ಮುಂಬೈ: ಆರು ವಾರಗಳ ಕಾಲ ನಡೆದಿದ್ದ ಲೋಕಸಭೆ ಚುನಾವಣೆಯ ಫಲಿತಾಂಶ ನಿನ್ನೆ ದಿನ ಪ್ರಕಟಗೊಂಡಿದೆ. ಇದರಲ್ಲಿ ಎನ್‌ಡಿಎ 291 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಇಂಡಿಯಾ ಕೂಟ 234 ಸ್ಥಾನಗಳನ್ನು ಪಡೆಯುವ ಮೂಲಕ ಭರ್ಜರಿ ಪೈಪೋಟಿ ನೀಡಿದೆ. ಇದೀಗ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಲು ಎರಡೂ ಕೂಟಗಳು ಭಾರೀ ಕಸರತ್ತು ನಡೆಸುತ್ತಿವೆ.
ಈ ಹಿನ್ನೆಲೆ ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸಭೆ ಕರೆದಿದ್ದರೇ, ಮತ್ತೊಂದೆಡೆ ಇಂಡಿಯಾ ಮೈತ್ರಿ ಕೂಟವು ತಮ್ಮ ಮಿತ್ರ ಪಕ್ಷಗಳ ನಾಯಕರಿಗೆ ಸಭೆಗೆ ಆಹ್ವಾನಿಸಿವೆ. ಈ ಹಿನ್ನೆಲೆಯಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಬಾರಾಮತಿ ಸಂಸದೆ ಸುಪ್ರಿಯಾ ಸುಳೆ ಇಂದು ನಡೆಯಲಿರುವ ಇಂಡಿಯಾ ಕೂಟದ ಸಭೆಯಲ್ಲಿ ಭಾಗಿಯಾಗಲೂ ದೆಹಲಿಗೆ ತೆರಳಿದ್ದಾರೆ.
ಈ ಮಹತ್ವದ ಸಭೆಯಲ್ಲಿ ಸರ್ಕಾರ ಸ್ಥಾಪನೆಗೆ ಕಾರ್ಯತಂತ್ರ ರೂಪಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎನ್ನಲಾಗುತ್ತಿದೆ. ಬಿಜೆಪಿ ಬಹುಮತದ ಗುರಿ ಸಾಧಿಸಲು ಸಾಧ್ಯವಾಗದ ಕಾರಣ ಬಹುಮತಕ್ಕಾಗಿ ಎನ್‌ಡಿಎಯಲ್ಲಿನ ಮಿತ್ರಪಕ್ಷಗಳ ನೆರವು ಪಡೆಯಬೇಕಿದೆ. ಇಂಡಿಯಾ ಒಕ್ಕೂಟವು ಬಹುಮತದ ಅಂಕಿ - ಅಂಶವನ್ನು ತಲುಪಲು ಹೊಂದಾಣಿಕೆಗಳನ್ನು ಮಾಡಿಕೊಳ್ಳಲು ಕಸರತ್ತು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ನಡೆಯಲಿರುವ ಇಂಡಿಯಾ ಮತ್ತು ಎನ್‌ಡಿಎ ಮೈತ್ರಿಕೂಟದ ಸಭೆ ಮಹತ್ವ ಪಡೆದುಕೊಳ್ಳಲಿದೆ.
ನಿನ್ನೆಯ ದಿನ ಲೋಕಸಭೆ ಫಲಿತಾಂಶದ ನಂತರ ಪ್ರತಿಕ್ರಿಯಿಸಿದ್ದ ಶರದ್ ಪವಾರ್, ಈಗ ಬಂದಿರುವ ಫಲಿತಾಂಶ ಇನ್ನಷ್ಟು ಕೆಲಸ ಮಾಡಲು ಪ್ರೇರೇಪಿಸಿದೆ ಎಂದಿದ್ದರು. ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅತ್ತಿಗೆ ಸುನೇತ್ರ ಪವಾರ್ ವಿರುದ್ದ 1 ಲಕ್ಷ 58 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದು, ಈ ಗೆಲುವಿನ ನಂತರ ಮತದಾರರು ಶರದ್ ಪವಾರ್ ನಾಯಕತ್ವದಲ್ಲಿ ಎನ್‌ಸಿಪಿಗೆ ಆದ್ಯತೆ ನೀಡಿದ್ದಾರೆ ಎಂಬುದು ಸ್ಪಷ್ಟವಾಗಿದೆ.