ಮುಂಬೈ: ಎನ್ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಬಳಿಕ ನಟ ಸಲ್ಮಾನ್ ಖಾನ್ಗೆ ಒಂದರ ಮೇಲೊಂದಂತೆ ಬೆದರಿಕೆಗಳು ಬರುತ್ತಲೇ ಇವೆ. ಇದೀಗ ಮತ್ತೊಂದು ಬೆದರಿಕೆ ಕರೆ ನಟನಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈ ಟ್ರಾಫಿಕ್ ಪೊಲೀಸ್ ಸಹಾಯವಾಣಿಗೆ ಮಧ್ಯರಾತ್ರಿ ಈ ಬೆದರಿಕೆ ಕರೆ ಬಂದಿದ್ದು, ನಟನಿಗೆ 5 ಕೋಟಿ ರೂ ನೀಡುವಂತೆ ಬೇಡಿಕೆ ಇರಿಸಲಾಗಿದೆ. ಬೆದರಿಕೆ ಕರೆ ಮಾಡಿರುವ ವ್ಯಕ್ತಿ ತನ್ನನ್ನು ಗ್ಯಾಂಗ್ಸ್ಟರ್ ಬಿಷ್ಣೋಯಿ ಸಹೋದರ ಎಂದು ಗುರುತಿಸಿಕೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
"ಸಲ್ಮಾನ್ ಖಾನ್ ಜೀವಂತವಾಗಿರಬೇಕು ಎಂದರೆ, ಆತ ನಮ್ಮ ಬಿಷ್ಣೋಯಿ ಸಮುದಾಯದ ದೇಗುಲಕ್ಕೆ ತೆರಳಿ ಕ್ಷಮೆ ಕೋರಬೇಕು ಅಥವಾ 5 ಕೋಟಿ ರೂಪಾಯಿ ನೀಡಬೇಕು. ಈ ಎರಡನ್ನೂ ಮಾಡಲು ಮುಂದಾಗದಿದ್ದರೆ, ಕೊಲೆ ಮಾಡುತ್ತೇವೆ. ನಮ್ಮ ಗ್ಯಾಂಗ್ ಇನ್ನೂ ಸಕ್ರಿಯವಾಗಿದೆ" ಎಂದು ಸಂದೇಶದಲ್ಲಿ ಎಚ್ಚರಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆದರಿಕೆ ಕರೆ ಬಳಿಕ ಸಲ್ಮಾನ್ ಖಾನ್ಗೆ ಮತ್ತಷ್ಟು ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನಿಂದ ಈ ಸಂದೇಶ ಬಂದಿದೆಯೇ ಎಂಬ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಸಲ್ಮಾನ್ ಖಾನ್ಗೆ ಅಕ್ಟೋಬರ್ 30ರಂದು ಅನಾಮಧೇಯ ವ್ಯಕ್ತಿಯಿಂದ ಕೊಲೆ ಬೆದರಿಕೆ ಬಂದಿತ್ತು. ಈ ವೇಳೆ ಕರೆ ಮಾಡಿದವರು 2 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು.
ಅಕ್ಟೋಬರ್ 28ರಂದು ಕೂಡ ಸಲ್ಮಾನ್ ಖಾನ್ ಮತ್ತು ಬಾಬಾ ಸಿದ್ದಿಕಿ ಪುತ್ರ ಜೀಶನ್ ಸಿದ್ಧಿಕಿಗೆ ಕೊಲೆ ಬೆದರಿಕೆ ಹಾಕಿದ್ದ 20 ವರ್ಷದ ಯುವಕನನ್ನು ಪೊಲೀಸರು ನೋಯ್ಡಾದಲ್ಲಿ ಬಂಧಿಸಿದ್ದರು.
ಇದನ್ನೂ ಓದಿ: ನಟ ಸಲ್ಮಾನ್, ಜೀಶನ್ ಸಿದ್ದಿಕಿಗೆ ಕೊಲೆ ಬೆದರಿಕೆ ಹಾಕಿದ ಯುವಕನ ಬಂಧನ