ನವದೆಹಲಿ : ಇಲ್ಲಿನ ಕರ್ತವ್ಯ ಪಥದಲ್ಲಿ ನಡೆದ ಅದ್ದೂರಿ 75ನೇ ಗಣರಾಜ್ಯೋತ್ಸವದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತ್ರಿವರ್ಣ ಧ್ವಜಾರೋಹಣ ಮಾಡಿದರು. ಈ ವೇಳೆ, ದ್ರೌಪದಿ ಮುರ್ಮು ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಾಗತಿಸಿದರು.
ಧ್ವಜಾರೋಹಣ ನೆರವೇರಿದ ಬಳಿಕ ರಾಷ್ಟ್ರಗೀತೆಯನ್ನು ನುಡಿಸಲಾಯಿತು. ದೇಶೀಯ ಬಂದೂಕುಗಳು ಮತ್ತು 105-ಎಂಎಂ ಇಂಡಿಯನ್ ಫೀಲ್ಡ್ ಗನ್‌ಗಳೊಂದಿಗೆ ರಾಷ್ಟ್ರಪತಿ ಅವರಿಗೆ 21 ಗನ್ ಸೆಲ್ಯೂಟ್ ಗಳನ್ನು ನೀಡುವ ಮೂಲಕ ಗೌರವ ಸೂಚಿಸಲಾಯಿತು. ಇನ್ನು ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಆಗಮಿಸಿದ್ದು ವಿಶೇಷವಾಗಿತ್ತು. ನಂತರ ನರೇಂದ್ರ ಮೋದಿ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.
ಈ ಬಾರಿ ಗಣರಾಜ್ಯೋತ್ಸವವು ಮುಖ್ಯವಾಗಿ ಮಹಿಳೆಯರ ಮೇಲೆ ಕೇಂದ್ರೀಕೃತವಾಗಿದೆ. 'ವಿಕ್ಷಿತ್ ಭಾರತ್' ಮತ್ತು 'ಭಾರತ: ಲೋಕತಂತ್ರ ಕಿ ಮಾತೃಕಾ' ಥೀಮ್‌ಗಳನ್ನು ಒಳಗೊಂಡಿದೆ. ಕರ್ತವ್ಯ ಪಥದಲ್ಲಿ ನಡೆದ ಪರೇಡ್ ಸುರಕ್ಷತೆ ಮತ್ತು ಭದ್ರತೆಗಾಗಿ ಸುಮಾರು 14,000 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಪರೇಡ್‌ನಲ್ಲಿ ಮೂರು ಮಹಿಳಾ ಸೇನಾ ಪಡೆಗಳ ಪ್ರದರ್ಶನ : ಇದೇ ಮೊದಲ ಬಾರಿಗೆ ಮಹಿಳೆಯರೇ ಇರುವ ಮೂರು ಸೇನಾಪಡೆಗಳ ತಂಡ ಪರೇಡ್‌ನಲ್ಲಿ ತನ್ನ ಪ್ರದರ್ಶನ ನೀಡಿದೆ. ಅಷ್ಟೇ ಅಲ್ಲ, ಇದೇ ಮೊದಲ ಬಾರಿಗೆ ಸಾಂಪ್ರದಾಯಿಕ ಮಿಲಿಟರಿ ಬ್ಯಾಂಡ್‌ಗಳಿಗೆ ಬದಲಾಗಿ 100ಕ್ಕೂ ಹೆಚ್ಚು ಮಹಿಳಾ ಕಲಾವಿದರು ವಿವಿಧ ಭಾರತೀಯ ಸಂಗೀತ ಉಪಕರಣಗಳಾದ ಶಂಖ, ನಾದ ಸ್ವರ ಮತ್ತು ನಗಡ ರೀತಿಯ ಸಾಂಪ್ರದಾಯಿಕ ಮಿಲಿಟರಿ ಉಪಕರಣಗಳಲ್ಲಿ ಸ್ವರ ಹೊಮ್ಮಿಸಿದರು. 15 ಮಹಿಳಾ ಪೈಲಟ್‌ಗಳು ಭಾರತೀಯ ವಾಯುಸೇನೆ ನಡೆಸುವ ಫ್ಲೈ ಫಾಸ್ಟ್‌ನಲ್ಲಿ ಪಾಲ್ಗೊಂಡು ರೋಮಾಂಚನಗೊಳಿಸಿದರು. ಈ ಮೂಲಕ ಆಗಸದಲ್ಲೂ ನಾರಿ ಶಕ್ತಿ ಪ್ರದರ್ಶನವಾಗಿದೆ. ಕೇಂದ್ರೀಯ ಪೊಲೀಸ್ ಪಡೆಗಳ ಮಹಿಳೆಯರನ್ನೇ ಒಳಗೊಂಡ ತಂಡವೂ ಪರೇಡ್‌ನಲ್ಲಿ ಪಾಲ್ಗೊಂಡಿತ್ತು.
ಇದರ ಜೊತೆಗೆ ಭೂಸೇನೆ, ವಾಯುಸೇನೆ, ನೌಕಾಸೇನೆ ಹಾಗೂ ವಿವಿಧ ಭದ್ರತಾ ಪಡೆಗಳು ಸ್ವದೇಶಿ ನಿರ್ಮಿತ, ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಕ್ಷಿಪಣಿಗಳು, ಡ್ರೋನ್ ಜಾಮರ್‌ಗಳು, ಸರ್ವೆಲೆನ್ಸ್ ವ್ಯವಸ್ಥೆ ತನ್ನ ಶಕ್ತಿಯನ್ನು ಜಗತ್ತಿನ ಎದುರು ಪ್ರದರ್ಶಿಸಲಾಯಿತು.
ಇದನ್ನೂ ಓದಿ : ದೆಹಲಿಯ ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ ವೈಭವ: ಭಾರತದ ಮಿಲಿಟರಿ, ಮಹಿಳಾ ಶಕ್ತಿ ಅನಾವರಣ