ಕಟಕ್ (ಒಡಿಶಾ): ಅಪಾರ್ಟ್‌ಮೆಂಟ್‌ನ ಸೆಪ್ಟಿಕ್ ಟ್ಯಾಂಕ್ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟ ದಾರುಣ ಘಟನೆ ಒಡಿಶಾದ ಕಟಕ್‌ನ ಟ್ರಿಸುಲಿಯಾದಲ್ಲಿ ಶುಕ್ರವಾರ ನಡೆದಿದೆ. ಅಬು ತಹೀರ್ ಅಲಿ (36), ಅಲ್ಮಿನ್ ಶೇಖ್ (27) ಮತ್ತು ಕೃಷ್ಣ ಕಿಶೋರ್ ಸರ್ಕಾರ್ (38) ಮೃತ ದುರ್ದೈವಿಗಳು. ಮೃತರೆಲ್ಲರೂ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯವರಾಗಿದ್ದು, ದುಡಿಮೆಗಾಗಿ ಇಲ್ಲಿಗೆ ಆಗಮಿಸಿದ್ದರು.
''ನಾರನ್‌ಪುರ ಮತ್ತು ಬೆಲ್ ಗಚಿಹಾದಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಒಳಚರಂಡಿ ಟ್ಯಾಂಕ್‌ನ ಸೆಂಟ್ರಿಂಗ್ ತೆರೆಯಲು ಮೂವರು ಕಾರ್ಮಿಕರನ್ನು ಕರೆದುಕೊಂಡು ಬರಲಾಗಿತ್ತು. ಟ್ಯಾಂಕ್‌ನಲ್ಲಿ ಸರದಿಯಂತೆ ಮೊದಲು ಓರ್ವ, ಆ ಬಳಿಕ ಮತ್ತೋರ್ವ, ಕೊನೆಗೆ ಮತ್ತೋರ್ವ ಇಳಿಯುವುದಾಗಿ ಅವರೇ ಮಾತನಾಡಿಕೊಂಡಿದ್ದರು. ಅದರಂತೆ ಮೊದಲು ಕಾರ್ಮಿಕನೊಬ್ಬ ಟ್ಯಾಂಕ್‌ನಲ್ಲಿ ಇಳಿದಿದ್ದಾನೆ. ಈ ವೇಳೆ ತೊಟ್ಟಿಯೊಳಗೆ ಉಸಿರುಗಟ್ಟಿ ಆತ ಹಠಾತ್ ಕುಸಿದು ಬಿದ್ದಿದ್ದಾನೆ.
ಆತನ ರಕ್ಷಣೆಗೆ ಧಾವಿಸಿದ್ದ ಮತ್ತೊಬ್ಬ ಕಾರ್ಮಿಕನೂ ಪ್ರಜ್ಞೆ ತಪ್ಪಿದ್ದಾನೆ. ಇಬ್ಬರಿಂದ ಯಾವುದೇ ಸೂಚನೆ ಬರದ ಹಿನ್ನೆಲೆ ಮೂರನೇ ಕಾರ್ಮಿಕ ಕೂಡ ಟ್ಯಾಂಕ್‌ನಲ್ಲಿ ಇಳಿದಿದ್ದು, ಆತ ಕೂಡ ಪ್ರಜ್ಞೆ ತಪ್ಪಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಮೂವರನ್ನು ಆಸ್ಪತ್ರೆಗೆ ಸೇರಿಸಿ ರಕ್ಷಿಸುವ ಕೆಲಸ ಮಾಡಿದರಾದರೂ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು. ಸೆಪ್ಟಿಕ್ ಟ್ಯಾಂಕ್ ತುಂಬಾ ಕಿರಿದಾಗಿ ಇರುವುದರಿಂದ ಟ್ಯಾಂಕ್ ಒಳಗೆ ಇಳಿಯುತ್ತಿದ್ದಂತೆ ಉಸಿರುಗಟ್ಟಿ ಮೂವರು ಹೊರಬರಲಾಗದೇ ಅಲ್ಲಿಯೇ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿರುವುದಾಗಿ'' ಕಟಕ್ ಹೆಚ್ಚುವರಿ ಡಿಸಿಪಿ ಅನಿಲ್ ಮಿಶ್ರಾ ಮಾಹಿತಿ ನೀಡಿದ್ದಾರೆ.
"ಟ್ಯಾಂಕ್ ತುಂಬಾ ಆಳವಾಗಿದ್ದು, ಮೃತಪಟ್ಟ ಕಾರ್ಮಿಕರು ಯಾವುದೇ ಸುರಕ್ಷತಾ ಸಾಧನಗಳನ್ನು ಧರಿಸದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೂವರದ್ದು ಅಸ್ವಾಭಾವಿಕ ಸಾವುಗಳೆಂದು ಈ ಬಗ್ಗೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದ್ದು, ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಸಹ ಡಿಸಿಪಿ ತಿಳಿಸಿದ್ದಾರೆ.
"ಟ್ಯಾಂಕ್ ತುಂಬಾ ಕಿರಿದಾದ ಬಾಗಿಲು ಹೊಂದಿದ್ದರಿಂದ ನಾವು ಡ್ರಿಲ್ ಯಂತ್ರದಿಂದ ಗೋಡೆಯನ್ನು ಒಡೆದು ಟ್ಯಾಂಕ್ ಒಳಗೆ ಪ್ರವೇಶಿಸಿದಾಗ ಮೂವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ದುರದೃಷ್ಟವಶಾತ್ ರಕ್ಷಿಸುವ ಕೆಲಸ ಮಾಡಲಾಯಿತಾದರೂ ಬದುಕುಳಿಯಲಿಲ್ಲ" ಎಂದು ಅಗ್ನಿಶಾಮಕ ಸಿಬ್ಬಂದಿ ಬೇಸರ ಹೊರಹಾಕಿದರು.
ಇದನ್ನೂ ಓದಿ: ಮಣಿಪುರ ಹಿಂಸಾಚಾರ : ಉಗ್ರರು-ಶಸ್ತ್ರಸಜ್ಜಿತ ಪುರುಷರ ನಡುವೆ ಗುಂಡಿನ ಚಕಮಕಿ, ಐವರು ಸಾವು - MANIPUR VIOLENCE