ಪಣಜಿ: ಕೋವಿಡ್ ಬಳಿಕ ದೇಶದಲ್ಲಿ ಪ್ರವಾಸೋದ್ಯಮ ಗಣನೀಯ ಪ್ರಮಾಣದಲ್ಲಿ ಚೇತರಿಕೆ ಕಾಣುತ್ತಿದೆ. ಅದರಲ್ಲೂ ಪ್ರವಾಸಿಗರ ಪ್ರಮುಖ ಆಕರ್ಷಣೆಯ ತಾಣ ಗೋವಾದಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ವಿಶೇಷವೆಂದರೆ, ಇಲ್ಲಿ ವಿದೇಶಿ ಪ್ರವಾಸಿಗರಿಗಿಂತ ದೇಶಿ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಿದೆ ಎಂದು ಗೋವಾ ಪ್ರವಾಸೋದ್ಯಮ ಸಚಿವ ರೋಹನ್ ಖೌಂಟೆ ತಿಳಿಸಿದ್ದಾರೆ.
ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ ಅವರು, "ರಾಜ್ಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಅನೇಕ ವಿದೇಶಿ ಕಾರ್ಯಕ್ರಮಗಳನ್ನು ಆಯೋಜಿಸಲು ಸರ್ಕಾರ ಕ್ರಮಕ್ಕೆ ಮುಂದಾಗಿದೆ" ಎಂದರು. ಇದೇ ವೇಳೆ, "2019ರಲ್ಲಿ ಅಂದರೆ ಕೋವಿಡ್ಗೆ ಮುನ್ನ ಗೋವಾಕ್ಕೆ ಪ್ರತಿ ವರ್ಷ 71.27 ಲಕ್ಷ ದೇಶಿಯ ಪ್ರವಾಸಿಗರು ಭೇಟಿ ನೀಡಿದರೆ, 2022ರ ನವೆಂಬರ್ನಲ್ಲಿ ದೇಶಿಯ ಪ್ರವಾಸಿಗರ ಸಂಖ್ಯೆ 72 ಲಕ್ಷ ದಾಟಿದೆ" ಎಂದು ಹೇಳಿದರು.
"2019ರಲ್ಲಿ ಗೋವಾಗೆ 9.37 ಲಕ್ಷ ಅಂತಾರಾಷ್ಟ್ರೀಯ ಪ್ರವಾಸಿಗರು ಭೇಟಿ ನೀಡಿದರೆ, 2022ರಲ್ಲಿ 1.69 ಲಕ್ಷ ಮಂದಿ ಆಗಮಿಸಿದ್ದಾರೆ. ಕೋವಿಡ್ ಪರಿಣಾಮವಾಗಿ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ. 2023ರಲ್ಲಿ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆಯಲ್ಲಿ ಚೇತರಿಕೆ ಕಂಡಿದ್ದು, 4.03 ಲಕ್ಷ ಮಂದಿ ಪ್ರವಾಸಿಗರು ಆಗಮಿಸಿದ್ದು, 2022ರ ನವೆಂಬರ್ಗೆ ಹೋಲಿಸಿದಾಗ 2023ರ ನವೆಂಬರ್ನಲ್ಲಿ 138.69ರಷ್ಟು ಏರಿಕೆ ಕಂಡಿದೆ. ಅಂತಾರಾಷ್ಟ್ರೀಯ ಪ್ರವಾಸಿಗರಲ್ಲಿ ರಷ್ಯಾ ಮತ್ತು ಯುಕೆಯಿಂದ ಬಂದ ಪ್ರವಾಸಿಗರ ಸಂಖ್ಯೆ ಜಾಸ್ತಿ" ಎಂದು ಸಚಿವರು ವಿವರಣೆ ನೀಡಿದರು.
"ಈ ವರ್ಷ ನಾವು ಇಸ್ರೇಲ್ನಿಂದ ಹೆಚ್ಚು ಪ್ರವಾಸಿಗರನ್ನು ನಿರೀಕ್ಷೆ ಮಾಡಿದ್ದೆವು. ಆದರೆ, ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧ ಪ್ರವಾಸಿಗರ ಮೇಲೆ ಪರಿಣಾಮ ಬೀರಲಿದೆ. ಇದೀಗ ಉಜ್ಬೇಕಿಸ್ಥಾನದಿಂದ ಮೊದಲ ಚಾರ್ಟೆಡ್ ವಿಮಾನ ಹಾರಾಟ ನಡೆಸಿದೆ. ಇತರ ದೇಶದಿಂದ ಯಾವುದೇ ವಿಮಾನ ಹಾರಾಟ ನಡೆಸಿಲ್ಲ" ಎಂದರು.
ದೇಶಿ ಪ್ರವಾಸಿಗರನ್ನು ಗಮನದಲ್ಲಿರಿಸಿಕೊಂಡು ನಾವು ಕೆಲವು ಉತ್ತಮ ಕಾರ್ಯಕ್ರಮವನ್ನು ರೂಪಿಸಿದ್ದೇವೆ. ಇದೀಗ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆ ನಿಧಾನವಾಗಿ ಏರುತ್ತಿದೆ. ಆದರೆ, ಯುದ್ಧಗಳಿಂದ ಜನರು ದೇಶದಿಂದ ಹೊರಬರಲು ಹಿಂಜರಿಯುತ್ತಿದ್ದಾರೆ. ಜೊತೆಗೆ ಬ್ರಿಟಿಷ್ ನ್ಯಾಷನಲ್ಸ್ ಇ ವೀಸಾ ವಿಳಂಬ ಮತ್ತು ರಷ್ಯಾ-ಉಕ್ರೇನ್ ಯುದ್ದ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆ ಇಳಿಕೆಗೆ ಕಾರಣವಾಗಿದೆ. 2023ರ ಡಿಸೆಂಬರ್‌ನಲ್ಲಿ ನಡೆದ ಸಂಸತ್ ಅಧಿವೇಶನದಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವರು ಕೂಡ ಗೋವಾ ಪ್ರವಾಸೋದ್ಯಮದ ಕುರಿತು ಮಾಹಿತಿ ನೀಡಿದ್ದರು.(ಪಿಟಿಐ)
ಇದನ್ನೂ ಓದಿ: ಕೇರಳದಲ್ಲಿ ಕಳೆದಿದ್ದ ಏರ್ಪಾಡ್ಸ್ ಗೋವಾದಲ್ಲಿ ಪತ್ತೆ; ಪೊಲೀಸರಿಗೆ ಧನ್ಯವಾದ ಅರ್ಪಿಸಿದ ವ್ಯಕ್ತಿ