ವಯಾನಾಡು (ಕೇರಳ): ಯುಡಿಎಫ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಅವರು ಇಂದಿನಿಂದ ಎರಡು ದಿನಗಳ ಕಾಲ ವಯನಾಡಿನಲ್ಲಿ ಭರ್ಜರಿ ಮತ ಪ್ರಚಾರ ನಡೆಸಲಿದ್ದಾರೆ. ಈ ವೇಳೆ ಅನೇಕ ಪ್ರಚಾರ ಸಭೆ, ಸಮಾವೇಶದಲ್ಲಿ ಅವರು ಭಾಗಿಯಾಗಲಿದ್ದು, ಮತದಾರರನ್ನು ಸೆಳೆಯಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ತಿಳಿಸಿದೆ.
ಕ್ಷೇತ್ರಕ್ಕೆ 11.20ರ ಸುಮಾರಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಪ್ರಿಯಾಂಕಾ, ಇಂದು ನೀಲಿಗಿರಿ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಸೈನ್ಸ್ನಿಂದ ತಮ್ಮ ಪ್ರಚಾರ ಆರಂಭಿಸಲಿದ್ದಾರೆ.
ಸುಲ್ತಾನ್ ಬಥೇರಿ ವಿಧಾನಸಭಾ ಕ್ಷೇತ್ರದಲ್ಲಿನ ಮೀನಂಗಡಿಯಲ್ಲಿ ಮೊದಲ ಸಭೆ ನಡೆಸಲಿದ್ದಾರೆ. ಇದಾದ ಬಳಿಕ 2.30ಕ್ಕೆ ಅವರು ಮಾನಂತವಾಡಿ ವಿಧಾನಸಭಾ ಕ್ಷೇತ್ರದ ಪನಮರದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದು, ಸಂಜೆ 4.30ಕ್ಕೆ ಕಲ್ಪೆಟ್ಟ ಕ್ಷೇತ್ರದ ಪೊಝುತಾನದಲ್ಲಿ ಅವರು ಮತ್ತೊಂದು ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗುವ ಮೂಲಕ ಇಂದಿನ ಪ್ರಚಾರ ಮುಗಿಸಲಿದ್ದಾರೆ.
ಮಂಗಳವಾರದಂದು ಎರಡನೇ ದಿನದ ಪ್ರಚಾರದದಲ್ಲಿ ಬೆಳಗ್ಗೆ 9.30ಕ್ಕೆ ತಿರುವಮಂಬಡಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇದಾದ ಬಳಿಕ ಎಂಗಪುಝದಲ್ಲಿ ಪ್ರಚಾರ ನಡೆಸಿ ಮಧ್ಯಾಹ್ನ 12.30ಕ್ಕೆ ಈರೋಡ್ನಲ್ಲಿ ಸಭೆ ನಡೆಸಲಿದ್ದಾರೆ. ಇದಾದ ಬಳಿಕ ತೆರಟ್ಟಮ್ಮಲ್ನಲ್ಲಿ ಮತಯಾಚಿಸಲಿದ್ದಾರೆ ಮಧ್ಯಾಹ್ನ 3ಗಂಟೆಗೆ ವಂಡೂರ್ ಮತ್ತು ಮಂಪಾಡ್ನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದು ಸಂಜೆ 4.30ಕ್ಕೆ ನೀಲಂಬೂರ್ನಲ್ಲಿ ಸಭೆ ಮುಕ್ತಾಯದ ಬಳಿಕ ಅವರು ಚುಂಗತರಾ ಕಡೆಗೆ ಸಾಗಲಿದ್ದಾರೆ.
ಅಕ್ಟೋಬರ್ 22ರಂದು ವಯನಾಡು ಲೋಕಸಭಾ ಉಪ ಚುನಾವಗೆ ನಾಮಪತ್ರ ಸಲ್ಲಿಕೆ ವೇಳೆ ಅವರು ಕಲ್ಪೆಟ್ಟದಲ್ಲಿ ತಮ್ಮ ಸಹೋದರ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ಹಾಗೂ ಮೈತ್ರಿ ಮುಖಂಡರೊಂದಿಗೆ ಭರ್ಜರಿ ರೋಡ್ ಶೋ ನಡೆಸಿದ್ದರು.
ರಾಹುಲ್ ಗಾಂಧಿ ಅವರ ರಾಜೀನಾಮೆಯಿಂದ ತೆರವಾಗಿರುವ ವಯನಾಡು ಲೋಕಸಭಾ ಕ್ಷೇತ್ರಕ್ಕೆ ಯುಡಿಎಫ್ ಅಭ್ಯರ್ಥಿಯಾಗಿ ಅವರು ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಇನ್ನು, ಈ ಎರಡು ದಿನದ ಪ್ರಚಾರ ಸಭೆಯಲ್ಲಿ ಅವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮತ್ತು ಯುಡಿಎಫ್ನ ನಾಯಕರು ಜೊತೆಯಾಗಲಿದ್ದಾರೆ.
ಪ್ರಿಯಾಂಕಾ ಅವರ ವಿರುದ್ಧ ಎಲ್ಡಿಫ್ ಹಿರಿಯ ನಾಯಕ ಸತ್ಯನ್ ಮೊಕೆರಿ ಮತ್ತು ಬಿಜೆಪಿಯಿಂದ ಮಾಜಿ ಶಾಸಕಿಯಾಗಿರುವ ನವ್ಯ ಹರಿದಾಸ್ ಕಣಕ್ಕೆ ಇಳಿದಿದ್ದಾರೆ. (ಪಿಟಿಐ)
ಇದನ್ನೂ ಓದಿ: ಕಿರೀಟ ಧರಿಸಿ ಮಿಸ್ ಇಂಡಿಯಾ ನಿಕಿತಾ ಪೋರ್ವಾಲ್ ಮಹಾಕಾಲ ದರ್ಶನ: ಆಕ್ಷೇಪ ವ್ಯಕ್ತಪಡಿಸಿದ ಅರ್ಚಕ