ನವದೆಹಲಿ: ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ದಿಲ್ಲಿ ಉಚ್ಚ ನ್ಯಾಯಾಲಯವು ಸೋಮವಾರ ದಿಲ್ಲಿ ಪೊಲೀಸರು ಮತ್ತು ಕೇಂದ್ರ ಲೋಕಸೇವಾ ಆಯೋಗಕ್ಕೆ (ಯುಪಿಎಸ್ಸಿ) ನೋಟಿಸ್ ಜಾರಿ ಮಾಡಿದ್ದು, ಸದ್ಯಕ್ಕೆ ಅವರನ್ನು ಬಂಧಿಸದಂತೆ ಪೊಲೀಸರಿಗೆ ಆದೇಶಿಸಿದೆ. ಈ ಮೂಲಕ ಪೂಜಾ ಖೇಡ್ಕರ್ ಅವರಿಗೆ ನ್ಯಾಯಾಲಯ ತುಸು ನಿರಾಳತೆ ನಿಡಿದೆ.
ಜಿಲ್ಲಾ ನ್ಯಾಯಾಲಯವು ತಮಗೆ ಜಾಮೀನು ನೀಡದಿರುವುದನ್ನು ಪ್ರಶ್ನಿಸಿ ಪೂಜಾ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ನಿಗದಿತ ಸಂಖ್ಯೆಗಿಂತ ಹೆಚ್ಚು ಬಾರಿ ಯುಪಿಎಸ್ಸಿ ಪರೀಕ್ಷೆಗೆ ಹಾಜರಾಗಲು ಪೂಜಾ ಖೇಡ್ಕರ್ ತಮ್ಮ ವೈಯಕ್ತಿಕ ಗುರುತಿನ ಮಾಹಿತಿಗಳನ್ನು ತಿರುಚಿದ್ದಾರೆ ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ.
ವಾದ-ವಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ಅವರ ನ್ಯಾಯಪೀಠ, ಸದ್ಯ ಈ ವಿಷಯವು ವಿಚಾರಣೆಯಲ್ಲಿರುವಾಗ ಖೇಡ್ಕರ್ ಅವರನ್ನು ಬಂಧಿಸದಂತೆ ಪೊಲೀಸರಿಗೆ ನೀಡಿತು. ಆಕೆಯನ್ನು ತಕ್ಷಣಕ್ಕೆ ಬಂಧಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಅರ್ಜಿಯ ವಿಸ್ತೃತ ವಿಚಾರಣೆಯು ಆಗಸ್ಟ್ 21 ರಂದು ನಡೆಯಲಿದೆ.
ಪೂಜಾ ಖೇಡ್ಕರ್ ವಂಚನೆಯ ಸ್ಕೀಂ ತಯಾರಿಸುವಲ್ಲಿ ಮಾಸ್ಟರ್ ಮೈಂಡ್ ಆಗಿದ್ದಾಳೆ ಮತ್ತು ಇತರರ ಸಹಾಯವಿಲ್ಲದೆ ಈ ವಂಚನೆಯನ್ನು ಎಸಗಲು ಸಾಧ್ಯವಿಲ್ಲ. ಹೀಗಾಗಿ ಆಕೆಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವುದು ಅಗತ್ಯವಾಗಿದೆ ಎಂದು ಯುಪಿಎಸ್ಸಿ ವಾದಿಸಿತು.
ಕಳೆದ ವಾರ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು ಖೇಡ್ಕರ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಹೆಚ್ಚುವರಿ ಬಾರಿ ಯುಪಿಎಸ್ಸಿ ಪರೀಕ್ಷೆಗೆ ಹಾಜರಾಗಲು ಪೂಜಾ ಖೇಡ್ಕರ್ ತನ್ನ ವೈಯಕ್ತಿಕ ಗುರುತು ಪುರಾವೆಗಳನ್ನು ತಿರುಚಿರುವುದು ಗಂಭೀರ ಆರೋಪವಾಗಿದೆ ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ಹೇಳಿತ್ತು.
ವಿಚಾರಣಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ದೇವೇಂದರ್ ಕುಮಾರ್ ಜಂಗಲಾ, ಇಡೀ ಪಿತೂರಿಯನ್ನು ಬಹಿರಂಗಪಡಿಸಲು ಮತ್ತು ಇತರ ವ್ಯಕ್ತಿಗಳ ಪಾಲ್ಗೊಳ್ಳುವಿಕೆಯನ್ನು ಸಾಬೀತು ಪಡಿಸಲು ಆರೋಪಿಗಳ ಕಸ್ಟಡಿ ವಿಚಾರಣೆಯ ಅಗತ್ಯವಿದೆ ಎಂದು ಹೇಳಿದ್ದರು. ಆರೋಪಿಗಳ ಪರವಾಗಿ ನಿರೀಕ್ಷಣಾ ಜಾಮೀನಿನ ವಿವೇಚನಾ ಅಧಿಕಾರವನ್ನು ಚಲಾಯಿಸಲು ಇದು ಸೂಕ್ತವಾದ ಪ್ರಕರಣವಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.
ಆರೋಪಿಯ ವಿರುದ್ಧ ಸೆಕ್ಷನ್ 420, 468, 471, 120 ಬಿ ಐಪಿಸಿ, ಐಟಿ ಕಾಯ್ದೆಯ 66 ಡಿ ಮತ್ತು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ, 2016 ರ ಸೆಕ್ಷನ್ 89/91 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳ ಆರೋಪ ಹೊರಿಸಲಾಗಿದೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಅರ್ಜಿದಾರರು ತಮ್ಮ ಗುರುತುಗಳನ್ನು ತಪ್ಪಾಗಿ ನೀಡುವ ಮೂಲಕ ದೂರುದಾರರಿಗೆ (ಯುಪಿಎಸ್ಸಿಗೆ) ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ : ಫೋನಲ್ಲಿ ಮಾತನಾಡುತ್ತಾ ನೀರಿನ ಬದಲು ಕಂಕುಳಡಿ ಹೀಟರ್ ಇಟ್ಟುಕೊಂಡ ವ್ಯಕ್ತಿ: ಮುಂದಾಗಿದ್ದೇ ದುರಂತ - Man dies due to electrocution