ಚೆನ್ನೈ: ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ತಿರುಚೆಂದೂರ್ ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿ ಮರಳುತ್ತಿದ್ದ ಪ್ರವಾಸಿಗರಿದ್ದ ವಾಹನ ಇಂದು ಬೆಳಗ್ಗೆ ಭೀಕರ ರಸ್ತೆ ಅಪಘಾತಕ್ಕೆ ತುತ್ತಾಗಿದ್ದು, ಆರು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 16 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಭಾರಿ ಮಳೆಯಿಂದಾಗಿ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿದ್ದೇ ಅವಘಡಕ್ಕೆ ಕಾರಣ ಎಂದು ಹೇಳಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಗಳು, "ದೇಗುಲ ದರ್ಶನ ಮುಗಿಸಿ ಪ್ರವಾಸಿಗರು ವ್ಯಾನ್‌ನಲ್ಲಿ ಹಿಂದಿರುಗುತ್ತಿದ್ದರು. ಉಲುಂದೂರುಪೇಟೆಯ ಮೆಟ್ಟತ್ತೂರು ಗ್ರಾಮದ ರಸ್ತೆಯಲ್ಲಿ ಸಾಗುತ್ತಿದ್ದಾಗ ಜೋರು ಮಳೆ ಸುರಿದಿದೆ. ಚಾಲಕನ ನಿಯಂತ್ರಣ ಕಳೆದುಕೊಂಡು ವಾಹನ ಮರಕ್ಕೆ ಗುದ್ದಿದೆ. ಗಾಯಗೊಂಡ ಜನರ ಆಕ್ರಂದನ ಕೇಳಿ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಮತ್ತು ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ಭಾಗಿಯಾದರು" ಎಂದು ತಿಳಿಸಿದರು.
"ಗಾಯಗೊಂಡ 16 ಮಂದಿಯನ್ನು ಉಳುಂದೂರುಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರು ಮತ್ತು ಗಾಯಾಳುಗಳ ಗುರುತು ಪತ್ತೆಯಾಗಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ" ಎಂದು ಪೊಲೀಸರು ಮಾಹಿತಿ ನೀಡಿದರು.
ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿ ನಾಲ್ಕು ಅಪಘಾತದಲ್ಲಿ ಒಂದು ಸಾವು ವರದಿಯಾಗುತ್ತಿದೆ. ಶೇ 25ರಷ್ಟು ಅಪಘಾತಗಳು ಮಾರಣಾಂತಿಕವಾಗಿವೆ. ಕಳೆದ ವರ್ಷ ಸಂಭವಿಸಿದ ಒಟ್ಟು ಅಪಘಾತದಲ್ಲಿ ಚೆನ್ನೈ ಮತ್ತು ಕೊಯಮತ್ತೂರು ಮೊದಲ ಸ್ಥಾನದಲ್ಲಿದೆ. ಇಲ್ಲಿ ಕಳೆದ ವರ್ಷ 3,642 ಅಪಘಾತ ಸಂಭವಿಸಿದೆ. ಈ ಪೈಕಿ ಚೆಂಗಲ್ಪಟ್ಟು 3,387, ತಿರುಪ್ಪೂರ್ 3,292 ಮತ್ತು ಸೇಲಂ 3,174 ಅಪಘಾತಗಳು ಜರುಗಿವೆ ಎಂದು ಪೊಲೀಸ್ ಇಲಾಖೆಯ ಅಂಕಿಅಂಶಗಳು ಹೇಳುತ್ತಿವೆ.
ರಾಜ್ಯ ಅಪರಾಧ ದಾಖಲೆಗಳ ಬ್ಯೂರೋ ಮಾಹಿತಿ ಪ್ರಕಾರ, 2019ರಲ್ಲಿ ತಮಿಳುನಾಡಿನಲ್ಲಿ 62,685 ಅಪಘಾತಗಳಿಂದ ಒಟ್ಟು 18,129 ಜನ ಸಾವನ್ನಪ್ಪಿದರೆ, 2018ರಲ್ಲಿ 67,279 ಅಪಘಾತಗಳಿಂದ 18,392 ಸಾವು ಸಂಭವಿಸಿದೆ.(ಐಎಎನ್ಎಸ್)
ಇದನ್ನೂ ಓದಿ: ತೇಲುವ ಮನೆ ನಿರ್ಮಿಸಿದ ಯುವಕ: ಪ್ರವಾಹದಲ್ಲೂ ಮುಳುಗಲ್ಲ ಈ ಮನೆ, ನಿರಾಶ್ರಿತರಿಗೆ ಆಗುತ್ತೆ ಅನುಕೂಲ; ವೆಚ್ಚ ಎಷ್ಟು ಗೊತ್ತೆ?