ಹಾಪುರ್(ಉತ್ತರ ಪ್ರದೇಶ): ವೇಗದೂತ ಕಾರು ಡಿವೈಡರ್ ಎಗರಿ ಎದುರಿನಿಂದ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿಯಾಗಿ ಆರು ಮಂದಿ ಸ್ಥಳದಲ್ಲೇ ಅಸುನೀಗಿದ ಘಟನೆ ಉತ್ತರ ಪ್ರದೇಶದ ಹಾಪುರ್ ಎಂಬಲ್ಲಿನ ಗಢ್ ಕೊತ್ವಾಲಿ ಪ್ರದೇಶದಲ್ಲಿ ಕಳೆದ ರಾತ್ರಿ ನಡೆದಿದೆ. ಕಾರಿನಲ್ಲಿ ಒಟ್ಟು 7 ಮಂದಿ ಪ್ರಯಾಣಿಸುತ್ತಿದ್ದು, ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತಕ್ಕೀಡಾದ ಕಾರು ಮೊರಾದಾಬಾದ್‌ನಿಂದ ದೆಹಲಿಯ ಕಡೆಗೆ ಗಢ್ ಕೊತ್ವಾಲಿ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿತ್ತು. ಬ್ರಿಜ್‌ಘಾಟ್ ಟೋಲ್ ಪ್ಲಾಜಾ ಸಮೀಪದ ಡಿವೈಡರ್ ಹಾರಿದ ಕಾರು ಇನ್ನೊಂದು ಬದಿಗೆ ನುಗ್ಗಿದೆ. ಆ ರಸ್ತೆ ಮಾರ್ಗದಲ್ಲಿ ಬರುತ್ತಿದ್ದ ಟ್ರಕ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ.
ಅಪಘಾತದ ಬಳಿಕ ಸ್ಥಳದಲ್ಲಿ ಜನ ಜಮಾಯಿಸಿದ್ದರು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ವಲ್ಪ ಹೊತ್ತಿನಲ್ಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು.
"ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಆರು ಮಂದಿ ಸಾವನ್ನಪ್ಪಿದ್ದಾರೆ. ಓರ್ವ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಎಎಸ್ಪಿ ರಾಜಕುಮಾರ್ ಅಗರ್ವಾಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಮೃತಪಟ್ಟವರ ಗುರುತು ಪತ್ತೆಯಾಗಿಲ್ಲ. ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಕಾರಿನ ಟೈರ್ ಒಡೆದು ಸಮತೋಲನ ಕಳೆದುಕೊಂಡು ಘಟನೆ ನಡೆದಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಇದನ್ನೂ ಓದಿ: ಟಿಫಿನ್ ಸೆಂಟರ್‌ಗೆ ಬಸ್ ನುಗ್ಗಿ ಮತ ಹಾಕಲು ತೆರಳುತ್ತಿದ್ದ ಒಂದೇ ಕುಟುಂಬದ ಮೂವರು ಸಾವು - Telangana Bus Accident