ಕೋಲ್ಕತ್ತಾ(ಪಶ್ಚಿಮ ಬಂಗಾಳ): ಬಿಹಾರದ ರಾಜಕೀಯ ಅನಿಶ್ಚಿತತೆಯ ಮಧ್ಯೆ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು 'ಇಂಡಿಯಾ' ಮೈತ್ರಿಕೂಟ ಬಣದಲ್ಲಿ ಸೀಟು ಹಂಚಿಕೆ ವಿಚಾರದ ಬಗ್ಗೆ ಶನಿವಾರ ಪ್ರತಿಕ್ರಿಯಿಸಿದರು. ಲೋಕಸಭೆ ಚುನಾವಣೆಯಲ್ಲಿ ಕೇಂದ್ರ ಸರ್ಕಾರವನ್ನು ಬದಲಾಯಿಸುವುದು ಮೈತ್ರಿ ಕೂಟದ ಉದ್ದೇಶ. ಇದಕ್ಕೆ ಬೇಕಿರುವ ಸೀಟು ಹಂಚಿಕೆ ಕುರಿತು ಆಯಾ ರಾಜ್ಯಗಳ ಆಧಾರದ ಮೇಲೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.
''ಇಂಡಿಯಾ ಮೈತ್ರಿಕೂಟ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಸೀಟು ಹಂಚಿಕೆ ಸಮಸ್ಯೆಗಳನ್ನು ಪರಿಹರಿಸಲು ಗಮನಹರಿಸುವುದು ಅನಿವಾರ್ಯವಾಗಿದೆ. ಪ್ರತಿ ರಾಜ್ಯದಲ್ಲೂ ಸೀಟು ಹಂಚಿಕೆ ಕ್ರಮ ಬೇರೆ ಬೇರೆ ರೀತಿಯಾಗಿರುತ್ತದೆ. ಇದಕ್ಕೆ ಒಂದೇ ಸೂತ್ರ ಬಳಸಲು ಆಗುವುದಿಲ್ಲ'' ಎಂದರು.
ಸದ್ಯದ ಬಿಹಾರದ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಆಂತರಿಕ ಭಿನ್ನಾಭಿಪ್ರಾಯಗಳನ್ನೂ ಎದುರಿಸುವ ದೊಡ್ಡ ಸವಾಲು ಇಂಡಿಯಾ ಬಣಕ್ಕೆ ಎದುರಾಗಿದೆ. ಮತ್ತೊಂದೆಡೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ತಮ್ಮ ರಾಜ್ಯಗಳಲ್ಲಿ ಏಕಾಂಗಿಯಾಗಿ ಹೋರಾಡುವುದಾಗಿ ಈಗಾಗಲೇ ತಿಳಿಸಿದ್ದಾರೆ.
"ಸಂಪೂರ್ಣ ಮೈತ್ರಿ ಮತ್ತು ಸೀಟು ಹಂಚಿಕೆ ಕುರಿತು ರಾಜ್ಯವಾರು ಚರ್ಚೆ ನಡೆಯುತ್ತಿದೆ. ಎಲ್ಲಾ ರಾಜ್ಯಗಳಲ್ಲಿ ಒಂದೇ ರೀತಿಯ ಪರಿಹಾರವನ್ನು ಒದಗಿಸಲಾಗುವುದಿಲ್ಲ. ಪ್ರತಿ ರಾಜ್ಯದ ಕಥೆ ವಿಭಿನ್ನವಾಗಿದೆ'' ಎಂದು ತರೂರ್ ಹೇಳಿದರು.
ಮಮತಾ ಬ್ಯಾನರ್ಜಿ ಮತ್ತು ಭಗವಂತ್ ಮಾನ್ ತಮ್ಮ ತಮ್ಮ ರಾಜ್ಯಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದ ನಂತರ ಮೈತ್ರಿಕೂಟಕ್ಕೆ ಹಿನ್ನಡೆ ಉಂಟಾಗಿತ್ತು. ಈ ಮಧ್ಯೆ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿ ನೇತೃತ್ವದ ಎನ್‌ಡಿಎಗೆ ಮರಳುವ ನಿರ್ಧಾರ ಕೈಗೊಂಡಿರುವುದು ವಿಪಕ್ಷಗಳ ಮೈತ್ರಿಗೆ ಮತ್ತೊಂದು ಬಲವಾದ ಪೆಟ್ಟು ನೀಡಿದೆ.
ಇದನ್ನೂ ಓದಿ: ನಾಳೆ ಸಿಎಂ ಸ್ಥಾನಕ್ಕೆ ನಿತೀಶ್ಕುಮಾರ್ ರಾಜೀನಾಮೆ: ಬಿಜೆಪಿ ಜೊತೆ ಅಂದೇ ಸರ್ಕಾರ ರಚನೆ ಸಾಧ್ಯತೆ