ಜಮ್ಮು: 2019ರ ಪುಲ್ವಾಮಾ ಉಗ್ರರ ದಾಳಿಯ ಆರೋಪಿ ಹೃದಯಾಘಾತದಿಂದ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಬಿಲಾಲ್ ಅಹ್ಮದ್ ಕುಂಚೆಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ರಾತ್ರಿ ಆತ ಹೃದಯ ವೈಫಲ್ಯದಿಂದ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಆರೋಪಿಯ ಪುಲ್ವಾಮಾದ ಕಾಕಪೊರ್ ನಿವಾಸಿಯಾಗಿದ್ದು, 2019ರ ಫೆಬ್ರವರಿ 14ರಂದು ಪುಲ್ವಾಮಾ ಜಿಲ್ಲೆಯ ಜಮ್ಮು ಮತ್ತು ಕಾಶ್ಮೀರ ಹೆದ್ದಾರಿಯ ಲೆಥಪೊರ್ನಲ್ಲಿ ಸೇನಾ ವಾಹನದ ಮೇಲೆ ದಾಳಿ ನಡೆಸಿದ್ದ. ಘಟನೆಯಲ್ಲಿ 40 ಸಿಆರ್‌ಪಿಎಫ್ ಯೋಧರು ಸಾವನ್ನಪ್ಪಿದ್ದರು.
ಸಿಆರ್‌ಪಿಎಫ್ ಯೋಧರು ತುಂಬಿದ್ದ ಟ್ರಕ್ ರಸ್ತೆಯ ಮಧ್ಯದಲ್ಲಿ ಸಾಗುತ್ತಿದ್ದಾಗ ಸ್ಫೋಟಕಗಳನ್ನು ತುಂಬಿದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಯೋಧರ ವಾಹನಗಳು ಹಾರಿ ಹೋಗಿದ್ದವು. ಇದಾದ ನಂತರ, ಮೊದಲೇ ಸಂಚು ರೂಪಿಸಿದ್ದ ಉಗ್ರರು ಸ್ಥಳದಲ್ಲಿಯೇ ಗುಂಡಿನ ದಾಳಿ ಆರಂಭಿಸಿದ್ದರು. ಈ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದು, 35 ಮಂದಿ ಗಾಯಗೊಂಡಿದ್ದರು.
ಈ ಭಯೋತ್ಪಾದನೆ ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ಇಸ್ಲಾಮಿಕ್ ಭಯೋತ್ಪಾದಕ ಗುಂಪಾದ ಜೈಶ್ - ಇ- ಮೊಹಮ್ಮದ್ (ಜೆಇಎಂ) ಹೊತ್ತಿತ್ತು. ಈ ದಾಳಿಯ ಬಳಿಕ ಭಾರತವು ತಕ್ಕ ಪ್ರತ್ಯುತ್ತರ ನೀಡಿದೆ. ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ಯ ಬಾಲಾಕೋಟ್ನಲ್ಲಿ ಭಯೋತ್ಪಾದಕ ಶಿಬಿರಗಳ ಮೇಲೆ ವಾಯುದಾಳಿ ನಡೆಸಿತ್ತು ಈ ಭಯೋತ್ಪಾದಕ ದಾಳಿಯ ಪ್ರಮುಖ ಮೂರು ಆರೋಪಿಗಳಲ್ಲಿ ಕುಚೆ ಕೂಡ ಒಬ್ಬನಾಗಿದ್ದು, ದಾಳಿಕೋರರಿಗೆ ಸಹಾಯ ಮಾಡುತ್ತಿದ್ದ ಈತನನ್ನು 2020ರಂದು ಬಂಧಿಸಲಾಗಿತ್ತು.
ಪುಲ್ವಾಮಾ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ತನಿಖೆಯಲ್ಲಿ 19 ಮಂದಿ ಆರೋಪಿಗಳನ್ನು ಗುರುತಿಸಲಾಗಿತ್ತು. ಆಗಸ್ಟ್ 2021ರಂದು ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ 6 ಮಂದಿಯನ್ನು ಸಾವನ್ನಪ್ಪಿದ್ದು, 7 ಜನರನ್ನು ಬಂಧಿಸಲಾಗಿತ್ತು. ಭಾರತ ಈ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಸಿಬ್ಬಂದಿಗಳಿಗೆ ಪ್ರತಿ ವರ್ಷ ಗೌರವ ನಮನ ಸಲ್ಲಿಸುತ್ತಾ ಬಂದಿದೆ. (ಐಎಎನ್ಎಸ್)
ಇದನ್ನೂ ಓದಿ: ಪುಲ್ವಾಮಾ ದಾಳಿ.. ಈಟಿವಿ ಭಾರತ್ಗೆ ಎಕ್ಸ್‌ಕ್ಲೂಸಿವ್ ಸಿಸಿಟಿವಿ ದೃಶ್ಯ ಲಭ್ಯ