ಕೋಲ್ಕತ್ತಾ (ಪಶ್ಚಿಮ ಬಂಗಾಳ): ಆರ್‌ಜಿ ಕರ್ ಕಾಲೇಜಿನಲ್ಲಿ ವೈದ್ಯೆ ವಿದ್ಯಾರ್ಥಿನಿ ಕೊಲೆ, ಅತ್ಯಾಚಾರ ಪ್ರಕರಣದ ವಿರುದ್ಧ ವೈದ್ಯ ಸಿಬ್ಬಂದಿ ನಡೆಸುತ್ತಿರುವ ಪ್ರತಿಭಟನೆ ಮಂಗಳವಾರವೂ ಮುಂದುವರೆದಿದೆ. ಸುಪ್ರೀಂಕೋರ್ಟ್ ಸೂಚನೆ ಮತ್ತು ರಾಜ್ಯ ಸರ್ಕಾರದ ಮನವಿ ಬಳಿಕವೂ ಪ್ರತಿಭಟನಾಕಾರರು ತಮ್ಮ ನಿಲುವು ಬದಲಿಸಿಲ್ಲ.
ವೈದ್ಯೆ ಕೊಲೆ ಕೇಸಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆ ಮತ್ತು ತಮ್ಮ ಹಲವು ಬೇಡಿಕೆಗಳನ್ನು ಪೂರೈಸುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಸರ್ಕಾರ ಈ ಬಗ್ಗೆ ಮಾತುಕತೆಗೆ ನಡೆಸಲು ಸಿದ್ಧ ಎಂದು ತಿಳಿಸಿದರೂ, ಆರ್‌ಜಿ ಕರ್ ಕಾಲೇಜಿನ ವೈದ್ಯರು ಮಾತ್ರ ಇದಕ್ಕೆ ಜಗ್ಗುತ್ತಿಲ್ಲ.
ಪ್ರತಿಭಟನಾಕಾರರ ಬೇಡಿಕೆಗಳೇನು?: ಆರ್‌ಜಿ ಕರ್ ಕಾಲೇಜಿನಲ್ಲಿ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಘಟನೆಯ ಹಿಂದಿನ ಉದ್ದೇಶ, ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ವಿರುದ್ಧ ಶಿಸ್ತು ಕ್ರಮ, ಕೋಲ್ಕತ್ತಾ ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ರಾಜೀನಾಮೆ, ರಾಜ್ಯ ಸೇರಿದಂತೆ ದೇಶದಲ್ಲಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಭರವಸೆ ಸೇರಿದಂತೆ ಹಲವು ಬೇಡಿಕೆಗಳನ್ನು ಮಂಡಿಸಿದ್ದಾರೆ. ಇದೆಲ್ಲವನ್ನೂ ಸರ್ಕಾರ ಪರಿಗಣಿಸಿದಲ್ಲಿ ಕೆಲಸಕ್ಕೆ ಮರಳುವುದಾಗಿ ಹೋರಾಟನಿರತ ವೈದ್ಯ ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆರ್‌ಡಿಎ ಅಧ್ಯಕ್ಷ, ವೈದ್ಯ ಅನಿಕೇತ್ ಮಂಡಲ್, ವೈದ್ಯರ ಬೇಡಿಕೆಗಳನ್ನು ಅಂಗೀಕರಿಸುವವರೆಗೂ ಕೆಲಸಕ್ಕೆ ಮರಳುವುದಿಲ್ಲ. ನಮಗೆ ಭದ್ರತೆ ಬೇಕು. ನಮ್ಮ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ಆದ್ದರಿಂದ, ರಾಜ್ಯ ಸರ್ಕಾರ ಎಲ್ಲವನ್ನೂ ಒಪ್ಪಿಕೊಳ್ಳಬೇಕು. ಪ್ರಕರಣದಲ್ಲಿ ಅಪರಾಧಿಗಳ ಬಂಧನವಾಗಬೇಕು ಎಂದು ಒತ್ತಾಯಿಸಿದರು.
ಕಿರಿಯ ವೈದ್ಯ ಡಾ.ಸೌಮ್ಯದೀಪ್ ರಾಯ್ ಮಾತನಾಡಿ, ವೈದ್ಯರ ಬೇಡಿಕೆಗಳನ್ನು ಮಂಗಳವಾರ ಸಂಜೆ 5 ರೊಳಗೆ ಈಡೇರಿಸಿದರೆ ನಾವು ಕೆಲಸಕ್ಕೆ ತಕ್ಷಣಕ್ಕೆ ಮರಳುತ್ತೇವೆ. ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಘಟನೆ ಹಿಂದಿನ ಉದ್ದೇಶವನ್ನು ಸಿಬಿಐ ಸ್ಪಷ್ಟಪಡಿಸಬೇಕು. ಕೃತ್ಯದಲ್ಲಿ ಭಾಗಿಯಾದ ಎಲ್ಲರನ್ನೂ ಬಂಧಿಸಬೇಕು ಎಂದು ಆಗ್ರಹಿಸಿದರು.
ಮಮತಾ ಸರ್ಕಾರದ ವಾದವೇನು?: ವೈದ್ಯರು ಪ್ರತಿಭಟನೆ ಕೈಬಿಟ್ಟು ಕೆಲಸಕ್ಕೆ ಮರಳಿ ಎಂದು ಸರ್ಕಾರ ಮನವಿ ಮಾಡಿದೆ. ವೈದ್ಯರ ಮುಷ್ಕರದಿಂದ ಜೀವಹಾನಿಗಳು ಸಂಭವಿಸುತ್ತಿವೆ. ಈಗಾಗಲೇ 23 ಜನರು ಸಾವಿಗೀಡಾಗಿದ್ದಾರೆ. ಇದು ಹೀಗೆಯೇ ಮುಂದುವರಿಯಬಾರದು. ಪ್ರಕರಣದ ಕುರಿತು ಕಠಿಣ ಕ್ರಮ ಜರುಗಿಸಲಾಗಿದೆ. ವೈದ್ಯರಿಗೆ ನ್ಯಾಯ ಕೊಡಿಸಲಾಗುವುದು ಎಂದು ಹೇಳುತ್ತಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೂ ವೈದ್ಯರಲ್ಲಿ ಭಿನ್ನವಿಸಿಕೊಂಡಿದ್ದು, ಪ್ರಕರಣದ ಕುರಿತು ತಮ್ಮನ್ನು ಭೇಟಿ ಮಾಡಲು ಅವಕಾಶವಿದೆ. ತಕ್ಷಣವೇ ವೈದ್ಯರು ತಮ್ಮ ತಮ್ಮ ಕೆಲಸಗಳಿಗೆ ಮರಳಲಿ. ಸುಪ್ರೀಂಕೋರ್ಟ್ ಇದನ್ನೇ ಹೇಳಿದೆ ಎಂದಿದ್ದಾರೆ.
ಸುಪ್ರೀಂಕೋರ್ಟ್ ಸೂಚಿಸಿದ್ದೇನು?: ಸೋಮವಾರ ನಡೆದ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್, ಪ್ರಕರಣದ ತನಿಖೆಯನ್ನು ಟೀಕಿಸಿತ್ತು. ಮಹತ್ವದ ದಾಖಲೆಗಳನ್ನು ಕಲೆಹಾಕಲಾಗಿಲ್ಲ ಎಂದು ಛೀಮಾರಿ ಹಾಕಿತ್ತು. ಜೊತೆಗೆ, ಪ್ರತಿಭಟನೆಯಿಂದ ಸಾಮಾನ್ಯ ಜನರಿಗೆ ಸಮಸ್ಯೆ ಉಂಟಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಬಿಕ್ಕಟ್ಟು ಉಂಟಾಗುವ ಮೊದಲು ಪ್ರತಿಭಟನಾನಿರತ ವೈದ್ಯರು ಕೆಲಸಕ್ಕೆ ಹಾಜರಾಗಲಿ. ಅವರ ವಿರುದ್ಧ ಸರ್ಕಾರ ಯಾವುದೇ ಕ್ರಮ ಜರುಗಿಸುವಂತಿಲ್ಲ ಎಂದು ಸೂಚಿಸಿತ್ತು.