ದೆಹಲಿ: ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದ ಶಾಸಕಿ, ಶಿಬು ಸೊರೆನ್ ಅವರ ಹಿರಿಯ ಸೊಸೆ ಸೀತಾ ಮುರ್ಮು ಸೊರೆನ್ ಅವರು ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇಂದು ಬೆಳಗ್ಗೆ ತಮ್ಮ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದ ಸೀತಾ ಸೊರೆನ್, ಇದೀಗ ದೆಹಲಿಯಲ್ಲಿ ಕಮಲ ಮುಡಿದಿದ್ದಾರೆ.
ಸತತ ಮೂರು ಬಾರಿ ಜೆಎಂಎಂ ಪಕ್ಷದಿಂದ ದುಮ್ಕಾದ ಜಮಾ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿದ್ದ ಸೀತಾ ಸೊರೆನ್ ಮಂಗಳವಾರ ಬೆಳಗ್ಗೆ ಪಕ್ಷದ ಅಧ್ಯಕ್ಷ ಹಾಗೂ ಮಾವ ಶಿಬು ಸೊರೆನ್ ಅವರಿಗೆ ಪತ್ರ ಬರೆದು ತಮ್ಮ ನಿರ್ಧಾರ ತಿಳಿಸಿದ್ದರು. ಪತ್ರದಲ್ಲಿ ಜೆಎಂಎಂನ ಸಕ್ರಿಯ ಸದಸ್ಯತ್ವ ಮತ್ತು ಕೇಂದ್ರ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಸೀತಾ ಸೊರೆನ್ ಅವರು ಮೊದಲ ಬಾರಿಗೆ 2009ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಶಾಸಕಿಯಾಗಿದ್ದರು. ನಂತರ 2014 ಹಾಗೂ 2019ರಲ್ಲಿ ಚುನಾವಣೆ ಗೆಲುವು ಸಾಧಿಸಿದ್ದರು.
ಈ ಬಗ್ಗೆ ಬಿಜೆಪಿ ಕಾರ್ಯದರ್ಶಿ ವಿನೋದ್ ತಾವ್ಡೆ ಅವರು ಮಾತನಾಡಿ, "ಜಾರ್ಖಂಡ್ನ ಇನ್ನೊಬ್ಬ ನಾಯಕಿ ಸಹೋದರಿ ಸೀತಾ ಸೊರೆನ್ ಅವರು ಈಗ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿಗೆ ಸೀತಾ ಸೇರ್ಪಡೆಯಿಂದ ಪಕ್ಷದ ಬಲ ಹೆಚ್ಚಾಗುವುದು ನಿಶ್ಚಿತ. ಅದರ ಪರಿಣಾಮ 2024ರ ಲೋಕಸಭಾ ಚುನಾವಣೆಯಲ್ಲಿ ಗೋಚರಿಸಲಿದೆ. ಜಾರ್ಖಂಡ್ನಲ್ಲಿ ನಾವು ಶಕ್ತಿಶಾಲಿಯಾಗುತ್ತಿದ್ದೇವೆ. ಆದಿವಾಸಿಗಳ ಅಭ್ಯುದಯಕ್ಕೆ ನಮ್ಮ ಸಂಪೂರ್ಣ ಶಕ್ತಿಯನ್ನು ಬಳಸುತ್ತೇವೆ" ಎಂದು ಹೇಳಿದರು.
ಸಂಸದ ಲಕ್ಷ್ಮೀಕಾಂತ್ ಭಾಜಪೇಯಿ ಮಾತನಾಡಿ, "ಸೀತಾ ಸೊರೆನ್ ಅವರು ಜೆಎಂಎಂನಲ್ಲಿದ್ದಾಗ ಭ್ರಷ್ಟಾಚಾರದ ವಿರುದ್ಧ ಹೋರಾಡಿದ್ದಾರೆ. ದೆಹಲಿಯವರೆಗೂ ಅವರು ಅದರ ವಿರುದ್ಧ ಧ್ವನಿ ಎತ್ತಿದ್ದಾರೆ. ಅವರ ಹೋರಾಟದ ಶಕ್ತಿ ನಮ್ಮ ಪಕ್ಷ್ಕೆ ಬಲವಾಗಲಿದೆ" ಎಂದರು.
ಬಿಜೆಪಿ ಸೇರ್ಪಡೆ ಬಳಿಕ ಸೀತಾ ಮಾತು: ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಸೀತಾ ಸೊರೆನ್, "ಇಂದು ನಾನು ಮೋದೀಜಿ ಅವರ ದೊಡ್ಡ ಕುಟುಂಬವನ್ನು ಸೇರಿಕೊಂಡಿದ್ದೇನೆ. ಮೋದಿ ಆಡಳಿತದಲ್ಲಿ ದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಆ ಅಭಿವೃದ್ಧಿ ಕಾರ್ಯಗಳಲ್ಲಿ ನಾವೂ ಕೈಜೋಡಿಸಬೇಕಿದೆ. ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ರೀತಿ ನೋಡಿ, ಇಂದು ಎಲ್ಲರೂ ಮೋದಿ ಪರಿವಾರಕ್ಕೆ ಸೇರಬೇಕೆಂದು ಬಯಸುತ್ತಾರೆ. ಹಾಗೆಯೇ ನಾನೂ ಈಗ ಮೋದಿ ಪರಿವಾರಕ್ಕೆ ಸೇರ್ಪಡೆಯಾಗಿದ್ದೇನೆ" ಎಂದರು.
"ಜಾರ್ಖಂಡ್ನಲ್ಲಿ ನಾನೂ ಸಾಕಷ್ಟು ಹೋರಾಟ ಮಾಡಿದ್ದೇನೆ. 14 ವರ್ಷಗಳಿಂದ ನಾನು ಜೆಎಂಎಂನಲ್ಲಿಯೇ ಇದ್ದೆ" ಎಂದು ತಮ್ಮ ಮಾವ ಶಿಬು ಸೊರೆನ್ ಹಾಗೂ ಪತಿ ದುರ್ಗಾ ಸೊರೆನ್ ಅವರನ್ನು ನೆನಪಿಸಿಕೊಂಡರು.
"ಪತಿಯ ಕನಸನ್ನು ನನಸು ಮಾಡಲು ಜೆಎಂಎಂ ಮೂಲಕ ರಾಜಕೀಯ ಪ್ರವೇಶಿಸಿದೆ. ಆದರೆ ಜಾರ್ಖಂಡ್ ಇನ್ನೂ ತಲುಪಬೇಕಾದ ಹಂತವನ್ನು ತಲುಪಿಲ್ಲ. ಜಾರ್ಖಂಡ್ ಇನ್ನೂ ಅಭಿವೃದ್ಧಿಯಿಂದ ದೂರಿದೆ. ಜಾರ್ಖಂಡ್ ಅನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಲು ಬಯಸಿದ್ದು, ಅದಕ್ಕಾಗಿಯೇ ನಾನು ಬಿಜೆಪಿಗೆ ಸೇರಿದ್ದೇನೆ " ಎಂದು ಹೇಳಿದರು.
ಇದನ್ನೂ ಓದಿ: ಠಾಕ್ರೆ ಕುಟುಂಬದ ಮತ್ತೊಂದು ಕುಡಿ ಚುನಾವಣಾ ಅಖಾಡಕ್ಕೆ: ಯಾರವರು?