ಯಾದಾದ್ರಿ ಭುವನಗಿರಿ, ತೆಲಂಗಾಣ: ಇಲ್ಲಿನ ಯಾದಾದ್ರಿ ಭುವನಗಿರಿ ಜಿಲ್ಲೆಯ ಚಿಲ್ಲಾಪುರಂ ಗ್ರಾಮದಲ್ಲಿನ ವರ್ಷದಲ್ಲಿ ಒಂದು ದಿನ ಮಾತ್ರ ಭಕ್ತರಿಗೆ ದರ್ಶನ ನೀಡುವ ಸುಪ್ರಸಿದ್ಧ ಶ್ರೀರಾಮಲಿಂಗೇಶ್ವರಸ್ವಾಮಿ ದೇವಸ್ಥಾನದ ಬಾಗಿಲನ್ನು ಇಂದು ಬೆಳಗ್ಗೆ ಸಂಪ್ರದಾಯದಂತೆ ತೆರೆಯಲಾಯಿತು.
ಪ್ರತಿ ವರ್ಷ ಕಾರ್ತಿಕ ಪೌರ್ಣಮಿ ದಿನದಂದು ಮಾತ್ರ ಬಾಗಿಲು ತೆರೆಯುವ ಸಂಪ್ರದಾಯವನ್ನು ತಲೆತಲೆಮಾರುಗಳಿಂದ ನಡೆಸಿಕೊಂಡು ಬರಲಾಗುತ್ತಿದ್ದು, ಅದರಂತೆ ಇಂದು ಬೆಳಗ್ಗೆ ದೇವಸ್ಥಾನದ ಬಾಗಿಲನ್ನು ತೆರೆಯಲಾಯಿತು. ಕೋಟ್ಯಂತರ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.
ಪ್ರತಿ ಕಾರ್ತಿಕ ಹುಣ್ಣಿಮೆಯಂದು 24 ಗಂಟೆಗಳ ಕಾಲ ಬಾಗಿಲು ತೆರೆಯುವ ವಿಶೇಷ ದೇವಾಲಯ ಎಂದೂ ಕರೆಸಿಕೊಳ್ಳುವ ಶ್ರೀರಾಮಲಿಂಗೇಶ್ವರಸ್ವಾಮಿ ದೇವಸ್ಥಾನದಲ್ಲಿ ಇಂದು ಬೆಳಗಿನಿಂದ ವಿಶೇಷ ಪೂಜೆ, ರುದ್ರಾಭಿಷೇಕ ನಡೆಯುತ್ತಿವೆ. ಸ್ಥಳೀಯರು ಅಷ್ಟೇ ಅಲ್ಲದೇ ರಾಜ್ಯದ ವಿವಧ ಜಿಲ್ಲೆಗಳಿಂದ ಬರುತ್ತಿರುವ ಭಕ್ತರು, ರಾಮಲಿಂಗೇಶ್ವರ ಸ್ವಾಮಿಯ ದರ್ಶನ ಪಡೆದು ತೆರಳುತ್ತಿರುವುದು ಸಾಮಾನ್ಯವಾಗಿತ್ತು. ಅದಕ್ಕೂ ಮುನ್ನ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಸ್ವಾಮಿಯಲ್ಲಿ ಹರಕೆ ಮಾಡಿಕೊಂಡ ಭಕ್ತರು, ಹಲವು ರೀತಿಯ ಅಭಿಷೇಕ, ಮಾಡಿಸಿ ದೀಪಗಳನ್ನು ಬೆಳಗಿಸಿ ಪುನೀತರಾದರು. ಒಂದೇ ದಿನ ದರ್ಶನ ನೀಡುವ ದೇವರ ಕಾಣಲು ಭಕ್ತರ ದಂಡೇ ಹರಿದುಬರುತ್ತಿದ್ದು ವಿಶೇಷ.
ಈ ಶ್ರೀರಾಮಲಿಂಗೇಶ್ವರಸ್ವಾಮಿ ದೇವಸ್ಥಾನವು ತನ್ನದೇ ಆದ ಇತಿಹಾಸ ಹೊಂದಿದ್ದು, ಇದಕ್ಕೆ 900 ವರ್ಷಗಳ ಇತಿಹಾಸದ ನಂಟಿದೆ. 900 ವರ್ಷಗಳ ಹಿಂದೆ ಚಿಲ್ಲಾಪುರ ಗ್ರಾಮದಲ್ಲಿ ಎತ್ತರದ ದಿಬ್ಬದ ಮೇಲೆ ಶ್ರೀರಾಮಲಿಂಗೇಶ್ವರಸ್ವಾಮಿ ಕಾಣಿಸಿಕೊಂಡರು ಎಂಬುದನ್ನು ಇತಿಹಾಸದಲ್ಲಿ ಉಲ್ಲೇಖಿಸಿರುವುದು ಕಾಣಬಹುದಾಗಿದೆ. ಹಾಗಾಗಿ ಈ ಬೆಟ್ಟವನ್ನು ರಾಮಸ್ವಾಮಿ ಬೆಟ್ಟ ಎಂದೂ ಕರೆಯುತ್ತಾರೆ. ಕಾರ್ತಿಕ ಹುಣ್ಣಿಮೆಯಂದು ಮಾತ್ರ 24 ಗಂಟೆಗಳ ಕಾಲ ತೆರೆದಿರುವ ದೇವಾಲಯವು ವಿಶೇಷ. ಪೊಲೀಸ್ ಬಂದೋಬಸ್ತ್ ನಡುವೆ ಪ್ರತಿ ವರ್ಷದಂತೆ ಈ ವರ್ಷವೂ ಸಂಜೆ ಅಖಂಡ ದೀಪಾರಾಧನೆ ಕಾರ್ಯಕ್ರಮಗಳು ನಡೆಯಲಿದೆ. ಭಕ್ತರ ದಂಡೇ ಹರಿದುಬರುತ್ತಿರುವುದರಿಂದ ಎಲ್ಲೆಡೆ ಗಿಜಿಗುಡುವ ವಾತಾವರಣವಿದೆ.
ಇದನ್ನೂ ಓದಿ: ಕಾಶಿಯಲ್ಲಿ ದೇವ್ ದೀಪಾವಳಿ ಸಂಭ್ರಮ: ಮಹಿಳಾ ಸಬಲೀಕರಣಕ್ಕೆ ಸಮರ್ಪಣೆ, ಟಾಟಾಗೆ ಗೌರವ ನಮನ