ನವದೆಹಲಿ: ಯುದ್ಧಪೀಡಿತ ಪ್ಯಾಲೆಸ್ಟೈನ್ಗೆ ಬೆಂಬಲ ಸೂಚಿಸಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ವಾದ್ರಾ ಅವರು 'ಪ್ಯಾಲೆಸ್ಟೈನ್' ಎಂಬ ಬರಹವುಳ್ಳ ವಿಶೇಷವಾಗಿ ರಚಿಸಿದ ಕೈಚೀಲವನ್ನು (ಬ್ಯಾಗ್) ಸೋಮವಾರ ಸಂಸತ್ತಿಗೆ ತಂದಿದ್ದಾರೆ. ಇದು ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದು, 'ಅತಿಯಾದ ಕೋಮು ಓಲೈಕೆ' ಎಂದು ಬಿಜೆಪಿ ಟೀಕಿಸಿದೆ.
ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಮಾತನಾಡಿ ಗಮನ ಸೆಳೆದಿದ್ದ ಪ್ರಿಯಾಂಕಾ ವಾದ್ರಾ ಇಂದು ಪ್ಯಾಲೆಸ್ಟೈನ್ ಬ್ಯಾಗ್ನಿಂದ ಟೀಕೆಗೆ ಗುರಿಯಾದರು.
ವಯನಾಡ್ ಸಂಸದೆ, ಗಾಜಾದಲ್ಲಿ ಇಸ್ರೇಲ್‌ನ ಕ್ರಮಗಳ ವಿರುದ್ಧ ಈ ಹಿಂದಿನಿಂದಲೂ ಧ್ವನಿ ಎತ್ತುತ್ತಾ ಬಂದಿದ್ದಾರೆ. ಅಲ್ಲಿನ ಜನರು ಮಾರಣಹೋಮದ ವಿರುದ್ಧ ಇಡೀ ವಿಶ್ವವೇ ಖಂಡಿಸಬೇಕು. ಅಲ್ಲಿನ ನಾಗರಿಕರು, ಮಹಿಳೆ, ಪುರುಷ, ವೈದ್ಯರು, ದಾದಿಯರು, ಪತ್ರಕರ್ತರು, ಶಿಕ್ಷಕರು, ಬರಹಗಾರರು, ಕವಿಗಳು, ಮುಗ್ಧ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಈ ನರಮೇಧ ನಿಲ್ಲಬೇಕು ಎಂದು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಕಚೇರಿಗೆ ಕರೆಸಿ ಅಭಿನಂದಿಸಿದ್ದ ಪ್ಯಾಲೆಸ್ಟೈನ್ ರಾಯಭಾರಿ: ಇತ್ತೀಚೆಗೆ ನಡೆದ ವಯನಾಡ್ ಲೋಕಸಭೆಯಲ್ಲಿ ಗೆಲುವು ಸಾಧಿಸಿದ ಪ್ರಿಯಾಂಕಾ ವಾದ್ರಾ ಅವರಿಗೆ ಪ್ಯಾಲೆಸ್ಟೈನ್ ರಾಯಭಾರಿ ಅಭಿನಂದನೆ ಸಲ್ಲಿಸಿದ್ದರು. ನವದೆಹಲಿಯಲ್ಲಿನ ಪ್ಯಾಲೆಸ್ಟೈನ್ ರಾಯಭಾರ ಕಚೇರಿಗೆ ಪ್ರಿಯಾಂಕಾರನ್ನು ಕರೆಸಿಕೊಂಡಿದ್ದ ರಾಯಭಾರಿಯು ಚುನಾವಣಾ ಗೆಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಟೀಕೆ: ಭಾರತದ ಸಂಸತ್ತಿನೊಳಗೆ ಪ್ಯಾಲೆಸ್ಟೈನ್ ಪರವಾದ ಬ್ಯಾಗ್ ಧರಿಸಿದ ಬಂದ ಪ್ರಿಯಾಂಕಾ ವಾದ್ರಾ ವಿರುದ್ಧ ಬಿಜೆಪಿ ಟೀಕಾಪ್ರಹಾರ ನಡೆಸಿದೆ. 140 ಕೋಟಿ ಭಾರತೀಯರ ಆಶಯವನ್ನು ಹೊತ್ತ ಸಂಸತ್ತಿನಲ್ಲಿ ದೂರದ ಪ್ಯಾಲೆಸ್ಟೈನ್ಗೆ ಬೆಂಬಲ ಸೂಚಿಸುವ ಪರಿಕರಗಳನ್ನು ತಂದ ಪ್ರಿಯಾಂಕಾರದ್ದು ಅತಿಯಾದ ಕೋಮು ಓಲೈಕೆಯಾಗಿದೆ ಎಂದು ಕುಟುಕಿದೆ.
ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಈ ಬಗ್ಗೆ ಮಾತನಾಡದ ಕಾಂಗ್ರೆಸ್ ನಾಯಕರು, ಮುಸ್ಲಿಂ ರಾಷ್ಟ್ರದಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಕಳವಳ ಹೊಂದಿದೆ. ಇದು ಆ ಪಕ್ಷದ ಮಾನಸಿಕತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕಿಡಿಕಾರಿದೆ.
At the end of this Parliament session, observe a two minute silence for everyone in the Congress, who believed Priyanka Vadra was the long-awaited solution, they should have embraced earlier. She is a bigger disaster than Rahul Gandhi, who thinks sporting a bag in support of… pic.twitter.com/UHofKVKdei
— Amit Malviya (@amitmalviya) December 16, 2024
ಕಾಂಗ್ರೆಸ್ ಹೊಸ ಮುಸ್ಲಿಂ ಲೀಗ್ ಪಕ್ಷ: ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ವಯನಾಡ್ ಸಂಸದೆಯ ನಡೆಯನ್ನು ಟೀಕಿಸಿದ್ದಾರೆ. ಪ್ರಿಯಾಂಕಾ ಅವರು ಪ್ರಜಾಪ್ರಭುತ್ವದ ಹೆಸರಿನಲ್ಲಿ ಕೋಮು ಬಣ್ಣವನ್ನು ತೋರಿಸಿದ್ದಾರೆ. ಪಕ್ಷದ ಮುಂದಿನ ನಾಯಕಿ ಎಂದು ಭಾವಿಸಿದ್ದ ಕಾಂಗ್ರೆಸ್ ನಾಯಕರು, ಸಂಸತ್ ಅಧಿವೇಶನದ ಕೊನೆಯಲ್ಲಿ ಎರಡು ನಿಮಿಷ ಮೌನಾಚಾರಣೆ ಮಾಡಬೇಕು. ಪ್ಯಾಲೆಸ್ಟೈನ್ ಬ್ಯಾಗ್ ಭಾರತದ ಸಂಸತ್ತಿನಲ್ಲಿ ತಂದಿದ್ದು ಕ್ರೂರ ಕೋಮುವಾದಿ ನಿಲುವು. ಕಾಂಗ್ರೆಸ್ ಹೊಸ ಮುಸ್ಲಿಂ ಲೀಗ್ ಪಕ್ಷವಾಗಿ ಬದಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: EVM ಹ್ಯಾಕ್ ಆರೋಪ ಮಾಡಿದ ಕಾಂಗ್ರೆಸ್ ವಿರುದ್ಧ ಮುಗಿಬಿದ್ದ I.N.D.I.A ಮಿತ್ರಪಕ್ಷಗಳು