ನವದೆಹಲಿ: ಪ್ರತಿಪಕ್ಷಗಳ ತೀವ್ರ ಆಕ್ಷೇಪದ ನಡುವೆ 18ನೇ ಲೋಕಸಭೆಯ ಮೊದಲ ಅಧಿವೇಶನಕ್ಕೂ ಮುನ್ನ ಬಿಜೆಪಿ ಸಂಸದ ಭರ್ತೃಹರಿ ಮಹತಾಬ್ ಸೋಮವಾರ ಲೋಕಸಭೆ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣವಚನ ಸ್ವೀಕರಿಸಿದರು. ಇದನ್ನು ಖಂಡಿಸಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಇಂಡಿಯಾ ಬ್ಲಾಕ್ ನಾಯಕರು ಸಂಸತ್ತಿನ ಗಾಂಧಿ ಪ್ರತಿಮೆ ಎದುರು ಸಂವಿಧಾನದ ಪ್ರತಿಗಳನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.
ಎಂಟು ಬಾರಿ ಸಂಸದರಾಗಿ ಆಯ್ಕೆಯಾದ ಕಾಂಗ್ರೆಸ್‌ನ ಹಿರಿಯ ಸದಸ್ಯ, ದಲಿತ ನಾಯಕ ಕೆ. ಸುರೇಶ್ ಅವರನ್ನು ಬಿಟ್ಟು ಏಳು ಬಾರಿ ಸಂಸದರಾಗಿ ಆಯ್ಕೆಯಾದ ಮಹತಾಬ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಲಾಗಿದೆ ಎಂದು ವಿರೋಧ ಪಕ್ಷಗಳು ಎನ್‌ಡಿಎ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದವು.
ಕೆ.ಸುರೇಶ್ ಹಿರಿಯರು. ಎಂಟು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇವರು ಹಂಗಾಮಿ ಸ್ಪೀಕರ್ ಆಗಬೇಕಿತ್ತು. ಆದರೆ, ಅವರನ್ನು ಕಡೆಗಣಿಸಲಾಗಿದೆ. ಸಂಸದೀಯ ವ್ಯವಹಾರಗಳ ಸಚಿವರು ತೆಗೆದುಕೊಂಡಿರುವ ನಿರ್ಧಾರ ಅತ್ಯಂತ ದುರದೃಷ್ಟಕರ. ಯಾವುದೇ ಸಮಾಲೋಚನೆ ನಡೆಸದೆ ದುರಹಂಕಾರಿ ವರ್ತನೆ ಅನುಸರಿಸುತ್ತಿದ್ದಾರೆ. ಇದು ಅತ್ಯಂತ ದುರದೃಷ್ಟಕರ ಎಂದು ಕಾಂಗ್ರೆಸ್ ಸಂಸದರಾದ ಮಾಣಿಕಂ ಟ್ಯಾಗೋರ್, ಗೌರವ್ ಗೊಗೊಯ್, ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಸೇರಿದಂತೆ ಹಲವರು ಎನ್‌ಡಿಎ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಆಡಳಿತ ಪಕ್ಷವು ತಮ್ಮ ಅಹಂಕಾರವನ್ನು ಮರೆತಿಲ್ಲ. ಮುಖ್ಯವಾದ ಸಂಗತಿಗಳನ್ನು ನಿರ್ಲಕ್ಷಿಸುತ್ತಿರುವುದು ಎದ್ದು ಕಾಣುತ್ತಿದೆ. ಕೆ. ಸುರೇಶ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಿದ್ದರೆ ಇಡೀ ದಲಿತ ಸಮುದಾಯ ಐತಿಹಾಸಿಕ ಘಟನೆಗೆ ಸಾಕ್ಷಿಯಾಗುತ್ತಿತ್ತು. ಅಂತಹ ಹಿರಿಯರನ್ನು ಕಡೆಗಣಿಸುವ ಮೂಲಕ ಬಿಜೆಪಿ ದಲಿತ ಸಮುದಾಯವನ್ನು ನಿರ್ಲಕ್ಷಿಸಿದೆ. ಹಂಗಾಮಿ ಸ್ಪೀಕರ್ ನೇಮಕ ಸಾಂವಿಧಾನಿಕ ನಿಬಂಧನೆಗಳ ಸ್ಪಷ್ಟ ಉಲ್ಲಂಘನೆ. ಅಧಿವೇಶನದ ಮೊದಲ ದಿನವೇ ನರೇಂದ್ರ ಮೋದಿ ಸರ್ಕಾರದಿಂದ ಸಂವಿಧಾನ ಉಲ್ಲಂಘನೆಯಾಗಿದೆ ಎಂದು ಇಂಡಿಯಾ ಬ್ಲಾಕ್ ನಾಯಕರು ಕಿಡಿಕಾರಿದರು.
ಎನ್‌ಡಿಎ ಸರ್ಕಾರ ಲೋಕಸಭೆಯ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಕಾಂಗ್ರೆಸ್ ಸಂಸದ ಕೆ. ಸುರೇಶ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಎಂಟು ಬಾರಿ ಲೋಕಸಭಾ ಸಂಸದನಾಗಿದ್ದೇನೆ. ಏಳು ಬಾರಿಯ ಸಂಸದರನ್ನು ಹಂಗಾಮಿ ಸ್ಪೀಕರ್ ಮಾಡಲಾಗಿದೆ. ಸಾಂವಿಧಾನಿಕ ನಿಬಂಧನೆಗಳ ಸ್ಪಷ್ಟ ಉಲ್ಲಂಘನೆ ಎಂದು ಆರೋಪಿಸಿದರು.
ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಹತಾಬ್‌ಗೆ ಪ್ರಮಾಣವಚನ ಬೋಧಿಸಿದರು. ಇಂದು ಆರಂಭವಾಗಲಿರುವ ಲೋಕಸಭೆ ಅಧಿವೇಶನದ ಅಧ್ಯಕ್ಷತೆ ವಹಿಸಲು ಮಹತಾಬ್ ಸಜ್ಜಾಗಿದ್ದು, ಹೊಸದಾಗಿ ಚುನಾಯಿತ ಸಂಸದರ ಪ್ರಮಾಣವಚನ ಸ್ವೀಕಾರ ಸಮಾರಂಭದ ಉಸ್ತುವಾರಿ ವಹಿಸಲಿದ್ದಾರೆ. ಜೂನ್ 27 ರಂದು, ರಾಷ್ಟ್ರಪತಿಗಳು ಉಭಯ ಸದನಗಳ ಜಂಟಿ ಸಭೆಯನ್ನು ಉದ್ದೇಶಿಸಿ ಸಂಸತ್ತಿನಲ್ಲಿ ಮಾತನಾಡಲಿದ್ದಾರೆ. ಇದು 18ನೇ ಲೋಕಸಭೆಯ ಸಾರ್ವತ್ರಿಕ ಚುನಾವಣೆಯ ನಂತರದ ಮೊದಲ ಅಧಿವೇಶನವಾಗಿದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) 293 ಸ್ಥಾನಗಳನ್ನು ಪಡೆದುಕೊಂಡರೆ, ಇಂಡಿಯಾ ಬ್ಲಾಕ್ 234 ಮತ್ತು ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದುಕೊಂಡಿದೆ.
ಇದನ್ನೂ ಓದಿ: LIVE: ಲೋಕಸಭಾ ಕಲಾಪ; ಪ್ರಧಾನಿ ಮೋದಿ 3.0 ಸರ್ಕಾರದ ಮೊದಲ ಅಧಿವೇಶನ - Parliament Session 2024