ಹರಿದ್ವಾರ (ಉತ್ತರಾಖಂಡ): ವ್ಯಕ್ತಿಯ ಮರಣಾನಂತರ ಆತನ ಚಿತಾಭಸ್ಮವನ್ನು ಗಂಗೆಯಲ್ಲಿ ಲೀನಗೊಳಿಸದ ಹೊರತು ಆತನಿಗೆ ಮುಕ್ತಿ ಇಲ್ಲ ಎಂಬುದು ಸನಾತನ ಧರ್ಮದ ನಂಬಿಕೆ. ಅನಾಥ ಶವಗಳಿಗೂ ಇದು ಅನ್ವಯಿಸುತ್ತದೆ. ಹೀಗಾಗಿ, ದೆಹಲಿಯ ದೇವೋತ್ಥಾನ ಸೇವಾ ಸಮಿತಿಯು ಅನಾಥ ಶವಗಳ ಚಿತಾಭಸ್ಮಾವನ್ನು ಗಂಗಾ ನದಿಯಲ್ಲಿ ತರ್ಪಣ ಬಿಡುವ ಕೆಲಸವನ್ನು ಮಾಡುತ್ತಿದೆ. ಸಂಘಟನೆಯು ಸೆಪ್ಟೆಂಬರ್ 28 ರಂದು 4,128 ಅನಾಥ ಶವಗಳ ಚಿತಾಭಸ್ಮವನ್ನು ಹರಿದ್ವಾರದಲ್ಲಿ ಗಂಗಾ ನದಿಯಲ್ಲಿ ತರ್ಪಣ ನೀಡಿದೆ.
ದೇವೋತ್ಥಾನ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯ್ ಶರ್ಮಾ ಮಾತನಾಡಿ, ತಮ್ಮ ಸಂಸ್ಥೆಯು ಕಳೆದ 23 ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಿದೆ. ಈವರೆಗೂ 1 ಲಕ್ಷದ 65 ಸಾವಿರದ 289 ಅನಾಥ ಶವಗಳ ಚಿತಾಭಸ್ಮವನ್ನು ಗಂಗಾ ನದಿಯಲ್ಲಿ ಲೀನ ಮಾಡಿದೆ. ಸಮಿತಿಯು ದೇಶದಾದ್ಯಂತ ಈ ಕೆಲಸವನ್ನು ಮಾಡುತ್ತದೆ ಎಂದು ತಿಳಿಸಿದರು.
ವಾರಸುದಾರರು ಇಲ್ಲದ ಅದೆಷ್ಟೋ ಶವಗಳ ಚಿತಾಭಸ್ಮವನ್ನು ಸಂಗ್ರಹಿಸಿ, ತರ್ಪಣ ನೀಡಲಾಗುತ್ತದೆ. ಸೆಪ್ಟೆಂಬರ್ 28ರಂದು ಸಮಿತಿಯಿಂದ ದೇಶಾದ್ಯಂತ ಸಂಗ್ರಹಿಸಿದ ಸುಮಾರು 4,128 ಜನರ ಚಿತಾಭಸ್ಮವನ್ನು ಸಂಪೂರ್ಣ ವಿಧಿ ವಿಧಾನಗಳೊಂದಿಗೆ ಹರಿದ್ವಾರದ ಕಂಖಾಲ್‌ನ ಸತಿ ಘಾಟ್‌ನಲ್ಲಿ ಗಂಗಾನದಿಯಲ್ಲಿ ವಿಸರ್ಜನೆ ಮಾಡಲಾಯಿತು ಎಂದು ಮಾಹಿತಿ ನೀಡಿದರು.
ಈ ವರ್ಷ 4,128 ಚಿತಾಭಸ್ಮ ವಿಸರ್ಜನೆ ಮಾಡಿದ್ದೇವೆ. ಸನಾತನ ಧರ್ಮದ ಸಾಂಸ್ಕೃತಿಕ ಮತ್ತು ಪೌರಾಣಿಕ ಮೌಲ್ಯವನ್ನು ಇಂದಿನ ಯುವ ಪೀಳಿಗೆಗೆ ನೆನಪಿಸುವುದು ನಮ್ಮ ಉದ್ದೇಶವಾಗಿದೆ. ಸ್ಮಶಾನದಲ್ಲಿ ಚಿತಾಭಸ್ಮವನ್ನು ಸಂಗ್ರಹಿಸುವಾಗ, ತುಂಬಾ ಶ್ರೀಮಂತ ಜನರ ಚಿತಾಭಸ್ಮವೂ ಸಹ ನೀಡಲಾಗಿದೆ. ಗಂಗೆಯಲ್ಲಿ ವಿಸರ್ಜನೆ ಮಾಡಲು ಆಗದವರು ಕೂಡ ತಮ್ಮವರ ಚಿತಾಭಸ್ಮವನ್ನು ನೀಡಿದ್ದಾರೆ ಎಂದರು.
ಸಂಸ್ಥೆಯ ಅಧ್ಯಕ್ಷ ಅನಿಲ ನರೇಂದ್ರ ಮಾತನಾಡಿ, ನಮ್ಮ ಪುರಾಣಗಳಲ್ಲಿ ಮೂರು ರೀತಿಯ ಋಣಗಳನ್ನು ತಿಳಿಸಲಾಗಿದೆ. ದೇವಋಣ, ಋಷಿಋಣ ಮತ್ತು ಪಿತ್ರಾ ಋಣ. ಇಂದು ನಾವೆಲ್ಲರೂ ಈ ಸ್ಥಾನವನ್ನು ತಲುಪಿರುವುದು ನಮ್ಮ ಪೂರ್ವಜರಿಂದಲೇ. ಇದರಲ್ಲಿ ದೊಡ್ಡ ಕೊಡುಗೆ ಪೂರ್ವಜರದ್ದು. ಶ್ರಾದ್ಧ ಪಕ್ಷದಲ್ಲಿ ಪೂರ್ವಜರು ಭೂಮಿಗೆ ಹತ್ತಿರವಾಗುತ್ತಾರೆ. ಈ ಸಮಯದಲ್ಲಿ ಅವರ ಸೇವೆ ಮಾಡುವುದು, ಗೌರವ ಸಲ್ಲಿಸಿ ಆಶೀರ್ವಾದ ಪಡೆಯಬೇಕು ಎಂದರು.