ನವದೆಹಲಿ: ಪ್ರಪಂಚದ ಪ್ರಭಾವಶಾಲಿ ಪಾಸ್ಪೋರ್ಟ್ಗಳ ಪಟ್ಟಿಯಲ್ಲಿ ಸಿಂಗಾಪುರ ಮತ್ತೊಮ್ಮೆ ಅಗ್ರಸ್ಥಾನ ಪಡೆದುಕೊಂಡಿದೆ. ಕಳೆದ ಬಾರಿ 84ನೇ ಸ್ಥಾನ ಹೊಂದಿದ್ದ ಭಾರತ ಈ ಬಾರಿ ಎರಡು ಸ್ಥಾನ ಸುಧಾರಣೆ ಕಂಡು 82ನೇ ಸ್ಥಾನ ಗಳಿಸಿದೆ. 58 ರಾಷ್ಟ್ರಗಳಿಗೆ ವೀಸಾ ಇಲ್ಲದೇ ಭಾರತೀಯ ಪಾಸ್‌ಪೋರ್ಟ್ ಮೂಲಕ ಪ್ರಯಾಣಿಸಬಹುದು. ಇದೇ ವೇಳೆ, ನೆರೆಯ ಪಾಕಿಸ್ತಾನದ ಪಾಸ್‌ಪೋರ್ಟ್ ಜಾಗತಿಕವಾಗಿ ನಾಲ್ಕನೇ ಅತ್ಯಂತ ಕಳಪೆ ಸ್ಥಾನ ಪಡೆದಿದೆ.
ಇತ್ತೀಚಿನ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದ ಪ್ರಕಾರ, ದಾಖಲೆಯ 195 ದೇಶಗಳಿಗೆ ವೀಸಾಮುಕ್ತ ಪ್ರವೇಶ ನೀಡುವ ಸಿಂಗಾಪುರದ ಪಾಸ್‌ಪೋರ್ಟ್ ಮತ್ತೊಮ್ಮೆ ಅಗ್ರಸ್ಥಾನ ಗಿಟ್ಟಿಸಿಕೊಂಡಿದೆ. ಎರಡನೇ ಸ್ಥಾನವನ್ನು ಜರ್ಮನಿ, ಇಟಲಿ, ಜಪಾನ್, ಫ್ರಾನ್ಸ್, ಮತ್ತು ಸ್ಪೇನ್ ಜಂಟಿಯಾಗಿ ಪಡೆದುಕೊಂಡಿವೆ. ಈ ರಾಷ್ಟ್ರಗಳ ಪ್ರತಿಯೊಂದು ಪಾಸ್‌ಪೋರ್ಟ್ 192 ದೇಶಗಳಿಗೆ ಮುಕ್ತ ಪ್ರವೇಶ ಒದಗಿಸುತ್ತದೆ.
ಯುಎಸ್ ಪಾಸ್ಪೋರ್ಟ್ಗೆ 8ನೇ ಸ್ಥಾನ: ಆಸ್ಟ್ರಿಯಾ, ಫಿನ್‌ಲ್ಯಾಂಡ್, ಐರ್ಲೆಂಡ್, ಲಕ್ಸೆಂಬರ್ಗ್, ನೆದರ್ಲ್ಯಾಂಡ್ಸ್, ದಕ್ಷಿಣ ಕೊರಿಯಾ ಮತ್ತು ಸ್ವೀಡನ್ ರಾಷ್ಟ್ರಗಳ ಪಾಸ್‌ಪೋರ್ಟ್ ಮೂರನೇ ಸ್ಥಾನದಲ್ಲಿದ್ದು, 191 ದೇಶಗಳಿಗೆ ವೀಸಾ ಮುಕ್ತ ಪ್ರವೇಶ ನೀಡುತ್ತದೆ. ಬ್ರಿಟನ್ ದೇಶವು ಬೆಲ್ಜಿಯಂ, ಡೆನ್ಮಾರ್ಕ್, ನ್ಯೂಜಿಲೆಂಡ್, ನಾರ್ವೆ ಮತ್ತು ಸ್ವಿಟ್ಜರ್ಲೆಂಡ್‌ನೊಂದಿಗೆ ನಾಲ್ಕನೇ ಸ್ಥಾನವನ್ನು ಹಂಚಿಕೊಂಡಿದೆ. ಈ ದೇಶಗಳ ಪಾಸ್‌ಪೋರ್ಟ್ 190 ರಾಷ್ಟ್ರಗಳಿಗೆ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಅಮೆರಿಕದ ಪಾಸ್‌ಪೋರ್ಟ್ 186 ರಾಷ್ಟ್ರಗಳಿಗೆ ಮುಕ್ತ ಪ್ರವೇಶ ಒದಗಿಸುವುದರೊಂದಿಗೆ 8ನೇ ಸ್ಥಾನ ಪಡೆದುಕೊಂಡಿದೆ.
ಟಾಪ್ 10ರಲ್ಲಿ ಯುಎಇ: ಗಮನಾರ್ಹ ವಿಚಾರವೆಂದರೆ, ಟಾಪ್ 10 ಪ್ರಭಾವಶಾಲಿ ಪಾಸ್ಪೋರ್ಟ್ಗಳ ಪಟ್ಟಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮೊದಲ ಬಾರಿಗೆ ಸ್ಥಾನ ಗಳಿಸಿದೆ. 2006ರಲ್ಲಿ ಈ ಸೂಚ್ಯಂಕ ಪ್ರಾರಂಭವಾದಾಗ ಯುಎಇ 152ನೇ ಸ್ಥಾನ ಪಡೆದಿತ್ತು. ನಂತರ 62ನೇ ಸ್ಥಾನಗಳಿಗೆ ಸುಧಾರಣೆ ಕಂಡಿತ್ತು. ಪ್ರಸ್ತುತ 9ನೇ ಸ್ಥಾನ ಗಿಟ್ಟಿಸಿಕೊಂಡಿರುವ ಯುಎಇ ಪಾಸ್‌ಪೋರ್ಟ್ 185 ದೇಶಗಳಿಗೆ ವೀಸಾ ಮುಕ್ತ ಪ್ರವೇಶ ನೀಡುತ್ತಿದೆ.
ದುರ್ಬಲ ಪಾಸ್‌ಪೋರ್ಟ್ ರಾಷ್ಟ್ರಗಳು: ಪಾಕಿಸ್ತಾನದ ಪಾಸ್‌ಪೋರ್ಟ್ 100ನೇ ಸ್ಥಾನವನ್ನು ಯೆಮೆನ್‌ನೊಂದಿಗೆ ಹಂಚಿಕೊಂಡಿದೆ. 33 ದೇಶಗಳಿಗೆ ವೀಸಾ ಮುಕ್ತ ಪ್ರವೇಶವನ್ನು ಪಾಕ್ ನೀಡುತ್ತಿದೆ. ಆದರೆ, ಇರಾಕ್ (101), ಸಿರಿಯಾ (102), ಮತ್ತು ಅಫ್ಘಾನಿಸ್ತಾನ (103)ಗಿಂತ ಕೊಂಚ ಮುಂದಿದೆ. ಅಫ್ಘಾನಿಸ್ತಾನವು ವಿಶ್ವದ ದುರ್ಬಲ ಪಾಸ್‌ಪೋರ್ಟ್ ಆಗಿದ್ದು, ಕೇವಲ 26 ದೇಶಗಳಿಗೆ ವೀಸಾ ಮುಕ್ತ ಪ್ರವೇಶ ನೀಡುತ್ತಿದೆ. 19 ವರ್ಷಗಳಲ್ಲಿ ಇದುವರೆಗೆ ದಾಖಲಾದ ಅತ್ಯಂತ ಕಡಿಮೆ ಸ್ಥಾನ ಇದಾಗಿದೆ ಎಂದು ಹೆನ್ಲಿ ಸೂಚ್ಯಂಕ ತಿಳಿಸಿದೆ.
ಇದನ್ನೂ ಓದಿ: ಟೇಬಲ್ ಟಾಪ್ ವಿಮಾನ ನಿಲ್ದಾಣ ಎಂದರೇನು, ಇದಕ್ಕಿರುವ ಸವಾಲುಗಳೇನು?: ಇಲ್ಲಿದೆ ವಿಶ್ವದ ಅಪಾಯಕಾರಿ ಏರ್ಪೋರ್ಟ್ಗಳ ಪಟ್ಟಿ