ಅಯೋಧ್ಯೆ (ಉತ್ತರ ಪ್ರದೇಶ): ಭವ್ಯ ಮಂದಿರದಲ್ಲಿ ವಿರಾಜಮಾನವಾಗಿರುವ ಬಾಲರಾಮನ ದರ್ಶನಕ್ಕೆ ದೇಶದ ಮೂಲೆಮೂಲೆಯಿಂದ ಸಾಲುಗಟ್ಟಿ ಬರುತ್ತಿರುವ ಭಕ್ತರಿಂದಾಗಿ ರಾಮಜನ್ಮಭೂಮಿ ಅಯೋಧ್ಯೆ ತುಂಬಿ ತುಳುಕುತ್ತಿದೆ. ಪ್ರತಿದಿನ 1 ರಿಂದ 1.5 ಲಕ್ಷ ಭಕ್ತರು ಪ್ರಭು ಶ್ರೀರಾಮನ ದರ್ಶನ ಪಡೆಯುತ್ತಿದ್ದಾರೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಬುಧವಾರ ಮಾಹಿತಿ ನೀಡಿದೆ.
ಟ್ರಸ್ಟ್‌ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಮಾಹಿತಿ ಹಂಚಿಕೊಳ್ಳಲಾಗಿದೆ. ಶ್ರೀರಾಮನ ದರ್ಶನಕ್ಕಾಗಿ ಬೆಳಗ್ಗೆ 6:30 ರಿಂದ ರಾತ್ರಿ 9:30ರ ವರೆಗೆ ಪ್ರವೇಶಾವಕಾಶ ಇರಲಿದೆ. ಪ್ರವೇಶದಿಂದ ನಿರ್ಗಮಿಸುವವರೆಗಿನ ಪ್ರಕ್ರಿಯೆಯು ಅತ್ಯಂತ ಸರಳ ಮತ್ತು ಅನುಕೂಲಕರವಾಗಿದೆ. ಭಕ್ತರು 60 ರಿಂದ 75 ನಿಮಿಷಗಳ ಕಾ ಒಳಗೆ ಬಾಲರಾಮನ ಸುಗಮ ದರ್ಶನವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದೆ.
ಇನ್ನು, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಕೆಲ ಸಲಹೆಗಳನ್ನೂ ನೀಡಿರುವ ದೇವಸ್ಥಾನದ ಟ್ರಸ್ಟ್, ಭಕ್ತರು ದೇವಸ್ಥಾನ ಪ್ರವೇಶಿಸುವ ಮುನ್ನ ತಮ್ಮಲ್ಲಿರುವ ಮೊಬೈಲ್ ಫೋನ್, ಪಾದರಕ್ಷೆಗಳು, ಪರ್ಸ್ ಮತ್ತು ಇತರ ವೈಯಕ್ತಿಕ ವಸ್ತುಗಳನ್ನು ಮಂದಿರದ ಆವರಣದ ಹೊರಗೆ ಇಟ್ಟು ಬರಬೇಕು. ಇದರಿಂದ ಸಮಯ ಮತ್ತು ದರ್ಶನಕ್ಕೆ ಅಡ್ಡಿಯಾಗದು. ಜೊತೆಗೆ ದೇವರಿಗಾಗಿ ಹೂವು, ಮಾಲೆ, ಪ್ರಸಾದವನ್ನು ತರದಂತೆಯೂ ಅದು ಕೇಳಿಕೊಂಡಿದೆ.
ಆರತಿ ಸೇವೆ ಉಚಿತ, ಪಾಸ್ ಕಡ್ಡಾಯ: ಇನ್ನು ರಾಮನಿಗೆ ನಡೆಯುವ ತ್ರಿಕಾಲ ಆರತಿ ಸೇವೆಯಲ್ಲೂ ಭಕ್ತರು ಭಾಗವಹಿಸಬಹುದು ಎಂದು ಟ್ರಸ್ಟ್ ತಿಳಿಸಿದೆ. ಪ್ರತಿ ದಿನ ಮುಂಜಾನೆ 4 ಗಂಟೆಗೆ ಮಂಗಳಾರತಿ, 6:15 ಕ್ಕೆ ಶೃಂಗಾರ ಆರತಿ, ಮತ್ತು ರಾತ್ರಿ 10 ಗಂಟೆಗೆ ಶಯನ ಆರತಿ ನಡೆಯುತ್ತದೆ. ಪ್ರವೇಶ ಪಾಸ್ ಪಡೆದವರು ಮಾತ್ರ ಆರತಿ ಸೇವೆ ಮಾಡಬಹುದು. ಇತರ ಆರತಿಗಳಿಗೆ ಯಾವುದೇ ಪ್ರವೇಶ ಪಾಸ್ ಬೇಕಾಗಿಲ್ಲ. ಪಾಸ್ ಪಡೆಯಲು ಭಕ್ತರು ಹೆಸರು, ವಯಸ್ಸು, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಮತ್ತು ಊರಿನ ಮಾಹಿತಿಯನ್ನು ನೀಡಬೇಕು. ಈ ಪ್ರವೇಶ ಪಾಸ್ ಅನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ವೆಬ್‌ಸೈಟ್‌ನಿಂದ ಉಚಿತವಾಗಿ ಪಡೆಯಬಹುದು. ಯಾವುದೇ ಶುಲ್ಕ ನೀಡುವಂತಿಲ್ಲ ಎಂದು ತಿಳಿಸಿದೆ.
ಶುಲ್ಕ ಪಾವತಿಸಿ ಪಾಸ್ ಮೂಲಕ ವಿಶೇಷ ದರ್ಶನ ಪಡೆಯುವ ವ್ಯವಸ್ಥೆ ಇರುವುದಿಲ್ಲ. ವಿಶೇಷ ದರ್ಶನಕ್ಕೆ ಹಣ ಕೇಳಿದಲ್ಲಿ ಅದು ಮೋಸದ ಜಾಲವಾಗಿರುತ್ತದೆ. ಭಕ್ತರು ಈ ಬಗ್ಗೆ ಎಚ್ಚರ ವಹಿಸಬೇಕು. ಇದಕ್ಕೂ ಆಡಳಿತ ಮಂಡಳಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.
ಗಾಲಿ ಕುರ್ಚಿ ಸೇವೆ: ದೇವಸ್ಥಾನಕ್ಕೆ ಬರುವ ವಯೋವೃದ್ಧರು ಮತ್ತು ವಿಕಲಚೇತನರಿಗೆ ಗಾಲಿಕುರ್ಚಿ ಸೇವೆ ಲಭ್ಯವಿದೆ. ಇವುಗಳನ್ನು ಶ್ರೀರಾಮ ಜನ್ಮಭೂಮಿ ಮಂದಿರದ ಆವರಣದಲ್ಲಿ ಬಳಸಲು ಮಾತ್ರ ಅವಕಾಶವಿದೆ. ಅಯೋಧ್ಯೆಯ ಉಳಿದ ಮಂದಿರಕ್ಕೆ ಒಯ್ಯಲು ಅವಕಾಶವಿಲ್ಲ. ಇದಕ್ಕೆ ಯಾವುದೇ ಬಾಡಿಗೆ ಶುಲ್ಕವಿಲ್ಲ. ಆದರೆ, ಸಹಾಯ ಮಾಡುವ ಯುವ ಸ್ವಯಂಸೇವಕರಿಗೆ ಅತ್ಯಲ್ಪ ಶುಲ್ಕವನ್ನು ನೀಡಬಹುದು ಎಂದು ದೇವಸ್ಥಾನದ ಟ್ರಸ್ಟ್ ತಿಳಿಸಿದೆ. ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಭಕ್ತರ ದೇಣಿಗೆ ಹಣದಲ್ಲಿ ನಿರ್ಮಿಸಿದ ಭವ್ಯ ಮಂದಿರವನ್ನು ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ್ದರು.
ಇದನ್ನೂ ಓದಿ: ಅಯ್ಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸಂಕಲ್ಪ: 15 ವರ್ಷಗಳ ಮುಡಿ ಅರ್ಪಿಸಿದ ಹಿಂದೂ ಮುಖಂಡ