ಇಟಾನಗರ(ಅರುಣಾಚಲ ಪ್ರದೇಶ): ಅರುಣಾಚಲ ಪ್ರದೇಶದ ವಿಧಾನಸಭೆ ಮತ್ತು ಲೋಕಸಭೆಗೆ ಏಪ್ರಿಲ್ 19ರಂದು ಮತದಾನ ನಡೆಯಲಿದೆ. ಇಲ್ಲಿನ ಚೀನಾದ ಗಡಿಗೆ ಹೊಂದಿಕೊಂಡಿರುವ ಮಾಲೋಗಮ್ ಹಳ್ಳಿಯಲ್ಲಿರುವ ಓರ್ವ ಮಹಿಳೆಯ ಮತ ಪಡೆಯಲು ಚುನಾವಣಾ ಸಿಬ್ಬಂದಿ 39 ಕಿಲೋ ಮೀಟರ್ ದೂರ ಕಾಲ್ನಡಿಗೆಯಲ್ಲೇ ತೆರಳಬೇಕಿದೆ.
ಮಾಲೋಗಮ್ ಹಳ್ಳಿಯಲ್ಲಿ 44 ವರ್ಷದ ಸೋಕೆಲಾ ತಯಾಂಗ್ ಎಂಬ ಮಹಿಳೆ ಮತದಾನದ ಅರ್ಹತೆ ಹೊಂದಿದ್ದಾರೆ. ಕುಗ್ರಾಮವಾಗಿರುವ ಕಾರಣ ಅಲ್ಲಿಗೆ ನಡೆದುಕೊಂಡೇ ಹೋಗಬೇಕು. ಹೀಗಾಗಿ ಚುನಾವಣಾಧಿಕಾರಿಗಳು ಗ್ರಾಮದಲ್ಲಿ ತಾತ್ಕಾಲಿಕ ಪೋಲಿಂಗ್ ಬೂತ್ ರಚಿಸಿ, ಮಹಿಳೆಯಿಂದ ಮತ ಪಡೆಯುತ್ತಾರೆ.
ಚುನಾವಣಾ ಅಧಿಕಾರಿಗಳ ಪ್ರಕಾರ, ಮಾಲೋಗಮ್‌ನಲ್ಲಿ ಕೆಲವೇ ಕೆಲವು ಕುಟುಂಬಗಳು ಮಾತ್ರ ವಾಸಿಸುತ್ತಿವೆ. ಸೋಕೆಲ್ ತಯಾಂಗ್ ಅವರನ್ನು ಹೊರತುಪಡಿಸಿ ಎಲ್ಲರೂ ಇತರ ಮತಗಟ್ಟೆಗಳಲ್ಲಿ ನೋಂದಾಯಿತ ಮತದಾರರಾಗಿದ್ದಾರೆ. ತಯಾಂಗ್ ಅವರು ಬೇರೆ ಮತಗಟ್ಟೆಗೆ ಬದಲಾಗಲು ಸಿದ್ಧರಿಲ್ಲ. ಹೀಗಾಗಿ ಅವರಿರುವ ಗ್ರಾಮಕ್ಕೆ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಮತ್ತು ಪೋರ್ಟರ್‌ಗಳು ಸೇರಿದಂತೆ ಪೋಲಿಂಗ್ ತಂಡವು ಒಂದು ದಿನ ಮೊದಲೇ ತೆರಳಬೇಕಿದೆ ಎಂದು ತಿಳಿಸಿದ್ದಾರೆ.
ತಯಾಂಗ್ ಅವರು ಹಯುಲಿಯಾಂಗ್ ವಿಧಾನಸಭಾ ಕ್ಷೇತ್ರ ಮತ್ತು ಅರುಣಾಚಲ ಪೂರ್ವ ಲೋಕಸಭಾ ಕ್ಷೇತ್ರದ ಮತದಾರರಾಗಿದ್ದಾರೆ. ಹಯುಲಿಯಾಂಗ್‌ನಿಂದ ಮಾಲೋಗಮ್‌ಗೆ ಒಂದು ದಿನದ ಕಾಲ್ನಡಿಗೆ ಪ್ರಯಾಣ ಮಾಡಬೇಕಿದೆ ಎಂದು ಜಂಟಿ ಮುಖ್ಯ ಚುನಾವಣಾ ಅಧಿಕಾರಿ ಲೈಕೆನ್ ಕೊಯು ಹೇಳಿದರು.
ಮತದಾರರು ಎಷ್ಟೇ ದೂರದಲ್ಲಿದ್ದರೂ ಮತದಾನ ಮಾಡುವ ಹಕ್ಕು ಹೊಂದಿದ್ದಾರೆ. ಪ್ರತಿಯೊಬ್ಬರೂ ತಮ್ಮ ಹಕ್ಕು ಚಲಾಯಿಸಲು ಅವಕಾಶ ನೀಡುತ್ತಿದ್ದು, 39 ಕಿಲೋ ಮೀಟರ್ ದೂರದ ತ್ರಾಸದಾಯಕ ಪ್ರಯಾಣ ಬೆಳೆಸುವ ಮತ ಸಿಬ್ಬಂದಿ ಮತದಾನದ ದಿನ ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಬೂತ್‌ನಲ್ಲಿ ಇರಬೇಕಾಗುತ್ತದೆ. ಏಕೆಂದರೆ ತಯಾಂಗ್ ಅವರು ಯಾವಾಗ ಮತ ಚಲಾಯಿಸಲು ಬರುತ್ತಾರೆ ಎಂಬುದು ನಮಗೆ ತಿಳಿದಿರಲ್ಲ ಎಂದು ಅವರು ತಿಳಿಸಿದರು.
"ಮತಗಳು ಎಷ್ಟೆಂಬುದು ಮುಖ್ಯವಲ್ಲ. ಓರ್ವ ಮತದಾರ ಇರುವ ಪ್ರದೇಶಕ್ಕೆ ತೆರಳಿ ಮತ ಪಡೆಯುವುದು ನಮ್ಮ ಹೊಣೆ. ಪ್ರತೀ ನಾಗರಿಕರ ಧ್ವನಿ ಇದರಲ್ಲಿದೆ. ಅದನ್ನು ಸಾಕಾರಗೊಳಿಸುವುದು ನಮ್ಮ ಕೆಲಸ. ಹೀಗಾಗಿ ಸೋಕೆಲಾ ಅವರ ಗ್ರಾಮಕ್ಕೇ ನಮ್ಮ ಸಿಬ್ಬಂದಿ ತೆರಳಲಿದ್ದಾರೆ" ಎಂದು ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಪವನ್ ಕುಮಾರ್ ಸೇನ್ ಹೇಳಿದರು.
2014ರ ಚುನಾವಣೆಯಲ್ಲಿ ಮಾಲೋಗಮ್‌ನಲ್ಲಿನ ಮತಗಟ್ಟೆಯು ಇಬ್ಬರು ಮತದಾರರನ್ನು ಹೊಂದಿತ್ತು. ತಯಾಂಗ್ ಮತ್ತು ಅವರ ಪತಿ ಜನೆಲುಮ್ ತಯಾಂಗ್ ಮತದಾರರಾಗಿದ್ದರು. ಆದರೆ, ಅವರೀಗ ವಿಚ್ಛೇದನ ಪಡೆದಿದ್ದು, ಜನೆಲುಮ್ ತಮ್ಮ ಹೆಸರನ್ನು ಮತ್ತೊಂದು ಕ್ಷೇತ್ರದ ಬೂತ್‌ಗೆ ವರ್ಗಾಯಿಸಿಕೊಂಡಿದ್ದಾರೆ.
ರಾಜ್ಯದ ಒಟ್ಟು 2,226 ಮತಗಟ್ಟೆಗಳ ಪೈಕಿ 228 ಮತಗಟ್ಟೆಗಳಿಗೆ ಕಾಲ್ನಡಿಗೆಯ ಮೂಲಕವೇ ತೆರಳಬೇಕಾಗಿದೆ. ಈ ಪೈಕಿ 61 ಮಂದಿ ಎರಡು ದಿನಗಳ ಕಾಲ ನಡೆದರೆ, 7 ಮಂದಿ ಮೂರು ದಿನ ನಡೆದು ಮತದಾನ ಬೂತ್ ತಲುಪಲಿದ್ದಾರೆ. ಮಾರ್ಚ್ 28ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಮಾರ್ಚ್ 30 ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಜೂನ್ 2ರಂದು ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯಲಿದ್ದು, ಜೂನ್ 4ರಂದು ಲೋಕಸಭೆಗೆ ಮತ ಎಣಿಕೆ ನಡೆಯುತ್ತದೆ.