ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿಯಲ್ಲಿ ನಡೆದ G7 ಶೃಂಗಸಭೆಯಲ್ಲಿ ಭಾಗವಹಿಸಿ ಶನಿವಾರ ನವದೆಹಲಿಗೆ ಮರಳಿದರು. ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೋದಿ ಅವರಿಗೆ ಇದು ಮೊದಲ ವಿದೇಶ ಪ್ರವಾಸವಾಗಿತ್ತು. ಇಟಲಿ ಪ್ರಧಾನಮಂತ್ರಿ ಜಾರ್ಜಿಯಾ ಮೆಲೋನಿ ಆಹ್ವಾನದ ಮೇರೆಗೆ 50ನೇ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಮಂತ್ರಿ ಇಟಲಿಗೆ ತೆರಳಿದ್ದರು.
ಇಟಲಿಯ ಅಪುಲಿಯಾದಲ್ಲಿ ನಡೆದ G7 ಶೃಂಗಸಭೆಯಲ್ಲಿ ವಿಶ್ವ ನಾಯಕರನ್ನು ಭೇಟಿಯಾಗಿ ವಿವಿಧ ವಿಷಯಗಳ ದ್ವಿಪಕ್ಷೀಯ ಮಾತುಕತೆ ನಡೆಸಿರುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಜಾಗತಿಕ ಸಮುದಾಯಕ್ಕೆ ಪ್ರಯೋಜನಕಾರಿ ಆಗುವ ಮತ್ತು ಭವಿಷ್ಯದ ಪೀಳಿಗೆಗೆ ಉತ್ತಮ ಜಗತ್ತನ್ನು ಸೃಷ್ಟಿಸುವ ಪರಿಣಾಮಕಾರಿ ಪರಿಹಾರಗಳನ್ನು ರಚಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಇಟಲಿಯ ಜನರು ಮತ್ತು ಅವರ ಸರ್ಕಾರದ ಆತ್ಮೀಯ ಆತಿಥ್ಯಕ್ಕಾಗಿ ನಾನು ಧನ್ಯವಾದ ಹೇಳುತ್ತೇನೆ ಎಂದೂ ಸಹ ಅವರು ಬರೆದುಕೊಂಡಿದ್ದಾರೆ.
ಶೃಂಗಸಭೆಯು ಏಳು ಸದಸ್ಯ ರಾಷ್ಟ್ರಗಳಾದ ಯುಎಸ್, ಯುಕೆ, ಕೆನಡಾ, ಜರ್ಮನಿ, ಇಟಲಿ, ಜಪಾನ್ ಮತ್ತು ಫ್ರಾನ್ಸ್ ಮತ್ತು ಯುರೋಪಿಯನ್ ಒಕ್ಕೂಟದ ಭಾಗವಹಿಸುವಿಕೆಯನ್ನು ಹೊಂದಿತ್ತು. ಜಿ7 ಶೃಂಗಸಭೆಯ ವಿಶ್ವ ವೇದಿಕೆಯಲ್ಲಿ ಭಾರತದ ದೃಷ್ಟಿಕೋನದ ಜೊತೆಗೆ ಜಾಗತಿಕ ವ್ಯವಹಾರಗಳಲ್ಲಿ ಆಫ್ರಿಕಾದ ಮಹತ್ವವನ್ನು ಸಹ ಪ್ರಧಾನಿ ಮೋದಿ ಪ್ರಸ್ತುತಪಡಿಸಿದರು.
G7 ಶೃಂಗಸಭೆಯಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಬ್ರಿಟಿಷ್ ಪಿಎಂ ರಿಷಿ ಸುನಕ್, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ, ಜಪಾನ್ ಪಿಎಂ ಫ್ಯೂಮಿಯೊ ಕಿಶಿಡಾ, ಅವರೊಂದಿಗೆ ಮೊದಲು ದ್ವಿಪಕ್ಷೀಯ ಮಾತುಕತೆ ನಡೆಸಿದ ಪ್ರಧಾನಿ ಮೋದಿ, ಬಳಿಕ AI ಮತ್ತು ಎನರ್ಜಿ, ಆಫ್ರಿಕಾ ಮತ್ತು ಮೆಡಿಟರೇನಿಯನ್ ಕುರಿತು ಅಧಿವೇಶನದಲ್ಲಿ ಸಂವಹನ ನಡೆಸಿದರು.
ಇದೇ ವೇದಿಕೆಯಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕದ ಅಧ್ಯಕ್ಷ ಜೋ ಬೈಡನ್, ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ, ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್, ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್, ಜೋರ್ಡಾನ್ ಕಿಂಗ್ ಅಬ್ದುಲ್ಲಾ ಮತ್ತು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಸೇರಿದಂತೆ ಹಲವು ವಿಶ್ವ ನಾಯಕರನ್ನು ಭೇಟಿ ಮಾಡಿ ಅವರೊಂದಿಗೆ ಸಂವಾದ ನಡೆಸಿದರು. ಪೋಪ್ ಫ್ರಾನ್ಸಿಸ್ ಅವರನ್ನು ಸಹ ಭೇಟಿ ಮಾಡಿದ ಪ್ರಧಾನಿ ಮೋದಿ, ಭಾರತಕ್ಕೆ ಭೇಟಿ ನೀಡುವಂತೆ ಅವರಿಗೆ ಆಹ್ವಾನ ನೀಡಿದರು.
ಶುಕ್ರವಾರ ಜಿ-7 ಶೃಂಗಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಮಾನವ ಪ್ರಗತಿಯಲ್ಲಿ ತಂತ್ರಜ್ಞಾನದ ಪರಿವರ್ತಕ ಪಾತ್ರವನ್ನು ಒಳಗೊಂಡಂತೆ ವಿವಿಧ ವಿಷಯಗಳ ಮೇಲೆ ಬೆಳಕು ಚೆಲ್ಲಿದರು. ತಂತ್ರಜ್ಞಾನದ ವ್ಯಾಪಕ ಬಳಕೆಯ ಜೊತೆಗೆ ಸೈಬರ್ ಭದ್ರತೆಯ ಪ್ರಾಮುಖ್ಯತೆ ಬಗ್ಗೆಯೂ ಅವರು ಪ್ರಸ್ತಾಪಿಸಿದರು.
ಹಸಿರು ಯುಗದ ಬಗ್ಗೆ ಒತ್ತಿ ಹೇಳಿದ ಪ್ರಧಾನಿ, ನಾವೆಲ್ಲರೂ ಒಟ್ಟಾಗಿ ಹಸಿರು ಯುಗದತ್ತ ಹೆಜ್ಜೆ ಹಾಕಬೇಕು. ಇದಕ್ಕಾಗಿ ಎಲ್ಲರೂ ಶ್ರಮಿಸಬೇಕಾಗಿದೆ. ತಂತ್ರಜ್ಞಾನದ ಬಳಕೆಯಲ್ಲೂ ಸಾಮಾಜಿಕ ಅಸಮಾನತೆಗಳನ್ನು ಕಡಿಮೆ ಮಾಡಲು ಸಹಕಾರಿ ಪ್ರಯತ್ನಗಳು ನಡೆಯಬೇಕು. ಉತ್ತಮ ಭವಿಷ್ಯವನ್ನು ನಿರ್ಮಿಸಲು ಭಾರತವು 'ಮಾನವ - ಕೇಂದ್ರಿತ' ವಿಧಾನದ ಕಡೆಗೆ ಕೆಲಸ ಮಾಡುತ್ತಿದೆ ಎಂದು ಹೇಳಿದ್ದರು.
ಇದನ್ನೂ ಓದಿ: G-7 ಶೃಂಗಸಭೆ: ಜಾಗತಿಕ ವ್ಯವಹಾರಗಳಲ್ಲಿ ಆಫ್ರಿಕಾದ ಮಹತ್ವ ವಿವರಿಸಿದ ಪ್ರಧಾನಿ ನರೇಂದ್ರ ಮೋದಿ - G7 Summit