ನವದೆಹಲಿ: ನಗರ ಪ್ರದೇಶದಲ್ಲಿ ಇರುವ ಬಡವರಿಗೆ ನೆರವಾಗಲು ಮತ್ತು ಮಧ್ಯಮ ವರ್ಗದವರು ವಸತಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ಪ್ರಧಾನಿ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 10 ಸಾವಿರ ಕೋಟಿ ನೆರವು ಒದಗಿಸಲಾಗುವುದು. ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿ ಮೂರು ಕೋಟಿ ಮನೆಗಳನ್ನು ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು.
''ಮುಂದಿನ ತಲೆಮಾರನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ತಯಾರಿಸಲಾಗಿದ್ದು, ಪ್ರಧಾನ್ ಮಂತ್ರಿ ಗರೀಬ್ ಯೋಜನೆಯನ್ನು ಬಡವರಿಗೆ ತಲುಪಿಸಲಾಗುವುದು. ಶಕ್ತಿಶಾಲಿ ಭಾರತದ ನಿರ್ಮಾಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಿಕಾಸ್ ಭಾರತಕ್ಕಾಗಿ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ಈ ಬಜೆಟ್ ಮುಖ್ಯವಾಗಿ 9 ಪ್ರಮುಖ ಅಂಶಗಳತ್ತ ಗಮನಕೊಡಲಾಗಿದೆ. ಕೈಗಾರಿಕೆ, ಕೌಶಲ್ಯಾಭಿವೃದ್ಧಿ ಸೇರಿ ವಿವಿಧೆಡೆ ಸರ್ಕಾರ ಗಮನ ಹರಿಸಲಿದೆ ಎಂದ ಅವರು, ಭಾರತದ ಆರ್ಥಿಕತೆ ವೃದ್ಧಿಯಾಗಿದೆ. ಹಣದುಬ್ಬರ ನಿಯಂತ್ರಣದಲ್ಲಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ಐದು ವರ್ಷ ವಿಸ್ತರಣೆ ಮಾಡುತ್ತೇವೆ'' ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
ನಗರಾಭಿವೃದ್ಧಿಗೆ ಪ್ರಮುಖ ಆದ್ಯತೆ: ''ಆಯ್ದ 100 ನಗರಗಳಲ್ಲಿ ಫುಡ್ ಸ್ಟ್ರೀಟ್ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. 30 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ 14 ದೊಡ್ಡ ನಗರಗಳಲ್ಲಿ ನೀರು ಸರಬರಾಜು, ಒಳಚರಂಡಿ ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು. ಪ್ರಧಾನಮಂತ್ರಿ ಆವಾಸ್ ಯೋಜನೆ ನಗರ 3.0 ಅಡಿಯಲ್ಲಿ ಪ್ರಯೋಜನ ಸಿಗಲಿದೆ '' ಎಂದರು.
''ದೇಶದಲ್ಲಿ 30 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರಗಳಿಗೆ ಸಾರಿಗೆ ಆಧಾರಿತ ಅಭಿವೃದ್ಧಿಗೆ ಅಗತ್ಯ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆಗೂ ಆದ್ಯತೆ ಕೊಡಲಾಗಿದೆ'' ಎಂದರು.
ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ಜಾರಿ: ''ಪ್ರಧಾನ ಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ಆರಂಭಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ಮೇಲ್ಚಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಲಾಗುವುದು. ಈ ಯೋಜನೆಯಡಿ 1 ಕೋಟಿ ಕುಟುಂಬಗಳು 300 ಯೂನಿಟ್ ವಿದ್ಯುತ್ ಅನ್ನು ಪಡೆಯಲು ಪೂರಕವಾಗುತ್ತದೆ'' ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದರು.
ಇದನ್ನೂ ಓದಿ: ಕೇಂದ್ರ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ 1.52 ಲಕ್ಷ ಕೋಟಿ ರೂ: ನೈಸರ್ಗಿಕ ಕೃಷಿಗೆ ಉತ್ತೇಜನ - Agriculture Sector