ಮುಂಬೈ: ಕಗ್ಗಂಟಾಗಿರುವ ಮಹಾರಾಷ್ಟ್ರ ಸಿಎಂ ವಿಚಾರ ಇನ್ನೆರಡು ದಿನಗಳಲ್ಲಿ ನಿರ್ಧಾರವಾಗಲಿದೆ ಎಂದು ಹಂಗಾಮಿ ಸಿಎಂ ಏಕನಾಥ್ ಶಿಂಧೆ ತಿಳಿಸಿದ್ದಾರೆ. ಬಿಜೆಪಿ ಹೈಕಮಾಂಡ್ ಭೇಟಿಯ ಬಳಿಕ ಶುಕ್ರವಾರ ಮಾತನಾಡಿರುವ ಅವರು, ನಾಯಕರೊಂದಿಗೆ ಉತ್ತಮ ಮತ್ತು ಸಕಾರಾತ್ಮಕ ಚರ್ಚೆಗಳು ನಡೆದಿದ್ದು, ಮುಂಬೈನಲ್ಲಿ ಮಹಾಯುತಿ ಮೈತ್ರಿಯ ಮತ್ತೊಂದು ಸಭೆಯ ಬಳಿಕ ಮಹಾರಾಷ್ಟ್ರ ಸಿಎಂ ಯಾರೆಂಬ ನಿರ್ಧಾರವಾಗಲಿದ ಎಂದರು.
ವಿಧಾನಸಭೆ ಚುನಾವಣೆಯಲ್ಲಿ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಕಂಡಿರುವ ಬಿಜೆಪಿ, ಸರ್ಕಾರ ರಚನೆಯಲ್ಲಿ ಹೆಚ್ಚಿನ ಲಾಭ ಪಡೆಯಲಿದ್ದು, ಕಿಂಗ್ ಮೇಕರ್ ಆಗಲಿದೆ. ಈ ಮಧ್ಯೆ, ಮಹಾಯುತಿ ಮೈತ್ರಿಯನ್ನು ಕಾಡುತ್ತಿರುವ ಮತ್ತೊಂದು ಪ್ರಶ್ನೆ ಎಂದರೆ, ಸಿಎಂ ಆಗಿ ಆಡಳಿತ ನಡೆಸಿದ ಏಕನಾಥ್ ಶಿಂಧೆಗೆ ಯಾವ ಸ್ಥಾನ ಸಿಗಲಿದೆ ಎಂಬುದಾಗಿದೆ. ಮೂಲಗಳ ಪ್ರಕಾರ, 132 ಸೀಟುಗಳನ್ನು ಗೆದ್ದ ಬಿಜೆಪಿಗೆ ಇದೊಂದು ದೊಡ್ಡ ಸವಾಲು ಕೂಡ ಆಗಿದೆ.
ಏಕನಾಥ್ ಶಿಂಧೆ ಮುಖ್ಯಮಂತ್ರಿ ಸ್ಥಾನದಿಂದ ಪಕ್ಕಕ್ಕೆ ಸರಿದಿದ್ದು, ಬಿಜೆಪಿ ಕೇಂದ್ರ ನಾಯಕತ್ವದಲ್ಲೇ ಸಿಎಂ ಆಯ್ಕೆ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದ್ದಾರೆ. ಈ ನಡುವೆ ಸಂಪುಟದಲ್ಲಿ ಗೃಹ, ಹಣಕಾಸು, ಕಂದಾಯ ಮತ್ತು ನಗರಾಭಿವೃದ್ಧಿಯಂತಹ ಪ್ರಮುಖ ಖಾತೆಗಳನ್ನು ಪಡೆಯಲು ಮೈತ್ರಿ ಪಕ್ಷಗಳು ಲಾಬಿ ನಡೆಸುತ್ತಿವೆ.
ಮೂಲಗಳ ಪ್ರಕಾರ, ಏಕನಾಥ್ ಶಿಂಧೆ ಉಪ ಮುಖ್ಯಮಂತ್ರಿ ಪಟ್ಟ ಸ್ವೀಕರಿಸಲು ಸಿದ್ಧರಿಲ್ಲ. ಆದರೆ, ಈ ಸ್ಥಾನವನ್ನು ಎನ್ಸಿಪಿಯ ಇತರೆ ನಾಯಕರಿಗೆ ನೀಡುವ ಮೂಲಕ ಹುದ್ದೆಯ ಮೇಲೆ ಅಧಿಕಾರ ಸ್ಥಾಪಿಸುವ ಬಯಕೆ ಹೊಂದಿದ್ದಾರೆ. ಪಕ್ಷದ ಮೂಲಗಳು ಹೇಳುವಂತೆ, ಶಿಂಧೆ ಗೃಹ ಮತ್ತು ನಗರಾಭಿವೃದ್ಧಿ ಖಾತೆಗೆ ಬೇಡಿಕೆ ಇಟ್ಟಿದ್ದಾರೆ. ಸಂಭಾವ್ಯ ಉಪ ಮುಖ್ಯಮಂತ್ರಿ ಎನ್ನಲಾಗುತ್ತಿರುವ ಅಜಿತ್ ಪವಾರ್ ಹಣಕಾಸು ಖಾತೆಯ ಮೇಲೂ ಕಣ್ಣಿಟ್ಟಿದ್ದಾರೆ.
ಸಿಎಂ ಸ್ಥಾನದ ಜೊತೆಗೆ ಬಿಜೆಪಿ ಗೃಹ ಖಾತೆಯನ್ನು ತಮ್ಮ ಬಳಿ ಇಟ್ಟುಕೊಳ್ಳುವ ಇರಾದೆ ವ್ಯಕ್ತಪಡಿಸಿದೆ. ಇದಕ್ಕೆ ಕಾರಣ, 2014ರಲ್ಲಿ ಸಿಎಂ ಆಗಿದ್ದ ದೇವೇಂದ್ರ ಫಡ್ನವೀಸ್ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿರುವುದು.
ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಶಾ ಮತ್ತು ನಡ್ಡಾ ವರನ್ನು ಭೇಟಿಯಾಗುವ ಮುನ್ನ ಮಹಾಯುತಿ ನಾಯಕರು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರನ್ನು ಭೇಟಿಯಾಗಿ 40 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ. ತಾವ್ಡೆ ಪ್ರತಿಕ್ರಿಯೆ ಪಕ್ಷಕ್ಕೆ ನಿರ್ಣಾಯಕವೂ ಆಗಿದೆ. ಬ್ರಾಹ್ಮಣರಾಗಿರುವ ಫಡ್ನವೀಸ್ಗೆ ಸಿಎಂ ಸ್ಥಾನ ನೀಡಿದಲ್ಲಿ, ಮರಾಠ ಮೀಸಲಾತಿ ವಿಚಾರ ಮತ್ತೆ ಮುನ್ನೆಲೆಗೆ ಬಂದು ಲಾಭ ಪಡೆಯುವ ಸಾಧ್ಯತೆ ಕೂಡ ಇದೆ ಎಂಬುದು ಇದೀಗ ನಾಯಕರ ಚಿಂತೆ.
ಇದನ್ನೂ ಓದಿ: ಶಿಂದೆ, ಪವಾರ್, ಫಡ್ನವೀಸ್ ಅಲ್ಲ: ಮಹಾರಾಷ್ಟ್ರ ಸಿಎಂ ಸ್ಥಾನಕ್ಕಾಗಿ ಬಿಜೆಪಿಯ ಈ ನಾಯಕರ ಮಧ್ಯೆ ಪೈಪೋಟಿ