ಹೈದರಾಬಾದ್: ರಕ್ಷಣಾ ಸಂಶೋಧನೆ ಮತ್ತು ಬಾಹ್ಯಾಕಾಶ ಉಡಾವಣೆ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರ ವಹಿಸುವ ಹೈದರಾಬಾದ್ ಮೂಲದ ಪ್ರತಿಷ್ಠಿತ ನ್ಯೂಕ್ಲಿಯರ್ ಫ್ಯುಯೆಲ್ ಕಾಂಪ್ಲೆಕ್ಸ್ (NFC) ಎಂಬ ಕಂಪನಿಯು ಸ್ಥಳೀಯವಾಗಿ ಸಿಗುವ ವಸ್ತುಗಳನ್ನು ಬಳಿಸಿಕೊಂಡು ವಿವಿಧ ಗಾತ್ರದ ಮೋನೆಲ್-400 ಎಂಬ ವಿಶೇಷ ಟ್ಯೂಬ್‌ಗಳ (ಪೈಪ್) ಅಭಿವೃದ್ಧಿಪಡಿಸಿದೆ. ಇವು ಬಾಹ್ಯಾಕಾಶ ಅನ್ವಯಿಕೆಗಳಲ್ಲಿ ಹೆಚ್ಚು ಉಪಯೋಗಕಾರಿ ಎಂದು ನಿರೀಕ್ಷಿಸಲಾಗಿದೆ.
ಹೈದರಾಬಾದ್‌ನ ಕಪ್ರಾದಲ್ಲಿರುವ ಈ ಕಂಪನಿಯು ಇದೇ ಮೊದಲ ಬಾರಿಗೆ 'ಮೋನೆಲ್ - 400 ಅಲಾಯ್ ಟ್ಯೂಬ್‌ಗಳನ್ನು' ತಯಾರಿಸುವ ಮೂಲಕ ಆವಿಷ್ಕಾರದಲ್ಲಿ ಮಗದೊಂದು ಹೊಸ ಹೆಜ್ಜೆ ಇಟ್ಟಿದೆ. ಇಸ್ರೋದ ಪ್ರತಿಷ್ಠಿತ ಬಾಹ್ಯಾಕಾಶ ಕಾರ್ಯಾಚರಣೆಗಳ ಅರೆ -ಕ್ರಯೋಜೆನಿಕ್ ದ್ರವ ಪ್ರೊಪಲ್ಷನ್ ಸಿಸ್ಟಮ್ನ ಅಭಿವೃದ್ಧಿಗೆ ಈ ಮೋನೆಲ್-400 ಮಿಶ್ರಲೋಹದ ಟ್ಯೂಬ್‌ಗಳು ಅತ್ಯಂತ ಪ್ರಮುಖ ಪಾತ್ರ ವಹಿಸಲಿವೆ ಎಂದು ಕಂಪನಿ ಹೇಳಿಕೊಂಡಿದೆ. ಇದು ಆತ್ಮನಿರ್ಭರ್ ಭಾರತ್ ಮಿಷನ್‌ನ ಒಂದು ಭಾಗವಾಗಿದೆ ಎಂದು ಕೂಡ ಹೇಳಿಕೊಂಡಿದೆ.
ವಿಧಾನಿಯಿಂದ ಮಿಶ್ರಲೋಹ ಪೂರೈಕೆ: ಈ ಮಿಶ್ರಲೋಹದ ಟ್ಯೂಬ್‌ಗಳ ಅಭಿವೃದ್ಧಿಗೆ ಬಳಸಲಾಗುವ ಕಚ್ಚಾ ಸಾಮಗ್ರಿಗಳನ್ನು ಹೈದರಾಬಾದ್ ಮೂಲದ ಮತ್ತೊಂದು ಕಂಪನಿಯಾದ ಮಿಧಾನಿ (ಮಿಶ್ರಾ ಧಾತು ನಿಗಮ್ ಲಿಮಿಟೆಡ್) ಇದಕ್ಕೆ ಅಗತ್ಯವಾದ ಮಿಶ್ರಲೋಹವನ್ನು ಪೂರೈಸಿದೆ. ಎನ್‌ಎಫ್‌ಸಿ ಉತ್ತಮ ಗುಣಮಟ್ಟದ ವಿವಿಧ ಗಾತ್ರದ ಟ್ಯೂಬ್‌ಗಳನ್ನು ಉತ್ಪಾದಿಸಿದ್ದು, ಬಾಹ್ಯಾಕಾಶದಲ್ಲಿನ ಕಠಿಣ ಪರಿಸ್ಥಿತಿಗಳನ್ನು ಇವುಗಳು ತಡೆದುಕೊಳ್ಳುತ್ತವೆ. ಇದು ಪ್ರಾಯೋಗಿಕವಾಗಿಯೂ ಸಾಬೀತಾಗಿದೆ. ಆತ್ಮನಿರ್ಭರ್ ಭಾರತ್ ಮಿಷನ್ ಅಡಿ ಸಂಪೂರ್ಣ ಸ್ವದೇಶಿ ತಂತ್ರಜ್ಞಾನವನ್ನು ಬಳಸಿಕೊಂಡು ಮೋನೆಲ್-400 ಮಿಶ್ರಲೋಹ ಟ್ಯೂಬ್‌ಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ. ಇದು ಭಾರತದಲ್ಲಿಯೇ ಮೊದಲು. ಸಂಸ್ಥೆಯ ವಿಜ್ಞಾನಿಗಳು ಮತ್ತು ತಜ್ಞರ ಸಂಶೋಧನೆಯ ಫಲವಾಗಿ ಮಿಶ್ರಲೋಹದ ಟ್ಯೂಬ್‌ಗಳು ಬಾಹ್ಯಾಕಾಶ ಸಂಶೋಧನೆಯಲ್ಲಿ ಅನನ್ಯ ಸೇವೆ ಒದಗಿಸಲಿದೆ.
ಲಾಂಚ್ ವೆಹಿಕಲ್ ಮಾರ್ಕ್-3 (LVM3)ಯ ಪೇಲೋಡ್ ಸಾಮರ್ಥ್ಯ ಹೆಚ್ಚಿಸಲು ಭವಿಷ್ಯದ ಉಡಾವಣಾ ವಾಹನಗಳಿಗಾಗಿ ಇಸ್ರೋ ಅರೆ-ಕ್ರಯೋಜೆನಿಕ್ ಎಂಜಿನ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ತಿರುವನಂತಪುರಂನಲ್ಲಿರುವ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ (LPSC) ನಲ್ಲಿ ಸಂಶೋಧನೆ ನಡೆದಿದೆ. ಎನ್‌ಎಫ್‌ಸಿ ತಯಾರಿಸಿದ ಮಿಶ್ರಲೋಹದ ಟ್ಯೂಬ್‌ಗಳ ಮೊದಲ ಉತ್ಪನ್ನಗಳನ್ನು ಎಲ್‌ಪಿಎಸ್‌ಸಿಗೆ ವರ್ಗಾಯಿಸಲಾಗಿದೆ ಎಂದು ಎನ್‌ಎಫ್‌ಸಿ ಅಧ್ಯಕ್ಷ, ಮುಖ್ಯ ಕಾರ್ಯನಿರ್ವಾಹಕ ಡಾ.ಕೋಮಲ್ ಕಪೂರ್ ಹೇಳಿದರು.
ಇದನ್ನೂ ಓದಿ: ವಿಮಾನಕ್ಕೆ ಇಂಧನವಾಗಿ ಪೆಟ್ರೋಲ್, ಡೀಸೆಲ್ ಬಳಸಲ್ಲ: ಏಕೆ ಗೊತ್ತೇ? - Aviation Turbine Fuel