ಕೋಲ್ಕತ್ತಾ: ಸಂದೇಶ್ಖಾಲಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಟಿಎಂಸಿ ನಾಯಕ ಷಹಜಹಾನ್ ಶೇಖ್ ಮತ್ತು ಇತರರ ವಿರುದ್ಧದ ತನಿಖೆಯಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆಯಡಿ ₹12.78 ಕೋಟಿ ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ಜಪ್ತಿ ಮಾಡಿದೆ. ಇದೇ ವೇಳೆ, ಪ್ರಕರಣವನ್ನು ಕೋಲ್ಕತ್ತಾ ಹೈಕೋರ್ಟ್ ಸಿಬಿಐಗೆ ನೀಡಿದ್ದರ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿದೆ.
ಸಂದೇಶ್ಖಾಲಿ ಗಲಭೆ, ಹಿಂಸಾಚಾರ ಪ್ರಕರಣದಲ್ಲಿ ಆರೋಪಿಗಳಿಗೆ ಸಂಬಂಧಿಸಿದ ಅಪಾರ್ಟ್ಮೆಂಟ್, ಕೃಷಿ ಭೂಮಿ, ಮೀನುಗಾರಿಕೆಗೆ ಭೂಮಿ, ಇತರ ಜಮೀನು ಮತ್ತು 14 ಸ್ಥಿರ ಆಸ್ತಿಗಳು ಸೇರಿ ಒಟ್ಟು 12.78 ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಲಾಗಿದೆ. ವಿವಿಧ ಬ್ಯಾಂಕ್ ಖಾತೆಗಳನ್ನೂ ನಿರ್ಬಂಧಿಸಲಾಗಿದೆ ಎಂದು ಇಡಿ ತಿಳಿಸಿದೆ.
ಪ್ರಕರಣದ ಪ್ರಮುಖ ಆರೋಪಿ ಷಹಜಹಾನ್ ಶೇಖ್ ಮತ್ತು ಇತರರ ವಿರುದ್ಧ ಐಪಿಸಿ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ, ಎಸ್ಸಿ-ಎಸ್ಟಿ ದೌರ್ಜನ್ಯಗಳ ತಡೆ ಕಾಯ್ದೆ, ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ, ರಾಜ್ಯ ಹೆದ್ದಾರಿಗಳ ಕಾಯ್ದೆಗಳ ಅಡಿಯಲ್ಲಿ ಪಶ್ಚಿಮ ಬಂಗಾಳ ಪೊಲೀಸರು ದಾಖಲಿಸಿರುವ ಹಲವು ಎಫ್‌ಐಆರ್‌ಗಳ ಆಧಾರದ ಮೇಲೆ ಇಡಿ ತನಿಖೆ ನಡೆಸುತ್ತಿದೆ.
ಬಂಗಾಳ ಸರ್ಕಾರದ ಅರ್ಜಿ ಒಪ್ಪಿದ ಸುಪ್ರೀಂ: ಜನವರಿ 5ರಂದು ಸಂದೇಶ್ಖಾಲಿಯಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ಮೇಲಿನ ದಾಳಿಯ ತನಿಖೆಯನ್ನು ರಾಜ್ಯ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಿದ ಕೋಲ್ಕತ್ತಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ ಮನವಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಬುಧವಾರ ಸಮ್ಮತಿಸಿದೆ.
ಫೆಬ್ರವರಿ 29ರಂದು ಪಶ್ಚಿಮ ಬಂಗಾಳ ಪೊಲೀಸರು ಟಿಎಂಸಿ ನಾಯಕ ಷಹಜಹಾನ್ ಶೇಖ್‌ನನ್ನು ಬಂಧಿಸಿದ್ದ ಬಳಿಕ ಆತನನ್ನು, ಕೇಂದ್ರ ಏಜೆನ್ಸಿಗೆ ನೀಡುವಂತೆಯೂ ಹೈಕೋರ್ಟ್ ಸೂಚಿಸಿತ್ತು. ಇದನ್ನು ಸಿಎಂ ಮಮತಾ ಬ್ಯಾನರ್ಜಿ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದೆ.
ಸಂದೇಶ್ಖಾಲಿ ಹಿಂಸಾಚಾರ ಪ್ರಕರಣವನ್ನು ರಾಜ್ಯ ಪೊಲೀಸರು ನಡೆಸುತ್ತಿದ್ದಾರೆ. ಇದರಲ್ಲಿ ಸಿಬಿಐ ವಿಚಾರಣೆ ಬೇಕಿಲ್ಲ ಎಂಬುದು ರಾಜ್ಯ ಸರ್ಕಾರದ ವಾದ. ಆದರೆ, ಇಡಿ ಅಧಿಕಾರಿಗಳು ಪ್ರಕರಣ ಸೂಕ್ಷ್ಮವಾಗಿದೆ. ಇದನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಕೋರಿತ್ತು. ಇದರ ಬಳಿಕ ಕೋಲ್ಕತ್ತಾ ಹೈಕೋರ್ಟ್ ಇಡಿ ಮನವಿಯನ್ನು ಮನ್ನಿಸಿ, ಸಿಬಿಐ ತನಿಖೆಗೆ ಆದೇಶಿಸಿತ್ತು.
ರಾಜ್ಯ ಪೊಲೀಸರಿಂದ ತನಿಖೆ, ಷಹಜಹಾನ್ ಶೇಖ್‌ನನ್ನು ಸಿಬಿಐಗೆ ನೀಡಬಾರದು ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ವಿಚಾರಣೆ ನಡೆಸಲು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ದಿನಾಂಕ ನಿಗದಿಪಡಿಸಲಿದ್ದಾರೆ ಎಂದು ಬಂಗಾಳ ಸರ್ಕಾರ ಪ್ರತಿನಿಧಿಸುವ ಹಿರಿಯ ವಕೀಲ ಎ.ಎಂ.ಸಿಂಘ್ವಿ ಮತ್ತು ವಕೀಲೆ ಆಸ್ತಾ ಶರ್ಮಾ ತಿಳಿಸಿದ್ದಾರೆ.
ಪ್ರಕರಣವೇನು?: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಟಿಎಂಸಿ ನಾಯಕ ಷಹಜಹಾನ್ ಶೇಖ್ ಎಂಬಾತನ ಸಂದೇಶ್ಖಾಲಿ ನಿವಾಸದ ಮೇಲೆ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿದಾಗ, ಆತನ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಅಧಿಕಾರಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ಹಲವಾರು ಅಧಿಕಾರಿಗಳು ಗಂಭೀರ ಗಾಯಗೊಂಡಿದ್ದರು. ಹಿಂಸಾಚಾರದ ವಿರುದ್ಧ ಪ್ರಕರಣ ದಾಖಲಾಗಿದ್ದು, ಹಲವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಸಂದೇಶ್ಖಾಲಿ ಹಿಂಸಾಚಾರ, ಲೈಂಗಿಕ ದೌರ್ಜನ್ಯ ಸಿಐಡಿಗೆ ಹಸ್ತಾಂತರ; ಸಿಬಿಐ ತನಿಖೆಗೆ ಆಗ್ರಹ