ನವದೆಹಲಿ: ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಖಾಸಗಿ ಕಾರ್ಯದರ್ಶಿ ಬಿಭವ್ ಕುಮಾರ್ ಅವರಿಗೆ ಸುಪ್ರೀಂ ಕೋರ್ಟ್ ಇಂದು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠ ಪ್ರಕರಣದ ವಿಚಾರಣೆ ನಡೆಸಿ, ಕುಮಾರ್ ಅವರು ಈಗಾಗಲೇ 100 ದಿನಗಳ ಕಾಲ ಸೆರೆವಾಸ ಅನುಭವಿಸಿದ್ದಾರೆ ಮತ್ತು ವಿಚಾರಣೆ ಪ್ರಾರಂಭಿಸಲು ಸಮಯ ತೆಗೆದುಕೊಳ್ಳುತ್ತದೆ ಎಂದ ಪೀಠ, ಸಾಕ್ಷ್ಯಾಧಾರಗಳನ್ನು ತಿರುಚುವುದು ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರುವುದು ಸೇರಿದಂತೆ ಇತರ ಷರತ್ತುಗಳನ್ನು ವಿಧಿಸುವ ಮೂಲಕ ಕುಮಾರ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದು ಎಂದು ಆದೇಶಿಸಿತು.
ಕುಮಾರ್ ಅವರನ್ನು ದೆಹಲಿ ಮುಖ್ಯಮಂತ್ರಿಯ ಖಾಸಗಿ ಕಾರ್ಯದರ್ಶಿಯಾಗಿ ಮುಂದುವರೆಯುವಂತಿಲ್ಲ. ಮುಖ್ಯಮಂತ್ರಿ ಕಚೇರಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಿಲ್ಲ. ಎಲ್ಲ ಸಾಕ್ಷಿಗಳನ್ನು ವಿಚಾರಣೆ ಮಾಡುವವರೆಗೆ ಅವರು ಸಿಎಂ ನಿವಾಸಕ್ಕೆ ಪ್ರವೇಶಿಸುವಂತಿಲ್ಲ ಮತ್ತು ಪ್ರಾಸಿಕ್ಯೂಷನ್ ಮೊದಲು ಈ ವಿಷಯದಲ್ಲಿ ಪ್ರಮುಖ ಮತ್ತು ಖಾಸಗಿ ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಬೇಕು ಎಂದು ನ್ಯಾಯಪೀಠ ಹೇಳಿತು.
ನ್ಯಾಯಮೂರ್ತಿ ಉಜ್ಜಲ್ ಭುಯಾನ್, ಪ್ರಾಸಿಕ್ಯೂಷನ್ಗೆ 51 ಕ್ಕೂ ಹೆಚ್ಚು ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲು ಪ್ರಸ್ತಾಪಿಸಿ, ಈ ಪ್ರಕರಣದ ವಿಚಾರಣೆಯು ಮುಕ್ತಾಯಗೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಪ್ರಕರಣದ ಚಾರ್ಜ್ ಶೀಟ್ ಈಗಾಗಲೇ ಸಲ್ಲಿಕೆ ಆಗಿರುವುದರಿಂದ ಕುಮಾರ್ ಬಿಡುಗಡೆಯಿಂದ ತನಿಖೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು.
ದೆಹಲಿ ಪೊಲೀಸರ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು, ಕುಮಾರ್ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು. ಹೀಗಾಗಿ ಜಾಮೀನು ನೀಡಬಾರದು ಎಂದು ವಾದಿಸಿದರು.
ಅರ್ಜಿದಾರರು 100 ದಿನಗಳ ಕಾಲ ಕಸ್ಟಡಿಯಲ್ಲಿದ್ದಾರೆ, ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಇದು ಜಾಮೀನಿಗೆ ಸಂಬಂಧಿಸಿದ ಪ್ರಕರಣ, ನೀವು ಇದನ್ನು ವಿರೋಧಿಸಬಾರದು. ಇಂತಹ ಪ್ರಕರಣದಲ್ಲಿ ನೀವು ವ್ಯಕ್ತಿಯನ್ನು ಜೈಲಿನಲ್ಲಿಡಲು ಸಾಧ್ಯವಿಲ್ಲ ಎಂದು ಪೀಠ ಹೇಳಿತು.
ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕುಮಾರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಜುಲೈ 12 ರಂದು ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಕುಮಾರ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಇವರು "ಸಾಕಷ್ಟು ಪ್ರಭಾವ" ಹೊಂದಿದ್ದಾರೆ ಮತ್ತು ಇವರಿಗೆ ಜಾಮೀನು ನೀಡಲು ಯಾವುದೇ ಕಾರಣವಿಲ್ಲ ಎಂದು ಹೇಳಿತ್ತು.
ಮೇ.13 ರಂದು ಮುಖ್ಯಮಂತ್ರಿ ನಿವಾಸದಲ್ಲಿ ಕುಮಾರ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಮಲಿವಾಲ್ ಆರೋಪಿಸಿದ್ದರು.