ಚಂಡೀಗಢ: ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಮಾಡಲು ಪಂಜಾಬ್‌ನ ಸರ್ಕಾರ ನಿರ್ಣಯ ಕೈಗೊಂಡಿದೆ. ಜೊತೆಗೆ 7 ಕಿಲೋ ವ್ಯಾಟ್‌ಗಿಂತ ಹೆಚ್ಚಿನ ಲೋಡ್‌ಗಳ ವಿದ್ಯುತ್ ಸಬ್ಸಿಡಿಯನ್ನು ಕೂಡಾ ರದ್ದು ಮಾಡಲಾಗಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.
ಪೆಟ್ರೋಲ್ ಬೆಲೆಯಲ್ಲಿ 61 ಪೈಸೆ, ಡಿಸೇಲ್ ಬೆಲೆಯನ್ನು 92 ಪೈಸೆ ಹೆಚ್ಚಿಸಲು ನಿರ್ಣಯ ಕೈಗೊಳ್ಳಲಾಗಿದೆ. ಮತ್ತೊಂದು ಪ್ರಮುಖ ನಿರ್ಣಯ ಎಂದರೆ, ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ 7 ಕಿಲೋ ವ್ಯಾಟ್ ವರೆಗೆ ನೀಡಲಾಗುತ್ತಿದ್ದ ವಿದ್ಯುತ್ ಸಬ್ಸಿಡಿ ಯೋಜನೆಯನ್ನೂ ಸರ್ಕಾರ ರದ್ದುಗೊಳಿಸಿದೆ.
ಈ ನಿರ್ಣಯದಿಂದಾಗಿ 1,500 ರಿಂದ 1,700 ಕೋಟಿ ಹಣ ಸಂಗ್ರಹವಾಗುತ್ತದೆ ಎಂದು ಹಣಕಾಸು ಸಚಿವ ಹರ್ಪಲ್ ಚೀಮಾ ತಿಳಿಸಿದ್ದಾರೆ. ಇಂಧನದ ಮೇಲಿನ ದರ ಹೆಚ್ಚಳದಿಂದ ಸರ್ಕಾರಕ್ಕೆ ವಾರ್ಷಿಕ 392 ಕೋಟಿ ಹಣ ಉಳಿಯುತ್ತದೆ. ಆದಾಗ್ಯೂ, ರಾಜ್ಯದ ಶೇ 90ರಷ್ಟು ನಿವಾಸಿಗಳಿಗೆ ನೀಡಲಾಗುತ್ತಿರುವ 300 ಯೂನಿಟ್‌ಗಳ ಉಚಿತ ವಿದ್ಯುತ್ ಮುಂದುವರಿಯುತ್ತದೆ ಎಂದು ಹೇಳಿದೆ.
ಉಚಿತ ವಿದ್ಯುತ್ ಯೋಜನೆಯನ್ನು 2023ರಿಂದ ರಾಜ್ಯದಲ್ಲಿ ನೀಡಲಾಗುತ್ತಿದ್ದು, ಕೃಷಿಗೂ ಕೂಡ ಉಚಿತ ವಿದ್ಯುತ್ ಪೂರೈಕೆಯ ಪ್ರಯೋಜನ ನೀಡಲಾಗುತ್ತಿದೆ. ಇದೀಗ ಕೈಗೊಂಡ ನಿರ್ಧಾರಗಳಿಂದಾಗಿ ಸರ್ಕಾರ ಹೆಚ್ಚುವರಿ ಆದಾಯವನ್ನು ಸಂಗ್ರಹಿಸುತ್ತದೆ ಎಂದಿದ್ದಾರೆ.
ಆದರೆ, ಇಂಧನ ಬೆಲೆ ಏರಿಕೆಯಿಂದಾಗಿ ಇತರ ಅಗತ್ಯ ವಸ್ತುಗಳ ಬೆಲೆ ಮೇಲೆ ಪರಿಣಾಮ ಬೀರಲಿದೆ ಎಂಬ ಟೀಕೆ ವ್ಯಕ್ತವಾಗಿದೆ. ಈಗಾಗಲೇ ಕೆಲವು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ. ಇದೀಗ ಇಂಧನದ ಬೆಲೆ ಏರಿಕೆ ಜನರಿಗೆ ಹೊರೆಯಾಗಿದ್ದು, ರಾಜ್ಯಾದ್ಯಂತ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಲಿದೆ.
ಈ ಕುರಿತು ಮಾತನಾಡಿರುವ ಸರ್ಕಾರ ಆಡಳಿತ ಸುಧಾರಣೆ ಮಾಡುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಖ್ಯಮಂತ್ರಿ ಭಗವತ್ ಮಾನ್ ಅವರ ನೇತೃತ್ವದಲ್ಲಿ ನಡೆದ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಪಂಜಾಬ್‌ನಲ್ಲಿ ಆಡಳಿತವನ್ನು ಸುಧಾರಿಸುವ ಮತ್ತು ಸ್ಥಿರವಾದ ಅಭಿವೃದ್ಧಿ ಕಾಪಾಡುವುದು ಎಎಪಿ ಸರ್ಕಾರ ಗುರಿಯಾಗಿದೆ ಎಂದು ಎಎಪಿ ಪಂಜಾಬ್‌ನ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.
ಎಎಪಿ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ ಇಂಧನದ ಬೆಲೆ ಮೂರನೇ ಬಾರಿ ಹೆಚ್ಚಿಸಿದೆ. ಎಎಪಿ ಸರ್ಕಾರ ಪೆಟ್ರೋಲಿಯಂ ವ್ಯಾಪಾರವನ್ನು ಕೊಲ್ಲುತ್ತಿದೆ ಎಂದು ಪೆಟ್ರೋಲ್ ಪಂಪ್ ಡೀಲರ್ಸ್ ಅಸೋಸಿಯೇಷನ್ ಪಂಜಾಬ್‌ನ ವಕ್ತಾರ ಮಾಂಟಿ ಸೆಹಗಲ್ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.
ಸರ್ಕಾರವೂ ಸಿಎನ್ಜಿ ಬಳಕೆ ಹೆಚ್ಚಿಸಲು ಹಸಿರು ಇಂಧನದ ಮೇಲೆ ವ್ಯಾಟ್ ಕಡಿಮೆ ಮಾಡಬೇಕು. ಈ ಮೂಲಕ ಅವುಗಳನ್ನು ಪೆಟ್ರೋಲ್ ಮತ್ತು ಡೀಸೆಲ್ಗಿಂತ ಅಗ್ಗ ಮಾಡಬೇಕು ಎಂದು ತಿಳಿಸಿದ್ದಾರೆ. ಸಚಿವ ಸಂಪುಟ ನಿರ್ಧಾರಕ್ಕೆ ಮುನ್ನ ಜಲಂಧರ್ನಲ್ಲಿ ಪೆಟ್ರೋಲ್ ಲೀಟರ್ಗೆ 96.17 ಮತ್ತು ಡೀಸೆಲ್ 86.32 ರೂ ಇತ್ತು. (ಐಎಎನ್ಎಸ್)
ಇದನ್ನೂ ಓದಿ: ಕೋಟಾದಲ್ಲಿ ಮತ್ತೊಬ್ಬ ನೀಟ್ ವಿದ್ಯಾರ್ಥಿ ಆತ್ಮಹತ್ಯೆ: ಇದು ಈ ವರ್ಷದ 15ನೇ ಪ್ರಕರಣ!