ನವದೆಹಲಿ: ಈ ಹಿಂದಿನ ವರ್ಷಗಳಲ್ಲಿ ಹಲವಾರು ವಿಶ್ವ ನಾಯಕರು ಭಾರತದ ಗಣರಾಜ್ಯೋತ್ಸವದಲ್ಲಿ ತಮ್ಮ ಉಪಸ್ಥಿತಿಯನ್ನು ಅಲಂಕರಿಸಿದ್ದಾರೆ. ಇದರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ 2021 ಮತ್ತು 2022 ರ ನಡುವೆ ಯಾವುದೇ ಮುಖ್ಯ ಅತಿಥಿಗಳನ್ನು ಆಹ್ವಾನಿಸಿರಲಿಲ್ಲ.
ಈ ವರ್ಷ, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ. 2023ರ ಜುಲೈನಲ್ಲಿ ಫ್ರಾನ್ಸ್‌ನ ರಾಷ್ಟ್ರೀಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್‌ಗೆ ಭೇಟಿ ನೀಡಿದ್ದು ಇಲ್ಲಿ ಉಲ್ಲೇಖಾರ್ಹ.
ಮ್ಯಾಕ್ರನ್ ಅವರು ಭಾರತದ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಆರನೇ ಫ್ರೆಂಚ್ ನಾಯಕ. ಇದಕ್ಕೂ ಮುನ್ನ 1976ರಲ್ಲಿ ಅಧ್ಯಕ್ಷ ಜಾಕ್ವೆಸ್ ಚಿರಾಕ್, 1980ರಲ್ಲಿ ವ್ಯಾಲೆರಿ ಗಿಸ್ಕಾರ್ಡ್ ಡಿ ಎಸ್ಟೇಂಗ್, 2008ರಲ್ಲಿ ನಿಕೋಲಸ್ ಸರ್ಕೋಜಿ ಮತ್ತು 2016ರಲ್ಲಿ ಫ್ರಾಂಕೋಯಿಸ್ ಹೊಲಾಂಡೆ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ್ದ ಮುಖ್ಯ ಅತಿಥಿಗಳ ಪಟ್ಟಿ:
- 2023: ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ
- 2020: ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ
- 2019: ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಾಫೋಸಾ
- 2018: ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದ ಮುಖ್ಯಸ್ಥರು (ASEAN) ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು. ಹಸ್ಸಾನಲ್ ಬೊಲ್ಕಿಯಾ, ಬ್ರೂನಿ ಸುಲ್ತಾನ್, ಕಾಂಬೋಡಿಯಾದ ಪ್ರಧಾನ ಮಂತ್ರಿ ಹುನ್ ಸೇನ್, ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೋಡೋ, ಲಾವೋಸ್‌ನ ಪ್ರಧಾನ ಮಂತ್ರಿ ಥೋಂಗ್ಲೋನ್ ಸಿಸೌಲಿತ್, ಮಲೇಷ್ಯಾ ಪ್ರಧಾನಿ ನಜೀಬ್ ರಜಾಕ್, ಮ್ಯಾನ್ಮಾರ್‌ನ ರಾಜ್ಯ ಸಲಹೆಗಾರ್ತಿ ಆಂಗ್ ಸಾನ್ ಸೂ ಕಿ, ಫಿಲಿಪೈನ್ಸ್ ಅಧ್ಯಕ್ಷ ರೊಡ್ರಿಗೋ ಡ್ಯುಟರ್ಟೆ, ಸಿಂಗಾಪುರದ ಪ್ರಧಾನ ಮಂತ್ರಿ ಲೀ ಸಿಯೆನ್ ಲೂಂಗ್, ಥೈಲ್ಯಾಂಡ್ ಪ್ರಧಾನಿ ಪ್ರಯುತ್ ಚಾನ್-ಒ-ಚಾ, ವಿಯೆಟ್ನಾಂನ ಪ್ರಧಾನ ಮಂತ್ರಿ ನ್ಗುಯೆನ್ ಕ್ಸುವಾನ್ ಫುಕ್ ಭಾಗವಹಿಸಿದ್ದರು.
- 2017: ಅಬುಧಾಬಿಯ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್
- 2016: ಫ್ರೆಂಚ್ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ
- 2015: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ
- 2014: ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ
- 2013: ಭೂತಾನ್‌ನ ರಾಜ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್‌ಚುಕ್
- 2012: ಥಾಯ್ಲೆಂಡ್ ಮಾಜಿ ಪ್ರಧಾನಿ ಯಿಂಗ್ಲಕ್ ಶಿನವತ್ರಾ
- 2007: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
- 2002: ಮಾರಿಷಸ್ ಮಾಜಿ ಅಧ್ಯಕ್ಷ ಕ್ಯಾಸ್ಸಮ್ ಉಟೀಮ್
- 1995: ದಕ್ಷಿಣ ಆಫ್ರಿಕಾ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ
- 1971: ತಾಂಜಾನಿಯಾ ಮಾಜಿ ಅಧ್ಯಕ್ಷ ಜೂಲಿಯಸ್ ನೈರೆರೆ
- 1967: ಅಫ್ಘಾನಿಸ್ತಾನದ ರಾಜ ಮೊಹಮ್ಮದ್ ಜಹೀರ್ ಶಾ
- 1961: ಯುಕೆ ರಾಣಿ ಎಲಿಜಬೆತ್
- 1960: USSR ಅಧ್ಯಕ್ಷ ಮಾಜಿ ಕ್ಲಿಮೆಂಟ್ ವೊರೊಶಿಲೊ
- 1957: ಸೋವಿಯತ್ ಒಕ್ಕೂಟದ ಮಾಜಿ ರಕ್ಷಣಾ ಸಚಿವ ಜಾರ್ಜಿ ಝುಕೋವ್
ರಾಷ್ಟ್ರ ರಾಜಧಾನಿಯ 'ಕರ್ತವ್ಯ ಪಥ'ದಲ್ಲಿ ಇಂದು ಭಾರತ ತನ್ನ ಮಿಲಿಟರಿ ಪರಾಕ್ರಮ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ರೋಮಾಂಚನಕಾರಿ ಪ್ರದರ್ಶನ ನಡೆಸಲಿದೆ.
ಇದನ್ನೂ ಓದಿ: ರಾಮಮಂದಿರವು ಭಾರತೀಯ ಪರಂಪರೆಯ ಮರು ಶೋಧದ ಪ್ರತೀಕ: ರಾಷ್ಟ್ರಪತಿ ಬಣ್ಣನೆ