ಚೆನ್ನೈ(ತಮಿಳುನಾಡು): ದೇವಸ್ಥಾನ, ಮಂಟಪಗಳು, ಖಾಸಗಿ ಸ್ಥಳಗಳಲ್ಲಿ ನಡೆಸುವ ಕಾರ್ಯಕ್ರಮಗಳಿಗೆ ಅನುಮತಿ ಪಡೆಯುವ ಅಗತ್ಯವಿಲ್ಲ ಎಂಬ ರಾಜ್ಯ ಸರ್ಕಾರದ ನಿಯಮದನುಸಾರ ಅಯೋಧ್ಯೆ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಬಹುದು ಎಂದು ಮದ್ರಾಸ್ ಹೈಕೋರ್ಟ್ ಸೋಮವಾರ ಹೇಳಿದೆ. ರಾಮಭಜನೆ, ಅನ್ನದಾನಕ್ಕೂ ಅನುಮತಿ ಬೇಕಿಲ್ಲ ಎಂದಿದೆ.
ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರಪ್ರಸಾರವನ್ನು ರಾಜ್ಯದಲ್ಲಿ ತಡೆಯಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಧಾರ್ಮಿಕ ಮತ್ತು ಖಾಸಗಿ ಸ್ಥಳಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅನುಮತಿ ಬೇಕಾಗಿಲ್ಲ ಎಂದು ರಾಜ್ಯ ಸರ್ಕಾರವೇ ನಿಯಮ ರೂಪಿಸಿದೆ. ಹೀಗಾಗಿ ಅದರ ಅನುಸಾರ ಪೊಲೀಸರ ಅನುಮತಿ ಪಡೆಯಬೇಕಿಲ್ಲ ಎಂದು ಹೇಳಿದೆ.
ಧಾರ್ಮಿಕ ಸ್ಥಳಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ದೇವರ ಮೇಲಿನ ಭಕ್ತಿ ಮಾತ್ರ ಇರುತ್ತದೆ. ನಿಯಮಗಳನ್ನು ಹೇರಿ ಶಾಂತಿ, ಸಂತಸ ಮತ್ತು ಸಾಮಾಜಿಕ ಸಮತೋಲನ ಕದಡಬಾರದು ಎಂದು ಇದೇ ವೇಳೆ ಹೇಳಿದೆ.
ರಾಮಮಂದಿರ ನೇರಪ್ರಸಾರಕ್ಕೆ ಮುಕ್ತ ಅವಕಾಶ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯುತ್ತಿರುವ ಭವ್ಯ ಮಂದಿರದ ಉದ್ಘಾಟನೆ ಮತ್ತು ರಾಮಲಲ್ಲಾನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ನೇರಪ್ರಸಾರ ಮಾಡಲು ಸಂಘಟಕರಿಗೆ ಮುಕ್ತವಾಗಿ ಅವಕಾಶ ನೀಡಲಾಗುವುದು. ಇದು ಭಕ್ತಿಯ ಕಾರ್ಯಕ್ರಮ. ಹೀಗಾಗಿ ತಡೆ ಮತ್ತು ಅನುಮತಿ ಕೋರುವ ಅಗತ್ಯ ಬೀಳದು ಎಂದು ಅಭಿಪ್ರಾಯಪಟ್ಟಿದೆ.
ವಿವಾದವೇನು?: ಚೆನ್ನೈನ ಪಟ್ಟಾಭಿರಾಮ ಮಂಟಪದಲ್ಲಿ ಇಂದು ರಾಮ ಭಜನೆ ಮತ್ತು ಅನ್ನದಾನ ನಡೆಸಲು ಅವಕಾಶ ನೀಡಬೇಕು ಎಂದು ಎಲ್.ಗಣಪತಿ ಎಂಬುವವರು ಪೊಲೀಸರಲ್ಲಿ ಅವಕಾಶ ಕೋರಿದ್ದರು. ಆದರೆ, ಇದನ್ನು ಆರಕ್ಷಕರು ನಿರಾಕರಿಸಿದರು. ಇದರ ವಿರುದ್ಧ ಗಣಪತಿ ಅವರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಎನ್.ಆನಂದ್ ವೆಂಕಟೇಶ್ ಅವರು ವಿಚಾರಣೆ ನಡೆಸಿ ಈ ಆದೇಶ ನೀಡಿದ್ದಾರೆ.
ಸರ್ಕಾರದ ತಕರಾರೇನು?: ಸಾರ್ವಜನಿಕ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮಗಳನ್ನು ಮಾಡಿದಲ್ಲಿ ಅನಗತ್ಯ ಅಡಚಣೆಗಳು ಉಂಟಾಗುತ್ತವೆ. ಜನರ ನಿಯಂತ್ರಣ ಮತ್ತು ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು. ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಅಡಿಯಲ್ಲಿ ಬರುವ ದೇವಾಲಯಗಳಲ್ಲಿ ಯಾವುದೇ ಕಾರ್ಯಗಳನ್ನು ಆಯೋಜಿಸುವ ಮುನ್ನ ಸಂಬಂಧಪಟ್ಟವರು ಇಲಾಖೆಗೆ ಸಂಬಂಧಿಸಿದ ಅಧಿಕಾರಿಗೆ ಮುಂಚಿತವಾಗಿ ಮಾಹಿತಿ ನೀಡಿ ಅನುಮತಿ ಪಡೆಯಬೇಕು. ಇಲಾಖೆ ವಿಧಿಸುವ ಷರತ್ತುಗಳಿಗೆ ಒಳಪಟ್ಟು ಕಾರ್ಯಕ್ರಮ ನಡೆಸಬೇಕು ಎಂದು ಹೇಳಿದೆ.
ಅಯೋಧ್ಯೆಯಲ್ಲಿ ನಡೆಯುತ್ತಿರುವ ಭವ್ಯ ರಾಮಮಂದಿರ ಉದ್ಘಾಟನೆಯನ್ನು ನೇರಪ್ರಸಾರ ಮಾಡಬಾರದು ಎಂದು ಸರ್ಕಾರ ನಿರ್ಬಂಧ ಹೇರಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನು ಸರ್ಕಾರ ನಿರಾಕರಿಸಿದೆ.
ಇದನ್ನೂ ಓದಿ: ಜೈಲು ಗುಡಿಸಿ ಸಂಗ್ರಹಿಸಿದ ಹಣವನ್ನು ರಾಮ ಮಂದಿರಕ್ಕೆ ನೀಡಿದ ಮುಸ್ಲಿಂ ಯುವಕ