ಹೈದರಾಬಾದ್: ಕೋಟ್ಯಂತರ ಭಾರತೀಯರನ್ನು ಅಗಲಿರುವ ದೇಶದ ಶ್ರೀಮಂತ ಉದ್ಯಮಿ, ಭಾರತದ ಅಪ್ರತಿಮ ಪ್ರತಿಭೆ, ಟಾಟಾ ಸನ್ಸ್‌ನ ಅಧ್ಯಕ್ಷ ರತನ್ ಟಾಟಾ ಮದುವೆ ಏಕೆ ಆಗಲಿಲ್ಲ? ಇದು ಭಾರತೀಯರ ಪ್ರಶ್ನೆ ಮಾತ್ರವಲ್ಲ, ಜಗತ್ತಿನ ಕೋಟಿ ಕೋಟಿ ಜನರ ಪ್ರಶ್ನೆ ಕೂಡ ಹೌದು.
ಸುಂದರವಾಗಿದ್ದ ಒಬ್ಬ ವ್ಯಕ್ತಿ, ಜೀವನದ ಕೊನೆಯವರೆಗೂ ಮದುವೆಯನ್ನೇ ಆಗದೇ ಒಂಟಿಯಾಗೇ ಇದ್ದರು ಎಂಬ ಸತ್ಯ ಬಹಳ ಜನರಿಗೆ ಗೊತ್ತಿಲ್ಲ. ಈ ಒಂಟಿ ಜೀವನದ ಹಿಂದೆ ಅದ್ಭುತ ಲವ್ ಸ್ಟೋರಿ ಇರುವುದು ಎಷ್ಟು ಜನರಿಗೆ ಗೊತ್ತು? ರತನ್ ಟಾಟಾ ಮದುವೆ ಯಾಕೆ ಆಗಿರಲಿಲ್ಲ? ಅವರಿಗೆ ಲವ್ ಫೆಲ್ಯೂರ್ ಆಗಿತ್ತಾ? ಜೀವನದಲ್ಲಿ ಅವರು ಅನುಭವಿಸಿದ್ದ ನೋವು ಎಂತಹದ್ದು? ಅವರೇ ಕೆಲವು ಸಂದರ್ಭದಲ್ಲಿ ಹೇಳಿಕೊಂಡ ಕೆಲವು ಘಟನೆಗಳ ಬಗ್ಗೆ ಇಲ್ಲಿ ತಿಳಿಯೋಣ.
ಬಾಲ್ಯದ ಜೀವನ - ಪ್ರೀತಿಯ ಪಯಣ: ಮುಂಬೈನ ಶ್ರೀಮಂತ ಕುಟುಂಬದಲ್ಲಿ 28 ಡಿ. 1937 ರಂದು ಜನಿಸಿದ ರತನ್ ಟಾಟಾ, ತಮ್ಮ ಬಾಲ್ಯವನ್ನು ಅಜ್ಜಿ ನವಾಜ್ ಬಾಯಿ ಟಾಟಾ ಅವರ ಬಳಿ ಕಳೆದರು. ಮುಂಬೈ ಮತ್ತು ಶಿಮ್ಲಾದ ಶಾಲೆಗಳಲ್ಲಿ ಆರಂಭಿಕ ಶಿಕ್ಷಣ ಪಡೆದ ಅವರು, ಆ ಬಳಿಕ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಿದರು. ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಸ್ಟ್ರಕ್ಚರಲ್ ಡಿಸೈನಿಂಗ್ ಎಂಬ ಪದವಿ (ಕೋರ್ಸ್) ಸಹ ಪೂರ್ಣಗೊಳಿಸಿದರು. ಪದವಿಯ ನಂತರ, ಟಾಟಾ ಲಾಸ್ ಏಂಜಲೀಸ್‌ನಲ್ಲಿರುವ ಜೋನ್ಸ್ ಮತ್ತು ಎಮ್ಮನ್ಸ್ ಆರ್ಕಿಟೆಕ್ಚರ್ ಸಂಸ್ಥೆಯಲ್ಲಿ ಕೆಲವು ದಿನಗಳ ಕಾಲ ಕೆಲಸ ಸಹ ಮಾಡಿದರು. ಎರಡು ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿದರು. ಹೀಗಿರುವಾಗಲೇ ಅವರಿಗೆ ಐಬಿಎಂನಿಂದ ಆಫರ್ ಬಂದಿತ್ತು. ಅಷ್ಟರಲ್ಲಿ ಮನೆಯಿಂದ ಬಂದ ಅಜ್ಜಿಯ ಅನಾರೋಗ್ಯದ ಕುರಿತ ಕರೆ ಅವರನ್ನು ಬಹಳ ಚಿಂತನೆಗೆ ತಳ್ಳಿತ್ತು.
ಭಾರತಕ್ಕೆ ತೆರಳಬೇಕೆಂಬ ತುಡಿತ ಅವರಲ್ಲಿ ಮೂಡಿತ್ತಾದರೂ ಸಹೋದ್ಯೋಗಿಯಾಗಿದ್ದ ಅಮೆರಿಕದ ಹುಡುಗಿಯೊಬ್ಬಳ ಪ್ರೀತಿಯ ಸೆಳೆತ ಅವರನ್ನು ಬಹಳ ಚಿಂತನೆಗೆ ತಳ್ಳಿತ್ತು. ತಾನೊಬ್ಬಳನ್ನು ಪ್ರೀತಿಸುತ್ತಿದ್ದ ವಿಷಯವನ್ನು ಹೇಳಬೇಕು, ಆಕೆಯನ್ನೇ ಮದುವೆಯಾಗಬೇಕೆಂಬ ಆಸೆ, ಅಜ್ಜಿಯ ಅನಾರೋಗ್ಯ ಎಲ್ಲವೂ ಅವರನ್ನು ಇನ್ನಿಲ್ಲದ ಸಂಕಷ್ಟಕ್ಕೆ ತಳ್ಳಿತ್ತು. ಒಂದೆಡೆ ಅಜ್ಜಿಯ ಭಾರತಕ್ಕೆ ಬರುವ ಆಸೆಯನ್ನು ಮನ್ನಿಸಬೇಕೆ? ಅಥವಾ ತಾನು ಮನಸಾರೆ ಪ್ರೀತಿಸುವವಳನ್ನೇ ಮದುವೆಯಾಗಿ ಅಮೆರಿಕದಲ್ಲೇ ಇರಬೇಕೆ? ಎಂಬ ಪ್ರಶ್ನೆಗಳು ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದವು. ಕೊನೆಗೆ ಅಜ್ಜಿಯನ್ನು ಕಾಣಲು ತಾಯ್ನಾಡಿಗೆ ಹಿಂದಿರುಗಲು ನಿರ್ಧರಿಸಿದಾಗ ತನ್ನೊಂದಿಗೆ ತಾನು ಪ್ರೀತಿಸಿದ ಹುಡುಗಿ ಕೂಡ ಭಾರತಕ್ಕೆ ಬರುತ್ತಾಳೆಂದು ಅಂದುಕೊಂಡಿದ್ದರು. ಆದರೆ, 1962ರ ಇಂಡೋ-ಚೀನಾ ಯುದ್ಧದ ಕಾರಣ ಪೋಷಕರು ಆಕೆಯನ್ನು ಎಲ್ಲಿಗೂ ಹೋಗಲು ಬಿಡಲಿಲ್ಲ. ಇದಾದ ಬಳಿಕ ಅವರ ಸಂಬಂಧವೇ ದೂರವಾಯಿತು. ಇದೇ ನೋವಲ್ಲಿ ರತನ್ ಟಾಟಾ ಅವರು ಮದುವೆ ಆಗದೆ ಕೊನೆಯವರೆಗೂ ಒಂಟಿಯಾಗಿ ಇದ್ದರು. ಒಬ್ಬನನ್ನು ಪ್ರೀತಿಸಿ, ಅವಳನ್ನೇ ಮದುವೆಯಾಗುವ ಕನಸು ಕಂಡಿದ್ದ ಅವರು ತನ್ನ ಗೆಳತಿಯ ಸ್ಮೃತಿಯೊಂದಿಗೆ ಜೀವನದುದ್ದಕ್ಕೂ ಅವಿವಾಹಿತರಾಗಿಯೇ ಉಳಿದರು.
ನಾನು ಪ್ರೀತಿಸಿದ ಹುಡುಗಿ ಕೂಡ ಮದುವೆಯಾಗಲು ಭಾರತಕ್ಕೆ ಬರುವವಳಿದ್ದಳು. ಆದರೆ, ಭಾರತ-ಚೀನಾ ಯುದ್ಧ ನಮ್ಮನ್ನು ಒಂದಾಗಲು ಬಿಡಲೇ ಇಲ್ಲ. ಇದಾದ ಮೇಲೆ ನನ್ನ ಬದುಕಿನಲ್ಲಿ ಬಹಳ ಮಂದಿ ಮಹಿಳೆಯರು ಬಂದು ಹೋದರು. ನಾಲ್ಕು ಬಾರಿ ಮದುವೆಯಾಗುವ ನಿರ್ಧಾರಕ್ಕೂ ಬಂದಿದ್ದೆ. ಆದರೆ, ಕಾರಣಾಂತರಗಳಿಂದ ಆಗಲೇ ಇಲ್ಲ. ಯಾರೂ ತನ್ನ ಕೈಹಿಡಿಯಬಹುದು ಎಂದು ನನಗೆ ಅನಿಸಲಿಲ್ಲ ಎಂದು ರತನ್ ಟಾಟಾ ಅನೇಕ ಸಂದರ್ಭದಲ್ಲಿ ಅವರೇ ಹೇಳಿಕೊಂಡಿದ್ದರು.
ಮಾತೃಭೂಮಿಯ ಮೇಲಿನ ಗೌರವ ಮತ್ತು ಅಜ್ಜಿಯ ವಾತ್ಸಲ್ಯವು ಅವರನ್ನು ಸ್ವದೇಶಕ್ಕೆ ಹಿಂತಿರುಗುವಂತೆ ಮಾಡಿತು. 1962ರಲ್ಲಿ ಭಾರತಕ್ಕೆ ಮರಳಿದ ರತನ್ ಟಾಟಾ, ಇಡೀ ಪ್ರಪಂಚವೇ ಕೊಂಡಾಡುಂವತಹ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿ ಬೆಳೆಸಿದ್ದು ಈಗ ಇತಿಹಾಸ. ಅಗಲಿದ ಅವರ ಆತ್ಮಕ್ಕೆ ಶಾಂತಿ ಕೋರೋಣ..
ಇದನ್ನೂ ಓದಿ: ರತನ್ ಟಾಟಾ ನಿಧನಕ್ಕೆ ಬಾಲಿವುಡ್ ಕಂಬನಿ; ನಿಮ್ಮ ಪರಂಪರೆ ಪೀಳಿಗೆಗೆ ಸ್ಫೂರ್ತಿ ಎಂದ ಸೆಲಬ್ರಿಟಿಸ್