ಜೈಪುರ (ರಾಜಸ್ಥಾನ): ಅಜ್ಮೀರ್ ಜೈಲಿನಲ್ಲಿ ಇಬ್ಬರು ಕೈದಿಗಳ ನಡುವೆ ಹೊಡೆದಾಟ ನಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಒಬ್ಬ ಕೈದಿ ಸಾವನ್ನಪ್ಪಿದ್ದು, ಹೆಡ್ ಕಾನ್ಸ್ಟೇಬಲ್ ಕೂಡ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿ ಮಾಹಿತಿ: ಕೈದಿಗಳಾದ ಶ್ರವಣ್ ಹಾಗೂ ಫರ್ದೀನ್ ನಡುವಿನ ಗಲಾಟೆಯಲ್ಲಿ ಹೆಡ್ ಕಾನ್ಸ್ಟೇಬಲ್ ರಾಹೇಶ್ ಮೇಲೆ ಕಬ್ಬಿಣದ ರಾಡ್ ಮತ್ತು ಬ್ಲೇಡ್ನಿಂದ ಹಲ್ಲೆ ನಡೆಸಿದ್ದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇತರ ಭದ್ರತಾ ಸಿಬ್ಬಂದಿ ಕೈದಿಗಳ ವಾರ್ಡ್‌ಗೆ ಧಾವಿಸಿ ಅವರನ್ನು ಗಲಾಟೆಯನ್ನು ತಡೆದರು. ಗಾಯಗೊಂಡಿರುವ ಹೆಡ್ ಕಾನ್ಸ್ಟೇಬಲ್ನನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.
ಶ್ರವಣ್ ಅವರನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಜೆಎಲ್‌ಎನ್ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ದಾಳಿಗೆ ನೈಜ ಕಾರಣ ತಿಳಿದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಕೋರ್ಟ್ ಆವರಣದಲ್ಲಿಯೇ ಪೊಲೀಸರಿಂದ ತಪ್ಪಿಸಿಕೊಂಡು ವಿಚಾರಣಾಧೀನ ಕೈದಿ ಪರಾರಿ
ಇತ್ತೀಚಿನ ಪ್ರಕರಣ, ಕೈದಿಗಳ ನಡುವೆ ಮಾರಾಮಾರಿ: ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಇತ್ತೀಚೆಗೆ ಕೈದಿಗಳ ಮಧ್ಯೆ ಮಾರಾಮಾರಿ ನಡೆದಿತ್ತು. ಟೈಲ್ಸ್ನ್ನೇ ಚಾಕು ರೀತಿ ಬಳಸಿಕೊಂಡು ಕೈದಿಯೊಬ್ಬ ಇನ್ನೋರ್ವನಿಗೆ ಇರಿದಿದ್ದಾನೆ ಎಂದು ತಿಳಿದುಬಂದಿದೆ. ಇದರಿಂದ ಒಬ್ಬ ಕೈದಿ ಗಾಯ ಗೊಂಡಿದ್ದನು. ಸುಲೇಮಾನ್ ಹಲ್ಲೆಗೆ ಒಳಗಾದ ಕೈದಿಯಾಗಿದ್ದು, ಪಚ್ಚಿ ಎಂಬಾತ ಇರಿದಿರುವ ಆರೋಪಿ ಕೈದಿಯಾಗಿದ್ದಾನೆ. ಪಚ್ಚಿ ಬಾಲಕಿ ಮೇಲೆ ಅತ್ಯಾಚಾರವೆಸಗಿ ಎಸಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಕೈದಿ ಆಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.
ಬೆಂಗಳೂರು ಮಲ್ಲೇಶ್ವರಂ ಬಾಂಬ್ ಬ್ಲಾಸ್ಟ್ನಲ್ಲಿ ಬಂಧನಕ್ಕೆ ಒಳಗಾಗಿರುವ ಸುಲೇಮಾನ್ ಮೇಲೆ ಪಚ್ಚಿ ಹಲ್ಲೆ ನಡೆಸಿದ್ದರು. ಹಲವು ಬಾರಿ ಈ ರೀತಿ ಮಾಡದ ಹಿನ್ನೆಲೆ, ಈ ಹಿಂದೆ ಪಚ್ಚಿಯನ್ನು ಶಿವಮೊಗ್ಗ ಜೈಲಿನಲ್ಲಿ ಇರಿಸಲಾಗಿತ್ತು. ಅಲ್ಲಿಯೂ ಅದೇ ರೀತಿ ಹಲ್ಲೆ ಮಾಡಿದ್ದಕ್ಕೆ ಆತನನ್ನು ಧಾರವಾಡ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿತ್ತು. ಧಾರವಾಡಕ್ಕೆ ಬಂದ ನಂತರ ಮೂರನೇ ಬಾರಿ ಪಚ್ಚಿ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಕಳೆದ ಕೆಲ ತಿಂಗಳುಗಳ ಹಿಂದೆ ಧಾರವಾಡ ಜೈಲು ಸಿಬ್ಬಂದಿ ಮೇಲೇಯೇ ಪಚ್ಚಿ ಹಲ್ಲೆ ಮಾಡಿದ್ದನು ಎಂದು ಪೊಲೀಸರು ತಿಳಿಸಿದ್ದರು. ಧಾರವಾಡ ಕೇಂದ್ರ ಕಾರಾಗೃಹಕ್ಕೆ ಎಸಿಪಿ ಬಸವರಾಜ್ ಮತ್ತು ಉಪನಗರ ಪೊಲೀಸರು ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿದ್ದರು. ಪಚ್ಚಿ ಮೇಲೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಕ್ರಮವಹಿಸಿದ್ದಾರೆ. ಗಾಯಗೊಂಡ ಕೈದಿಗೆ ಕಾರಾಗೃಹದಲ್ಲಿಯೇ ಚಿಕಿತ್ಸೆ ಕೊಡಲಾಗಿತ್ತು.