ಹೈದರಾಬಾದ್(ತೆಲಂಗಾಣ): ರಾಮೋಜಿ ಗ್ರೂಪ್ ಅಧ್ಯಕ್ಷ ದಿವಂಗತ ರಾಮೋಜಿ ರಾವ್ ಅವರಿಂದ ಸ್ಫೂರ್ತಿ ಪಡೆದು ದೇಶವನ್ನು ಬಲಿಷ್ಠಗೊಳಿಸಲು ಯುವಕರು ಆಯಾ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು ಎಂದು ಮಾಜಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಕರೆ ನೀಡಿದರು.
ಬುಧವಾರ ಸಿಕಂದರಾಬಾದ್‌ನ ಇಂಪೀರಿಯಲ್ ಗಾರ್ಡನ್‌ನಲ್ಲಿ ಬ್ರಹ್ಮಕುಮಾರೀಸ್ ಆಶ್ರಯದಲ್ಲಿ ಆಯೋಜಿಸಿದ್ದ ರಾಮೋಜಿ ರಾವ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
''ರಾಮೋಜಿ ರಾವ್ ಅವರಿಗೆ ಸಮಾಜ, ಅದರಲ್ಲೂ ಗ್ರಾಮೀಣ ಜನರು ಮತ್ತು ರೈತರ ಮೇಲೆ ಅಪಾರ ಪ್ರೀತಿ ಇತ್ತು. ಅವರು ಯಾವಾಗಲೂ ಜನಜೀವನದ ಮೇಲೆ ಬೆಳಕು ಚೆಲ್ಲಲು ಬಯಸುತ್ತಿದ್ದರು. ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಮೌಲ್ಯಗಳನ್ನು ಅನುಸರಿಸಿದ್ದರು. ಅವರ ಬಗ್ಗೆ ಇಂದಿನ ಪೀಳಿಗೆಗೆ ಮಾಹಿತಿ ನೀಡಬೇಕು. ಅನೇಕರು ರಾಮೋಜಿ ರಾವ್ ಅವರೊಂದಿಗಿನ ಒಡನಾಟ ಮತ್ತು ಅವರು ಕಲಿತ ವಿಷಯಗಳನ್ನು ವಿವಿಧ ವೇದಿಕೆಗಳಲ್ಲಿ ಹಂಚಿಕೊಳ್ಳಬೇಕು'' ಎಂದು ನಾಯ್ಡು ಹೇಳಿದರು.
''ರಾಮೋಜಿ ಅವರೊಂದಿಗಿನ ಒಡನಾಟದ ವಿಷಯಗಳನ್ನೆಲ್ಲ ಸಂಗ್ರಹಿಸಿ ಒಳ್ಳೆಯ ಪುಸ್ತಕಗಳನ್ನು ಹೊರತರಬೇಕು. ಮಹಾನ್ ವ್ಯಕ್ತಿಗಳು, ಸಮಾಜದ ಮೇಲೆ ಅವರು ಬೀರಿದ ಸಕಾರಾತ್ಮಕ ಪರಿಣಾಮಗಳೆಲ್ಲವೂ ಇತಿಹಾಸದಲ್ಲಿ ದಾಖಲಾಗಬೇಕು. ಅವರ ಪರಿಶ್ರಮ, ಸಮಾಜದ ಮೇಲಿನ ಪ್ರೀತಿ, ಜನರ ಪರವಾಗಿ ನಿಲ್ಲುವ ಹಂಬಲವನ್ನು ಯುವಕರು ಸ್ಪೂರ್ತಿಯಾಗಿ ಸ್ವೀಕರಿಸಬೇಕು. ಯುವಕರು ಉನ್ನತ ಸ್ಥಾನಕ್ಕೇರಿ, ಸಮಾಜವನ್ನು ಜಾಗೃತಗೊಳಿಸುವ ಮೂಲಕ ದೇಶವನ್ನು ಬಲಿಷ್ಠಗೊಳಿಸಲು ಇದು ಸಹಾಯವಾಗುತ್ತದೆ'' ಎಂದು ಸಲಹೆ ನೀಡಿದರು.
ಮುಂದುವರೆದು ಮಾತನಾಡುತ್ತಾ, ''ರಾಮೋಜಿ ರಾವ್ ಯಾವುದೇ ವಿಷಯವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಿದ್ದರು. ಸಾಮಾನ್ಯ ಕುಟುಂಬದಿಂದ ಬಂದಿದ್ದರೂ ಆತ್ಮವಿಶ್ವಾಸವನ್ನೇ ಬಂಡವಾಳವನ್ನಾಗಿಸಿ ಬದುಕಿನ ಪ್ರಯಾಣ ಪ್ರಾರಂಭಿಸಿದ್ದರು. ಅತ್ಯಂತ ಶಕ್ತಿಶಾಲಿ ಮತ್ತು ನುರಿತ ಸಾಹಸಿಯಾಗಿ ಬೆಳೆದರು'' ಎಂದು ಸ್ಮರಿಸಿದರು.
బ్రహ్మకుమారీస్ ఆధ్వర్యంలో బుధవారం సికింద్రాబాద్ లోని ఇంపీరియల్ గార్డెన్లో దివంగత శ్రీ రామోజీరావు గారి సంస్మరణార్థం నిర్వహించిన కార్యక్రమంలో నేను పాల్గొని శ్రద్ధాంజలి ఘటించాను. సమాజంపై అమితమైన ప్రేమ ఉన్న శ్రీ రామోజీరావు గారి జీవితం స్ఫూర్తిదాయకం. యువతరం ఆయన జీవితాన్ని స్ఫూర్తిగా… pic.twitter.com/MuYMtidfk2
— M Venkaiah Naidu (@MVenkaiahNaidu) July 17, 2024
ಪತ್ರಕರ್ತರ ಕಾರ್ಖಾನೆ 'ರಾಮೋಜಿ' - ವೆಂಕಯ್ಯ ನಾಯ್ಡು: ''ವಿಶೇಷವಾಗಿ, ತೆಲುಗು ಸಮಾಜ ಮತ್ತು ಭಾರತೀಯ ಪತ್ರಿಕೋದ್ಯಮದ ಮೇಲೆ ರಾಮೋಜಿ ರಾವ್ ಅವರ ಸಕಾರಾತ್ಮಕ ಪ್ರಭಾವ ಗಮನಾರ್ಹ. ಅವರನ್ನು ಪತ್ರಕರ್ತರ ಕಾರ್ಖಾನೆ ಎಂದೂ ಕರೆಯಬಹುದು. ತೆಲುಗು ಮಾಧ್ಯಮ ಕ್ಷೇತ್ರ, ಮುದ್ರಣ, ವಿದ್ಯುನ್ಮಾನ ಮತ್ತು ಡಿಜಿಟಲ್ ಮಾಧ್ಯಮ ಹೀಗೆ ನೀವು ಯಾವುದನ್ನೇ ಗಮನಿಸಿದರೂ ಮತ್ತು ಯಾವುದೇ ಸಂಸ್ಥೆಯಲ್ಲಿನ ಹೆಚ್ಚಿನ ಪತ್ರಕರ್ತರು 'ಈನಾಡು ಮತ್ತು 'ಈಟಿವಿ'ಯಲ್ಲಿ ತಮ್ಮ ಬೇರುಗಳನ್ನು ಹೊಂದಿರುತ್ತಾರೆ. ಅವರಲ್ಲಿ ಹಲವರು ಉನ್ನತ ಹುದ್ದೆಯಲ್ಲೂ ಇದ್ದಾರೆ. ಸಾಮಾನ್ಯ ಶಿಕ್ಷಣದಲ್ಲಿ ಓದಿದ ಎಷ್ಟೋ ಜನರಿಗೆ ಪತ್ರಿಕೋದ್ಯಮದ ಕೌಶಲ ಕಲಿಸಿ ಗುಣಮಟ್ಟದ ಪತ್ರಕರ್ತರಾಗಲು ತರಬೇತಿ ನೀಡಿದ ಕೀರ್ತಿ ರಾಮೋಜಿ ರಾವ್‌ಗೆ ಸಲ್ಲುತ್ತದೆ. ಮಣ್ಣಿನಿಂದ ಮಾಣಿಕ್ಯಗಳನ್ನು ಹೊರತೆಗೆಯುವಲ್ಲಿ ಮತ್ತು ಪ್ರತಿಭೆಗೆ ಸಾಣೆ ಹಿಡಿಯುವಲ್ಲಿ ಅವರಿಗೆ ಯಾರೂ ಸರಿಸಾಟಿಯಾಗಲಾರರು'' ಎಂದು ಬಣ್ಣಿಸಿದರು.
''ಪ್ರಜಾಪ್ರಭುತ್ವದ ಆಧಾರಸ್ತಂಭಗಳಲ್ಲಿ ಮಾಧ್ಯಮವೂ ಒಂದು. ಈ ಮಾಧ್ಯಮವನ್ನು ಜನರ ಹತ್ತಿರ ತರುವಲ್ಲಿ 'ಈನಾಡು', 'ಈಟಿವಿ' ಚುಕ್ಕಾಣಿ ಹಿಡಿದಿರುವ ಪ್ರಯತ್ನ ಅಪ್ರತಿಮ. ಜನರಿಗೆ ನಿಖರವಾದ ಮಾಹಿತಿಯನ್ನು ತ್ವರಿತವಾಗಿ ಒದಗಿಸಲು ಮತ್ತು ಸರ್ಕಾರದ ಯೋಜನೆಗಳ ಉತ್ತಮ ತಿಳುವಳಿಕೆಯನ್ನು ಸೃಷ್ಟಿಸಲು ರಾಮೋಜಿ ಅವರು ಮಾಧ್ಯಮದಲ್ಲಿ ತಂದ ಕ್ರಾಂತಿಕಾರಿ ಬದಲಾವಣೆಗಳು ಮತ್ತು ಕ್ಷೇತ್ರ ಮಟ್ಟದಲ್ಲಿ ಅವುಗಳ ಅನುಷ್ಠಾನವು ಲಕ್ಷಾಂತರ ಜನರ ಜೀವನದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ತಂದುಕೊಟ್ಟಿದೆ. ಪ್ರಜಾಪ್ರಭುತ್ವಕ್ಕೆ ಆಪತ್ತು ಬಂದಾಗಲೆಲ್ಲಾ ಮತ್ತು ರಾಜಕೀಯ ನಾಯಕರು ನಿರಂಕುಶ ಪ್ರವೃತ್ತಿಯಿಂದ ಪ್ರಜಾಪ್ರಭುತ್ವವನ್ನು ಅಣಕಿಸಿದಾಗಲೆಲ್ಲ ರಾಮೋಜಿ ರಾವ್ ಜನರ ಪರವಾಗಿ ಧೈರ್ಯದಿಂದ ನಿಲ್ಲುತ್ತಿದ್ದರು'' ಎಂದು ತಿಳಿಸಿದರು.
ಇದನ್ನೂ ಓದಿ: ರಾಮೋಜಿ ರಾವ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು