ನವದೆಹಲಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಬಣವೇ ನಿಜವಾದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಎಂದು ಅಧಿಕೃತವಾಗಿ ಗುರುತಿಸಿರುವ ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿ ಶರದ್ ಪವಾರ್ ಬಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಫೆಬ್ರವರಿ 6ರಂದು ಚುನಾವಣಾ ಆಯೋಗವು ಅಜಿತ್ ಪವಾರ್ ನೇತೃತ್ವದ ಬಣವನ್ನು ನಿಜವಾದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವೆಂದು ಘೋಷಿಸಿತ್ತು. ಅಲ್ಲದೆ ಪಕ್ಷದ ಚಿಹ್ನೆಯಾದ 'ಗೋಡೆ ಗಡಿಯಾರ' ವನ್ನೂ ನೀಡಿತ್ತು. ಇದರಿಂದ ಪಕ್ಷದ ಸಂಸ್ಥಾಪಕ ಶರದ್ ಪವಾರ್ ಅವರಿಗೆ ಭಾರೀ ಹಿನ್ನಡೆಯಾಗಿತ್ತು. ಇದೀಗ ಚುನಾವಣಾ ಆಯೋಗದ ಆದೇಶ ಪ್ರಶ್ನಿಸಿ, ಶರದ್ ಪವಾರ್ ಬಣ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಶರದ್ ಪವಾರ್ ಬಣ ಕಳೆದ ವಾರವೇ ಹೇಳಿತ್ತು.
ಸೋಮವಾರ ಸಂಜೆ ವಕೀಲ ಅಭಿಷೇಕ್ ಜೆಬರಾಜ್ ಅವರ ಮೂಲಕ ಹಿರಿಯ ನಾಯಕ ಶರದ್ ಪವಾರ್ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಅಜಿತ್ ಪವಾರ್ ಅವರ ಬಣ, ವಕೀಲ ಅಬಿಕಲ್ಪ್ ಪ್ರತಾಪ್ ಸಿಂಗ್ ಅವರ ಮೂಲಕ ಕೇವಿಯಟ್ ಸಲ್ಲಿಸಿದೆ. ಚುನಾವಣಾ ಆಯೋಗದ ನಿರ್ಧಾರದ ಸಂಬಂಧ ಶರದ್ ಪವಾರ್ ಅವರ ಬಣ ಯಾವುದೇ ಅರ್ಜಿ ಸಲ್ಲಿಸಿದರೂ, ಆ ಅರ್ಜಿಯ ವಿಚಾರಣೆಗೂ ಮುನ್ನ ನಮ್ಮ ವಾದವನ್ನು ಆಲಿಸಬೇಕು ಎಂದು ಕೇವಿಯಟ್ನಲ್ಲಿ ಕೋರಿದೆ.
ಮಹಾರಾಷ್ಟ್ರದಲ್ಲಿ ಮುಂಬರುವ ರಾಜ್ಯಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಆಯೋಗವು ಶರದ್ ಪವಾರ್ ಗುಂಪಿಗೆ, ಮೂರು ಹೆಸರುಗಳನ್ನು ಸೂಚಿಸುವಂತೆ ಫೆಬ್ರವರಿ 7 ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶ ನೀಡಿತ್ತು. ನಂತರ ಕಳೆದ ವಾರ ಶರದ್ ಪವಾರ್ ನೇತೃತ್ವದ ಎನ್ಸಿಪಿ ಬಣಕ್ಕೆ 'ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಶರದ್ಚಂದ್ರ ಪವಾರ್' ಎಂದು ಹೊಸ ಹೆಸರನ್ನು ಚುನಾವಣಾ ಆಯೋಗ ಹಂಚಿಕೆ ಮಾಡಿತ್ತು.
ಕಳೆದ ವರ್ಷ ಜುಲೈನಲ್ಲಿ ಎನ್ಸಿಪಿ ಎರಡು ಭಾಗವಾಗಿ, ಅಜಿತ್ ಪವಾರ್ ನೇತೃತ್ವದಲ್ಲಿ ಬಹುತೇಕ ಶಾಸಕರು ಏಕನಾಥ ಶಿಂಧೆ ನೇತೃತ್ವದ ಬಿಜೆಪಿ- ಶಿವಸೇನಾ ಮೈತ್ರಿ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದರು. ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಬಹುಪಾಲು ಎನ್ಸಿಪಿ ಶಾಸಕರೊಂದಿಗೆ ವಿಧಾನಸಭೆಯಿಂದ ಹೊರನಡೆದಿದ್ದ ಅಜಿತ್ ನೇತೃತ್ವದ ಗುಂಪಿಗೆ ಚುನಾವಣಾ ಆಯೋಗ ಪಕ್ಷದ ಹೆಸರು ಹಾಗೂ ಗೋಡೆ ಗಡಿಯಾರದ ಚಿಹ್ನೆಯನ್ನು ನೀಡಿದೆ.
ಇದನ್ನೂ ಓದಿ: ಅಜಿತ್ ಪವಾರ್ ಬಣವೇ ನಿಜವಾದ ಎನ್ಸಿಪಿ-ಚುನಾವಣಾ ಆಯೋಗ; ಶರದ್ ಪವಾರ್‌ಗೆ ಹಿನ್ನಡೆ