ರಾಮೇಶ್ವರಂ (ತಮಿಳುನಾಡು): ಶ್ರೀಲಂಕಾದ ನೌಕಾಪಡೆಯಿಂದ ತಮಿಳುನಾಡಿನ ಮೀನುಗಾರರ ಬಂಧನದ ಬಗ್ಗೆ ಭಾರತೀಯರಲ್ಲಿ ಸಾಕಷ್ಟು ಅಸಮಾಧಾನ ವ್ಯಕ್ತವಾಗಿದೆ. ಅಲ್ಲದೇ, ರಾಮೇಶ್ವರಂನಲ್ಲಿ ಮೀನುಗಾರುರು ಮುಷ್ಕರ ಸಹ ನಡೆಸುತ್ತಿದ್ದು, ಇದರ ಬಿಸಿ ಶ್ರೀಲಂಕಾದ ಕಚ್ಚತೀವು ಸೇಂಟ್ ಅಂತೋನಿ ಚರ್ಚ್ ಉತ್ಸವಕ್ಕೂ ತಟ್ಟಿದೆ. ಇಂದಿನಿಂದ ಆರಂಭವಾಗಿರುವ ಈ ಬಾರಿ ಉತ್ಸವವನ್ನು ಮೀನುಗಾರರು ಬಹಿಷ್ಕರಿಸಿದ್ದಾರೆ.
ಫೆಬ್ರವರಿ 4ರಂದು ರಾಮೇಶ್ವರಂನಿಂದ ಎರಡು ದೋಣಿಗಳಲ್ಲಿ 23 ಮೀನುಗಾರರು ಸಮುದ್ರಕ್ಕೆ ಇಳಿದಿದ್ದರು. ಆ ವೇಳೆ ಗಸ್ತು ತಿರುಗುತ್ತಿದ್ದ ಶ್ರೀಲಂಕಾ ನೌಕಾಪಡೆಯು ಭಾರತೀಯ ಮೀನುಗಾರರು ಕಡಲ ಗಡಿ ರೇಖೆಯನ್ನು ದಾಟಿ ಮೀನುಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಎಲ್ಲ 23 ಮೀನುಗಾರರನ್ನು ಬಂಧಿಸಿ, ದೋಣಿಗಳನ್ನು ವಶಪಡಿಸಿಕೊಂಡಿದೆ.
ನಂತರ ಊರುಕಾವಲ್ ನ್ಯಾಯಾಲಯಕ್ಕೆ ಈ ಮೀನುಗಾರರನ್ನು ಹಾಜರುಪಡಿಸಲಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಬಂಧಿತ 23 ಮೀನುಗಾರರ ಪೈಕಿ 20 ಮಂದಿಯನ್ನು ಖುಲಾಸೆಗೊಳಿಸಿದ್ದಾರೆ. ಆದರೆ, ಇಬ್ಬರು ದೋಣಿ ಚಾಲಕರಿಗೆ ತಲಾ 6 ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ. ಮತ್ತೊಬ್ಬ ಬಂಧಿತ ಮೀನುಗಾರ ಎರಡನೇ ಬಾರಿ ಗಡಿ ದಾಟಿದ ಆರೋಪದ ಮೇಲೆ ಒಂದು ವರ್ಷ ಜೈಲು ಶಿಕ್ಷೆ ಪ್ರಕಟಿಸಲಾಗಿದೆ. ಅಲ್ಲದೇ, ನಿನ್ನೆ (ಫೆ.22) ಮತ್ತೋರ್ವ ಮೀನುಗಾರನಿಗೆ ಆರು ತಿಂಗಳ ಶಿಕ್ಷೆ ವಿಧಿಸಲಾಗಿದೆ.
ಮೀನುಗಾರರ ಮುಷ್ಕರ: ಈ ಮೀನುಗಾರರ ಬಂಧನ ಖಂಡಿಸಿ ರಾಮೇಶ್ವರಂ ಮೀನುಗಾರರು ಫೆ.17ರಿಂದ ನಿರಂತರವಾಗಿ ಮುಷ್ಕರ ನಡೆಸುತ್ತಿದ್ದಾರೆ. ಈ ಮುಷ್ಕರದಿಂದ ಸರ್ಕಾರಕ್ಕೆ ದಿನಕ್ಕೆ ಸುಮಾರು 10 ಕೋಟಿ ರೂ. ಆದಾಯ ನಷ್ಟವಾಗುತ್ತಿದೆ ಎನ್ನಲಾಗಿದೆ. ಅಷ್ಟೇ ಅಲ್ಲ, ಮೀನುಗಾರಿಕೆ ಉದ್ಯಮವನ್ನು ಅವಲಂಬಿಸಿರುವ 5,000ಕ್ಕೂ ಹೆಚ್ಚು ಕಾರ್ಮಿಕರ ಜೀವನೋಪಾಯದ ಮೇಲೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿಯೂ ಪರಿಣಾಮ ಬೀರಿದೆ.
ಉತ್ಸವ ಬಹಿಷ್ಕಾರ: ಭಾರತೀಯ ಮೀನುಗಾರರ ಈ ಕೋಪ ಶ್ರೀಲಂಕಾದ ಕಚ್ಚತೀವು ಸೇಂಟ್ ಅಂತೋನಿ ಚರ್ಚ್ ಉತ್ಸವಕ್ಕೂ ತಟ್ಟಿದೆ. ಇಂದಿನಿಂದ (ಫೆ.23, 24) ಆರಂಭವಾಗಿರುವ ಎರಡು ದಿನಗಳ ಕಚ್ಚತೀವು ಉತ್ಸವಕ್ಕೆ ತೆರಳಲು ತಮ್ಮ ದೋಣಿಗಳನ್ನು ನೀಡುವುದಿಲ್ಲ ಎಂದು ಮೀನುಗಾರರು ಘೋಷಿಸಿದ್ದಾರೆ. ಹೀಗಾಗಿ ಭಾರತದ ವಿವಿಧ ಭಾಗಗಳ ಭಕ್ತರು ಉತ್ಸವದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ.
ಪ್ರತಿ ವರ್ಷ ಫೆ.23 ಮತ್ತು 24ರಂದು ಕಚ್ಚತೀವಿನಲ್ಲಿ ಅತ್ಯಂತ ವಿಜೃಂಭಣೆಯಿಂದ ಉತ್ಸವ ನಡೆಯುತ್ತದೆ. ಭಾರತೀಯರು ಸೇರಿದಂತೆ ಸಾವಿರಾರು ಜನರು ಪಾಲ್ಗೊಳ್ಳುತ್ತಾರೆ. ಈ ವರ್ಷ ಕೂಡ ಭಾರತದಿಂದ ಅಂದಾಜು 3,500 ಜನರು ಉತ್ಸವಕ್ಕೆ ಹೋಗಲು ನೋಂದಾಯಿಸಿಕೊಂಡಿದ್ದರು. ಆದರೆ, ರಾಮೇಶ್ವರಂ ಮೀನುಗಾರರು ಉತ್ಸವವನ್ನು ಬಹಿಷ್ಕರಿಸಿರುವುದಿರಂದ ಯಾತ್ರಿಕರಲ್ಲಿ ನಿರಾಶೆ ಮೂಡಿಸಿದೆ. ಮತ್ತೊಂದೆಡೆ, ಗುರುವಾರ ನಾಡದೋಣಿ ಮೀನುಗಾರರ ಸಂಘ ಸಭೆ ಸೇರಿ ನಾಳೆಯಿಂದ (ಫೆ.24) ಉಪವಾಸ ಸತ್ಯಾಗ್ರಹ ಮಾಡುವುದಾಗಿ ಪ್ರಕಟಿಸಿದೆ.
ಇದನ್ನೂ ಓದಿ: 19 ಭಾರತೀಯರ ಮೀನುಗಾರರ ಬಂಧಿಸಿದ ಶ್ರೀಲಂಕಾ ನೌಕಾಪಡೆ