ಹೈದರಾಬಾದ್ (ತೆಲಂಗಾಣ): ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿ ಇಲ್ಲ. ಆ ಮಾತೃ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಾಗಲ್ಲ. ಇವು ತಾಯಿಯ ಮಮತೆ, ವಾತ್ಸಲ್ಯದ ಕುರಿತು ಹೇಳುವ ಮಾತುಗಳು. ಇದಕ್ಕೆ ಸಾಕ್ಷಿ ಎಂಬಂತ ಘಟನೆಗಳು ವರದಿಯಾಗುತ್ತಿರುತ್ತವೆ. ಈ ಮಾತಿಗೆ ನಿದರ್ಶನ ಎಂಬಂತ ಮತ್ತೊಂದು ಘಟನೆ ತೆಲಂಗಾಣ ರಾಜ್ಯದಲ್ಲಿ ಬೆಳಕಿಗೆ ಬಂದಿದೆ. ಹುಟ್ಟಿನಿಂದಲೇ ನರಕಯಾತನೆ ಅನುಭವಿಸುತ್ತಿದ್ದ ಮಗು ಈಗ ತಾಯಿಯ ಮಡಿಲಲ್ಲಿ ಕಿಲ ಕಿಲ ನಗುವಂತಾಗಿದೆ. ಇದಕ್ಕೆ ಕಾರಣ ಹೆತ್ತ ತಾಯಿ ಮತ್ತು ವೈದ್ಯರು ಅನ್ನೋದು ವಿಶೇಷ.
ಹೌದು, ಕಣ್ಣೆದುರೇ ಮಗ ಅನಾರೋಗ್ಯದಿಂದ ನರಳುತ್ತಿರುವುದನ್ನು ಯಾವ ತಾಯಿಗೂ ಸಹಿಸಲು ಸಾಧ್ಯವಿಲ್ಲ. ಉಸ್ಮಾನಿಯಾ ವೈದ್ಯರು ಲಿವರ್ ಕಸಿಯನ್ನು ಯಶಸ್ವಿಯಾಗಿ ಮಾಡುವ ಮೂಲಕ ಮಗುವಿಗೆ ಜೀವ ಉಳಿಸಿದ್ದಾರೆ. ಖಮ್ಮಂ ಜಿಲ್ಲೆಯ ಕೊಣಿಜರ್ಲ ಮಂಡಲದ ಕೊಂಡವನಮಾಳದ ಮೊಡುಗು ಗುಣಶೇಖರ್ ಮತ್ತು ಅಮಲಾ ದಂಪತಿಯ ಮೂರು ವರ್ಷದ ಪುತ್ರ ಹುಟ್ಟಿನಿಂದಲೇ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ. ಯಕೃತ್(ಲಿವರ್) ಸಂಪೂರ್ಣ ಹಾಳಾಗಿದ್ದು, ವೈದ್ಯರು ಕಸಿ ಮಾಡುವಂತೆ ಸೂಚಿಸಿದ್ದರು. ಈ ಚಿಕಿತ್ಸೆಗೆ 30-40 ಲಕ್ಷ ರೂ. ಖರ್ಚಾಗುತ್ತೆ ಅಂತಲೂ ಹೇಳಿದ್ದರು.
ಚೇತರಿಸಿಕೊಂಡ ತಾಯಿ-ಮಗ: ಬಡ ಕುಟುಂಬ ಆಗಿರುವುದರಿಂದ ಅವರಿಗೆ ಅಷ್ಟು ಹಣ ಭರಿಸಲು ಸಾಧ್ಯವಾಗಿರಲಿಲ್ಲ. ಆದ್ರೆ ಪರಿಚಿತರ ಸಲಹೆ ಮೇರೆಗೆ ಉಸ್ಮಾನಿಯಾ ವೈದ್ಯರನ್ನು ಭೇಟಿಯಾದರು. ತಾಯಿ ಅಮಲಾ ಅವರು ಲಿವರ್ ಕಸಿ ಮಾಡಲು ದಾನಿಯಾಗಿ ಮುಂದೆ ಬಂದರು. ಉಸ್ಮಾನಿಯಾ ಆಸ್ಪತ್ರೆ ಸರ್ಜಿಕಲ್ ಗ್ಯಾಸ್ಟ್ರೋಎಂಟ್ರಾಲಜಿಸ್ಟ್ ಡಾ. ಮಧುಸೂದನ್ ಮತ್ತು ಇತರ ವೈದ್ಯರು ಜುಲೈ 3 ರಂದು ನಿರ್ಣಾಯಕ ಶಸ್ತ್ರಚಿಕಿತ್ಸೆಯನ್ನು ಮಾಡಿದರು. ತಾಯಿ ಮತ್ತು ಮಗ ಚೇತರಿಸಿಕೊಂಡರು ಮತ್ತು ಕಳೆದ ಮಂಗಳವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಸಹ ಆಗಿದ್ದಾರೆ.
ಮುಖ್ಯಮಂತ್ರಿಗಳ ಪರಿಹಾರ ನಿಧಿಯಡಿ ರೂ. 10.8 ಲಕ್ಷ ರೂ. ಮತ್ತು ಇನ್ನೊಂದು ಮಗುವಿಗೆ ರೋಗನಿರೋಧಕ ಔಷಧಿಗಳಿಗಾಗಿ 2 ಲಕ್ಷ ರೂ. ನೀಡಲಾಗಿದೆ. ಈ ನಿರ್ಣಾಯಕ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಉಸ್ಮಾನಿಯಾ ವೈದ್ಯರಾದ ಡಾ.ಶೇಷಾದ್ರಿ, ಡಾ.ಸುದರ್ಶನ್, ಡಾ.ವಾಸಿಫ್ ಅಲಿ, ಡಾ.ರಮೇಶಕುಮಾರ್, ಡಾ.ಉಮಾದೇವಿ, ಡಾ.ಪಾಂಡು ನಾಯ್ಕ್, ಡಾ.ಮಾಧವಿ, ಡಾ.ಪಾವನಿ, ಡಾ.ಉಷಾರಾಣಿ, ಡಾ.ನಿರ್ಮಲಾ, ಡಾ.ಅಪರ್ಣಾ, ಡಾ.ಅಬಿದ್, ಡಾ.ಸುನೀಲ್, ಡಾ.ಆನಂದ್, ಒ.ಟಿ. ತಂತ್ರಜ್ಞ ಕೃಷ್ಣ, ನರ್ಸಿಂಗ್ ಸಿಬ್ಬಂದಿ ಸುಬ್ಬಲಕ್ಷ್ಮಿ ಮತ್ತಿತರರನ್ನು ಆಸ್ಪತ್ರೆ ಅಧೀಕ್ಷಕ ಡಾ.ನಾಗೇಂದರ್ ಅಭಿನಂದಿಸಿದರು.
ಇದನ್ನೂ ಓದಿ: ವಯಸ್ಸಿಗೆ ಅನುಗುಣವಾಗಿ ದಿನಕ್ಕೆ ಎಷ್ಟು ಗಂಟೆ ನಿದ್ರೆ ಮಾಡಬೇಕು; ಇಲ್ಲಿದೆ ಮಾಹಿತಿ - Sleep According to Age