ವಾರಾಣಸಿ (ಉತ್ತರಪ್ರದೇಶ): ಕಾಶಿ ವಿಶ್ವನಾಥನ ದೇಗುಲ ಎಂದು ಹೇಳಲಾಗುವ ವಿವಾದಿತ ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ನಡೆಯುತ್ತಿರುವ ಪೂಜೆ ನಿಲ್ಲಿಸಬೇಕೇ ಅಥವಾ ಮುಂದುವರಿಸಬೇಕೆ ಎಂಬ ಬಗ್ಗೆ ಸೋಮವಾರ ಅಲಹಾಬಾದ್ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ. ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರ ಏಕಸದಸ್ಯ ಪೀಠವು ಅರ್ಜಿಯನ್ನು ಹೊಸದಾಗಿ ವಿಚಾರಣೆ ನಡೆಸಲಿದೆ.
ಜನವರಿ 31 ರಂದು ವಾರಾಣಸಿ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿಯಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅವಕಾಶ ನೀಡಿತು. ವ್ಯಾಸ್ ಜಿ ಅವರ ಪೂರ್ವಜರು ಇಲ್ಲಿ ಪೂಜೆ ನಡೆಸುತ್ತಾ ಬಂದಿದ್ದರು ಎಂಬ ವಾದಕ್ಕೆ ಕೋರ್ಟ್ ಮನ್ನಣೆ ನೀಡಿತ್ತು. ಇದರ ವಿರುದ್ಧ ಮುಸ್ಲಿಂ ಪಕ್ಷಗಾರರು ಸುಪ್ರೀಂಕೋರ್ಟ್ಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರು. ಜ್ಞಾನವಾಪಿಯ ನೆಲಮಾಳಿಗೆಯಲ್ಲಿ ಮಾಡಲಾಗುತ್ತಿರುವ ಪೂಜೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಕೋರಲಾಗಿತ್ತು. ಆದರೆ, ಇದನ್ನು ವಿಚಾರಣೆ ನಡೆಸಲು ಕೋರ್ಟ್ ನಿರಾಕರಿಸಿ, ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಸೂಚಿಸಿತ್ತು.
ಫೆಬ್ರವರಿ 6 ರಂದು ಅಲಹಾಬಾದ್ ಹೈಕೋರ್ಟ್ ಮುಸ್ಲಿಂ ಮತ್ತು ಹಿಂದೂ ಪರರ ಅರ್ಜಿಯ ವಿಚಾರಣೆಯ ವೇಳೆ ವಾಗ್ವಾದ ನಡೆದಿತ್ತು. ಇದರ ವಿರುದ್ಧ ಕೋರ್ಟ್, ಕೇಸ್ ದಾಖಲಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು. ನೆಲಮಾಳಿಗೆಯಲ್ಲಿ ವ್ಯಾಸ್ ಜಿ ಅವರ ಕುಟುಂಬ ಹಿಂದಿನಿಂದಲೂ ಪೂಜೆ ಸಲ್ಲಿಸುತ್ತಾ ಬಂದಿದೆ ಎಂದು ಹಿಂದೂ ಪಕ್ಷಗಾರರು ವಾದಿಸಿದ್ದರು. ಇದರ ವಿರುದ್ಧ ಮುಸ್ಲಿಮರು ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಕೋರ್ಟ್ ವಿಚಾರಣೆಯನ್ನ ಫೆಬ್ರವರಿ 12 ರಂದು ಮುಂದೂಡಿತ್ತು.
ಐದು ಬಾರಿ ಪೂಜೆ: ವಾರಾಣಸಿ ನ್ಯಾಯಾಲಯವು ಪೂಜೆಗೆ ಅನುಮತಿ ನೀಡಿದ ನಂತರ, ಜ್ಞಾನವಾಪಿ ಮಸೀದಿ - ಶೃಂಗಾರ ಗೌರಿ ಸಂಕೀರ್ಣದಲ್ಲಿ ಹಿಂದೂ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಿರುವ ಹಿಂದೂ ಪಕ್ಷಗಾರರ ಕಡೆಯವರು 5 ಬಾರಿ ಅಲ್ಲಿರುವ ಮೂರ್ತಿಗಳಿಗೆ ಆರತಿ ಮಾಡುತ್ತಿದ್ದರು. ಅಲ್ಲದೇ, ಯಾವ್ಯಾವ ಕಾಲಕ್ಕೆ ಆರತಿ ನಡೆಯುತ್ತೆ ಎಂಬ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು. ನೆಲಮಾಳಿಗೆಯಲ್ಲಿ ಪ್ರತಿದಿನವೂ ವಿಶೇಷ ಪೂಜೆ ಜರುಗಲಿದೆ. ಸಂಕೀರ್ಣದೊಳಗಿನ 'ವ್ಯಾಸ್ ಕಾ ತೆಹಖಾನಾ'ದಲ್ಲಿ ಪ್ರತಿದಿನ ಆರತಿ ಬೆಳಗಲಾಗುತ್ತದೆ ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದರು.
ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ವಿಷ್ಣು ಶಂಕರ್ ಜೈನ್ ಮಾಹಿತಿ ಹಂಚಿಕೊಂಡಿದ್ದರು. ಪ್ರತಿದಿನ ಐದು ಆರತಿಗಳು ನಡೆಯಲಿವೆ. ಮಂಗಳಾರತಿ- ಬೆಳಗ್ಗೆ 3:30, ಭೋಗ್ - ಮಧ್ಯಾಹ್ನ 12ಕ್ಕೆ, ಅಪರಾಹ್ನ ಆರತಿ - ಸಂಜೆ 4, ಸಂಯ್ಕಾಲ್- ಸಂಜೆ 7, ಶಯನ್ ಆರತಿ- ರಾತ್ರಿ 10:30ಕ್ಕೆ ಜರುಗಲಿದೆ ಎಂದು ತಿಳಿಸಿದ್ದರು.
ಇದನ್ನೂ ಓದಿ: ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಹಿಂದೂಗಳ ಪೂಜೆಗೆ ತಡೆ ನೀಡಲು ಅಲಹಾಬಾದ್ ಹೈಕೋರ್ಟ್ ನಕಾರ