಬಣಗೊಂಡಿದೆ. 2023ರ ತಾಪಮಾನದಲ್ಲಿ ಅತ್ಯಂತ ಏರಿಕೆಯಾಗಿದೆ. ಕೈಗಾರಿಕಾ ಕ್ರಾಂತಿಯ ಆರಂಭದಿಂದಲೂ ಹೆಚ್ಚಾಗಿ ಪಳೆಯುಳಿಕೆ ಇಂಧನಗಳ ಸುಡುವಿಕೆಯಿಂದಾಗಿ ವಾತಾವರಣ ಸೇರುವ Co2 ಅದರೊಂದಿಗೆ ತಾಪಮಾನದ ಏರಿಕೆಯು ನಿಕಟ ಸಂಬಂಧ ಹೊಂದಿದೆ.
ವಿಜ್ಞಾನಿಗಳ ಎಚ್ಚರಿಕೆ: ಹವಾಮಾನ ವಿಜ್ಞಾನವು, 2030ರ ವೇಳೆಗೆ ಸರಾಸರಿ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸಲು ಪ್ರಪಂಚ Co2 ಹೊರಸೂಸುವಿಕೆಯನ್ನು 43 ಪ್ರತಿಶತದಷ್ಟು ಕಡಿತಗೊಳಿಸಬೇಕಾಗಿದೆ ಎಂದು ಹೇಳುತ್ತದೆ. ಇದು ಹವಾಮಾನದ ಪರಿಣಾಮಗಳನ್ನು ಹದಗೆಡುವುದನ್ನು ತಡೆಯಲು ರಕ್ಷಣಾತ್ಮಕ ಮಾರ್ಗ. ವ್ಯಾಪಾರ-ವಹಿವಾಟು ಸನ್ನಿವೇಶವು ಶತಮಾನದ ಅಂತ್ಯದ ವೇಳೆಗೆ ಸುಮಾರು 3 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆಗೆ ಜಗತ್ತನ್ನು ಕೊಂಡೊಯ್ಯುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ರಾಜ್ಯದ 12 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ; ಈ ಬಾರಿಯ ಮುಂಗಾರು ಬಗ್ಗೆ ಸಿಹಿ ಸುದ್ದಿ ನೀಡಿದ ಹವಾಮಾನ ಇಲಾಖೆ