ನವದೆಹಲಿ: ಭೀಕರ ಕಾರು ದುರಂತದಲ್ಲಿ ಪ್ರಾಣಾಪಾಯದಿಂದ ಪಾರಾಗಿ ಚೇತರಿಸಿಕೊಂಡ ರಿಷಬ್ ಪಂತ್ ಐಪಿಎಲ್ನಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಆಡಲು ಫಿಟ್ ಆಗಿದ್ದಾರೆ. ಗಾಯಗೊಂಡಿರುವ ಭಾರತ ತಂಡದ ವೇಗಿ ಮೊಹಮದ್ ಶಮಿ, ಪ್ರಸಿದ್ಧ್ ಕೃಷ್ಣ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಮೂವರು ಕ್ರಿಕೆಟಿಗರು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಭಾಗವಹಿಸುವ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಎಕ್ಸ್ ಖಾತೆಯಲ್ಲಿ ಮಂಗಳವಾರ ಮಾಹಿತಿ ನೀಡಿದೆ.
2022 ರ ಡಿಸೆಂಬರ್ 30 ರಂದು ಭೀಕರ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು 14 ತಿಂಗಳ ಬಳಿಕ ಚೇತರಿಸಿಕೊಂಡಿರುವ ಡ್ಯಾಶಿಂಗ್ ಬ್ಯಾಟರ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ರಿಷಬ್ ಪಂತ್ 17ನೇ ಆವೃತ್ತಿಯ ಐಪಿಎಲ್ನಲ್ಲಿ ಆಡಲಿದ್ದಾರೆ. ಅವರು ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿಸಿದೆ. ಪಂತ್ 2016 ರಿಂದ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಪ್ರತಿನಿಧಿಸುತ್ತಿದ್ದು, 98 ಪಂದ್ಯಗಳಲ್ಲಿ 34.61 ರ ಸರಾಸರಿಯಲ್ಲಿ 2,838 ರನ್ ಗಳಿಸಿದ್ದಾರೆ. ಇದರಲ್ಲಿ 15 ಅರ್ಧಶತಕಗಳಿವೆ.
ಶಮಿ, ಕೃಷ್ಣ ಔಟ್: ಇನ್ನು, ಭಾರತದ ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಪ್ರಸಿದ್ಧ್ ಕೃಷ್ಣ ಅವರು ಗಾಯಗೊಂಡಿರುವ ಕಾರಣ ಈ ಬಾರಿಯ ಐಪಿಎಲ್ನಿಂದ ಹೊರಗುಳಿಯಲಿದ್ದಾರೆ. ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಪರ ಆಡುವ ಮೊಹಮ್ಮದ್ ಶಮಿ ಈಚೆಗಷ್ಟೇ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ವೈದ್ಯರು ಕನಿಷ್ಠ 6 ತಿಂಗಳು ವಿಶ್ರಾಂತಿ ಸೂಚಿಸಿದ್ದಾರೆ. ಪ್ರಸ್ತುತ ಶಮಿ ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ.
ಮತ್ತೊಂದೆಡೆ, ಕರ್ನಾಟದ ವೇಗಿ ಪ್ರಸಿದ್ಧ್ ಕೃಷ್ಣ ಅವರು ಫಿಟ್ನೆಸ್ ಕೊರತೆಯಿಂದ ಬಳಲುತ್ತಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನರ್ವಸತಿ ಆರಂಭಿಸಲಿದ್ದಾರೆ. ಹೀಗಾಗಿ ಅವರೂ ಈ ಬಾರಿಯ ಐಪಿಎಲ್ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ.
17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ), ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವೆ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಏಪ್ರಿಲ್ 7ರ ವರೆಗಿನ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಮುಂಬರುವ ಲೋಕಸಭೆ ಚುನಾವಣೆಯ ದಿನಾಂಕ ಗಮನಿಸಿ ನಂತರದ ಪಂದ್ಯಗಳ ದಿನಾಂಕವನ್ನು ಘೋಷಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.
ಇದನ್ನೂ ಓದಿ: ಭಾರತೀಯ ಯುವ ಕ್ರಿಕೆಟಿಗರಿಗೆ ದ್ರಾವಿಡ್ ಸಲಹೆ ಏನು?: ವಿಡಿಯೋ ನೋಡಿ