ನವದೆಹಲಿ: ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಕಾನೂನನ್ನು ಸಮಗ್ರವಾಗಿ ಜಾರಿಗೆ ತರಬೇಕು ಎಂದು ಆಗ್ರಹಿಸಿ ಉತ್ತರಪ್ರದೇಶ, ಹರಿಯಾಣ, ಪಂಜಾಬ್ನ ರೈತರು ನಡೆಸುತ್ತಿರುವ ಹೋರಾಟ ದೆಹಲಿಯತ್ತ ಸಾಗಿದ್ದು, ಗಡಿಗಳಲ್ಲಿ ಭಾರೀ ಬಿಗಿ ಭದ್ರತೆ ಒದಗಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಂಬಂಧ ದೆಹಲಿಯಲ್ಲಿ ಇಂದಿನಿಂದ ಒಂದು ತಿಂಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ನಿಷೇಧಾಜ್ಞೆ ಜಾರಿ: ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ದೆಹಲಿಯ ಈಶಾನ್ಯ ಜಿಲ್ಲೆಯಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್ಪಿಸಿ) ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆಯನ್ನು ಹೊರಡಿಸಲಾಗಿದೆ. ರೈತಸಂಘಟನೆಗಳು ನಾಳೆಯಿಂದ ದೆಹಲಿಗೆ ಮೆರವಣಿಗೆ ಮೂಲಕ ಪ್ರವೇಶಿಸುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.
ದೆಹಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಸೋಮವಾರ ಹೊರಡಿಸಿದ ಆದೇಶದಲ್ಲಿ ಯಾವುದೇ ರೀತಿಯ ಪ್ರಚಾರ ಅಥವಾ ಮೆರವಣಿಗೆ ಮತ್ತು ರಸ್ತೆಗಳು, ಇತರ ಮಾರ್ಗಗಳನ್ನು ನಿರ್ಬಂಧಿಸುವುದನ್ನು ನಿಷೇಧಿಸಲಾಗಿದೆ. ಅಷ್ಟೇ ಅಲ್ಲ, ದೆಹಲಿ ಪೊಲೀಸರ ಆದೇಶದ ಪ್ರಕಾರ ರಾಷ್ಟ್ರ ರಾಜಧಾನಿಯ ಗಡಿಯನ್ನು ದಾಟಲು ಪ್ರಯತ್ನಿಸುವ ಟ್ರ್ಯಾಕ್ಟರ್ ರ್ಯಾಲಿಗಳ ಮೇಲೆ ನಿಷೇಧ ಹೇರಲಾಗಿದೆ.
ಸುಮಾರು 200 ರೈತ ಸಂಘಗಳು ಮತ್ತು ಹೆಚ್ಚಿನ ಸಂಖ್ಯೆಯ ರೈತರು ನಡೆಸುತ್ತಿರುವ 'ದೆಹಲಿ ಚಲೋ ರ್ಯಾಲಿ' ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್‌ನಿಂದ ರಾಷ್ಟ್ರ ರಾಜಧಾನಿಯನ್ನು ತಲುಪುವ ನಿರೀಕ್ಷೆಯಿದೆ. 2021 ರ ಘಟನಾವಳಿಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ನಿಗಾ ವಹಿಸಲಾಗಿದೆ. ಪ್ರತಿಭಟನೆಯ ವೇಳೆ ರೈತರು ಟ್ರ್ಯಾಕ್ಟರ್, ಟ್ರಾಲಿಗಳು, ಶಸ್ತ್ರಾಸ್ತ್ರಗಳೊಂದಿಗೆ ದೆಹಲಿಗೆ ಆಗಮಿಸುವ ಸಾಧ್ಯತೆ ಇದೆ. ಇದಕ್ಕೆ ಈಗಾಗಲೇ ಪೊಲೀಸ್ ಇಲಾಖೆ ಕೆಲ ಸೂಚನೆಗಳನ್ನು ನೀಡಿದೆ. ಹೀಗಾಗಿ ದೆಹಲಿ ಮತ್ತು ಉತ್ತರ ಪ್ರದೇಶದ ನಡುವಿನ ಎಲ್ಲಾ ಗಡಿಗಳಲ್ಲಿ ಜನರು ಒಟ್ಟುಗೂಡಿಸುವುದನ್ನು ನಿಷೇಧಿಸಲಾಗಿದೆ.
ಪ್ರತಿಭಟನಾಕಾರರು ಬಂದೂಕುಗಳು, ಕತ್ತಿಗಳು, ತ್ರಿಶೂಲ, ಈಟಿಗಳು, ಲಾಠಿ, ರಾಡ್‌ಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಹೊಂದಲು ಅನುಮತಿ ಇಲ್ಲ. ಅಂತಹ ವಸ್ತುಗಳನ್ನು ಹೊಂದಿದ ವ್ಯಕ್ತಿಗಳನ್ನು ಸ್ಥಳದಲ್ಲೇ ಬಂಧಿಸಲು ಸೂಚಿಸಲಾಗಿದೆ. 2021 ರಲ್ಲಿ ನಡೆದ ರೈತ ಹೋರಾಟದ ವೇಳೆ ಕೇಂದ್ರ ಸರ್ಕಾರ ನೀಡಿದ ಆಶ್ವಾಸನೆಯಂತೆ ಎಂಎಸ್ಪಿಯನ್ನು ದೇಶಾದ್ಯಂತ ಜಾರಿಗೆ ತರಬೇಕು ಎಂದು ರೈತರು ಎರಡನೇ ಬೃಹತ್ ಹೋರಾಟ ನಡೆಸುತ್ತಿದ್ದಾರೆ. 'ದೆಹಲಿ ಚಲೋ ರ್ಯಾಲಿ'ಯು ಫೆಬ್ರವರಿ 13 ರಂದು ದೆಹಲಿ ನಗರಕ್ಕೆ ಪ್ರವೇಶಿಸಲಿದ್ದು, ಇದನ್ನು ಗಡಿಭಾಗದಲ್ಲೇ ತಡೆಯಲು ಸೂಚಿಸಲಾಗಿದೆ.
ಓದಿ: ದೆಹಲಿಯತ್ತ ರೈತ ಹೋರಾಟ: ಗಡಿಯಲ್ಲಿ 5 ಸಾವಿರ ಪೊಲೀಸ್ ಭದ್ರತೆ, ನಿಷೇಧಾಜ್ಞೆ ಜಾರಿ