ಕೋಲ್ಕತ್ತಾದಲ್ಲಿ ಬಾಂಗ್ಲಾ ಸಂಸದನ ಹತ್ಯೆ ಕೇಸ್: ಸ್ನೇಹಿತನಿಂದಲೇ ಹನಿ ಟ್ರ್ಯಾಪ್, ಸುಪಾರಿ ಶಂಕೆ - ದೇಹ ತುಂಡರಿಸಿದ ವಲಸಿಗ ಹಂತಕರು! - Bangladesh MP Murder Case - BANGLADESH MP MURDER CASE
ಕೋಲ್ಕತ್ತಾದಲ್ಲಿ ಬಾಂಗ್ಲಾದೇಶ ಸಂಸದ ಅನ್ವರುಲ್ ಅಜೀಂ ಅನಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಚ್ಚಿಬೀಳಿಸುವ ಮಾಹಿತಿ ಲಭ್ಯವಾಗಿದೆ. ಬಾಂಗ್ಲಾದೇಶ ಮೂಲದ ಅಮೆರಿಕ ಪ್ರಜೆಯೊಬ್ಬರ ಸೂಚನೆ ಮೇರೆಗೆ ಇತರ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳೇ ಈ ಕೊಲೆ ನಡೆಸಿರುವ ಶಂಕೆವ್ಯಕ್ತವಾಗಿದೆ.


Published : May 24, 2024, 6:34 PM IST
|Updated : May 24, 2024, 7:48 PM IST
ಕೋಲ್ಕತ್ತಾ (ಪಶ್ಚಿಮ ಬಂಗಾಳ): ಕೋಲ್ಕತ್ತಾದಲ್ಲಿ ಬಾಂಗ್ಲಾದೇಶ ಸಂಸದ ಅನ್ವರುಲ್ ಅಜೀಂ ಅನಾರ್ ಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಅಜೀಂ ಅನಾರ್ ಅವರನ್ನು ಹನಿ ಟ್ರ್ಯಾಪ್ ಖೆಡ್ಡಾಕ್ಕೆ ಕಡೆವಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ, ಸುಪಾರಿ ಕೊಟ್ಟು ಹತ್ಯೆ ಮಾಡಿಸಿರುವ ಅಂಶ ಕೂಡ ಬೆಳಕಿಗೆ ಬಂದಿದೆ.
ಬಾಂಗ್ಲಾದೇಶದ ಆಡಳಿತಾರೂಢ ಪಕ್ಷ ಅವಾಮಿ ಲೀಗ್ನ ಸಂಸದರಾಗಿದ್ದ ಅನ್ವರುಲ್ ಅಜೀಂ ಅನಾರ್, ಮೇ 13ರಂದು ಭಾರತದಲ್ಲಿ ನಾಪತ್ತೆಯಾಗಿದ್ದರು. ಮೇ 14ರಿಂದ ಫೋನ್ ಕೂಡ ಸ್ವಿಚ್ಡ್ ಆಫ್ ಆಗಿತ್ತು. ಸಂಪರ್ಕಕ್ಕೆ ಸಿಗದ ಕಾರಣ ಸಂಸದರ ಪುತ್ರಿ ಮುಮ್ತಾರಿನ್ ಫಿರ್ದೌಸ್ ಮೇ 18ರಂದು ಢಾಕಾ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ಇದಾದ ಬಳಿಕ ಮೇ 22ರಂದು ಕೋಲ್ಕತ್ತಾದ ನ್ಯೂಟೌನ್ ಪ್ರದೇಶದ ಫ್ಲಾಟ್‌ನಲ್ಲಿ ಅಜೀಂ ಅನಾರ್ ಅವರ ಶವ ಪತ್ತೆಯಾಗಿತ್ತು. ಈ ಬಗ್ಗೆ ಕೋಲ್ಕತ್ತಾದ ಸಿಐಡಿ ತನಿಖೆ ಕೈಗೊಂಡಿದೆ.
ಹನಿ ಟ್ರ್ಯಾಪ್ ಖೆಡ್ಡಾಕ್ಕೆ ಕಡೆವಿ ಕೊಲೆ?: ಬಾಂಗ್ಲಾ ಸಂಸದ ಅಜೀಂ ಅನಾರ್ ಅವರನ್ನು ಹನಿ ಟ್ರ್ಯಾಪ್ ಖೆಡ್ಡಾಕ್ಕೆ ಕಡೆವಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಜೀಂ ಅನಾರ್ ಅವರ ಸ್ನೇಹಿತನಿಗೆ ಹತ್ತಿರವಿದ್ದ ಮಹಿಳೆಯೊಬ್ಬರು ಹನಿ ಟ್ರ್ಯಾಪ್‌ಗೆ ಸಿಲುಕಿದ್ದಾರೆ. ಅನಾರ್ ಅವರನ್ನು ಆಮಿಷವೊಡ್ಡಿ ಮಹಿಳೆಯು ನ್ಯೂ ಟೌನ್ ಫ್ಲ್ಯಾಟ್‌ಗೆ ಕರೆದಿದ್ದರು ಎಂಬ ಶಂಕೆ ತನಿಖೆ ವೇಳೆ ಮೂಡಿಸಿದೆ. ಫ್ಲ್ಯಾಟ್‌ಗೆ ಹೋದ ಕೂಡಲೇ ಅನಾರ್ ಅವರನ್ನು ಕೊಲೆ ಮಾಡಲಾಗಿದೆ ಎಂದು ನಾವು ಶಂಕಿಸಿದ್ದೇವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೇ, ಅನಾರ್ ಅವರು ಓರ್ವ ಪುರುಷ ಮತ್ತು ಮಹಿಳೆಯೊಂದಿಗೆ ಫ್ಲಾಟ್‌ಗೆ ಪ್ರವೇಶಿಸಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿಗಳನ್ನು ಸಿಐಡಿ ಪರಿಶೀಲಿಸುತ್ತಿದೆ. ಇದೊಂದು ಪೂರ್ವಯೋಜಿತ ಕೊಲೆಯಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕೊಲೆಗೆ 5 ಕೋಟಿ ಸುಪಾರಿ ಶಂಕೆ!: ಸಂಸದರ ಕೊಲೆಗೆ ಹಳೆಯ ಸ್ನೇಹಿತನು ಸುಪಾರಿ ನೀಡಿರುವ ಮಾಹಿತಿ ಸಹ ಲಭ್ಯವಾಗಿದೆ. ಕೃತ್ಯವನ್ನು ಕಾರ್ಯಗತಗೊಳಿಸಲು ಹಂತಕರಿಗೆ ಸುಮಾರು 5 ಕೋಟಿ ರೂಪಾಯಿಗಳನ್ನು ನೀಡಿರುವ ಶಂಕೆಯನ್ನೂ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು ವ್ಯಕ್ತಿಗಳೊಂದಿಗೆ ಸಂಸದ ಅನಾರ್ ಫ್ಲಾಟ್‌ಗೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ. ಇಬ್ಬರೂ ನಂತರ ಹೊರಗೆ ಬಂದು ಮರುದಿನ ಮತ್ತೆ ಫ್ಲಾಟ್‌ಗೆ ಪ್ರವೇಶಿಸಿದ್ದಾರೆ. ಇದರ ಬಳಿಕ ಸಂಸದರು ಮತ್ತೆ ಕಾಣಿಸಿಕೊಂಡಿಲ್ಲ. ಆದರೆ, ನಂತರ ಇಬ್ಬರೂ ದೊಡ್ಡ ಟ್ರಾಲಿ ಸೂಟ್‌ಕೇಸ್‌ನೊಂದಿಗೆ ಫ್ಲಾಟ್‌ನಿಂದ ಹೊರಬರುತ್ತಿರುವುದು ಸಿಸಿಟಿವಿಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಹ ತುಂಡರಿಸಿದ ಹಂತಕರು!: ಸಂಸದ ಅನಾರ್ ಅವರ ದೇಹ ಪತ್ತೆಯಾದ ನ್ಯೂ ಟೌನ್ ಫ್ಲಾಟ್‌ನಲ್ಲಿ ರಕ್ತದ ಕಲೆಗಳನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. ಜೊತೆಗೆ ದೇಹದ ಭಾಗಗಳನ್ನು ಎಸೆಯಲು ಬಳಸಲಾಗಿದೆ ಎನ್ನಲಾದ ಹಲವಾರು ಪ್ಲಾಸ್ಟಿಕ್ ಚೀಲಗಳನ್ನು ಸಹ ವಶಪಡಿಸಿಕೊಂಡಿದ್ದಾರೆ.
ಕಾಲುವೆಗೆ ದೇಹದ ಭಾಗಗಳ ಎಸೆದ್ರು: ತನಿಖೆಯಲ್ಲಿ ಲಭ್ಯವಾದ ಸಾಂದರ್ಭಿಕ ಪುರಾವೆಗಳ ಪ್ರಕಾರ, ಸಂಸದರನ್ನು ಬೆಡ್ ರೂಮ್ನಲ್ಲಿ ಮೊದಲು ಕತ್ತು ಹಿಸುಕಲಾಗಿದೆ. ಬಳಿಕ ಹಂತಕರು ಹಲವಾರು ಗಂಟೆಗಳ ಕಾಲ ಕಾದಿದ್ದಾರೆ. ಇದಾದ ಬಳಿಕ ಅನಾರ್ ದೇಹವನ್ನು ಅಡುಗೆಮನೆಗೆ ಎಳೆದೊಯ್ದು, ತುಂಡುಗಳಾಗಿ ಕತ್ತರಿಸಿದ್ದಾರೆ. ಅಷ್ಟೇ ಅಲ್ಲ, ಮೂಳೆಗಳಿಂದ ಮಾಂಸವನ್ನು ಬೇರ್ಪಡಿಸಿದ್ದಾರೆ. ದೇಹ ಬೇಗ ಕೊಳೆಯಬಾರದು ಎಂದು ಅರಿಶಿನ ಪುಡಿ ಬೆರೆಸಿದ್ದಾರೆ. ನಂತರದ ದೇಹದ ತುಂಡುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದಾರೆ. ಕೊನೆಗೆ ದೇಹದ ಭಾಗಗಳು ತುಂಬಿದ್ದ ಪ್ಲಾಸ್ಟಿಕ್ ಚೀಲಗಳನ್ನು ಫ್ರೀಜರ್‌ನಲ್ಲಿ ಇರಿಸಿದ್ದಾರೆ. ನಂತರ ದಕ್ಷಿಣ 24 ಪರಗಣ ಜಿಲ್ಲೆಯ ಭಂಗಾರ್‌ನಲ್ಲಿ ಕಾಲುವೆಗೆ ದೇಹದ ಭಾಗಗಳನ್ನು ಎಸೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಬಹಿರಂಗ ಪಡಿಸಿದ್ದಾರೆ.
ಸ್ನೇಹಿತನಿಗೆ ಸೇರಿದ ಪ್ಲಾಟ್: ಬಾಂಗ್ಲಾದ ಸಂಸದ ಅನ್ವರುಲ್ ಅಜೀಂ ಅನಾರ್ ಕೊಲೆಯ ಹಿಂದಿನ ಪ್ರಮುಖ ಆರೋಪಿ ಸ್ನೇಹಿತನೇ ಆಗಿದ್ದಾನೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಅಮೆರಿಕದಲ್ಲಿ ನೆಲೆಸಿರುವ ಸ್ನೇಹಿತ, ಕೋಲ್ಕತ್ತಾದಲ್ಲಿ ಫ್ಲಾಟ್ ಹೊಂದಿದ್ದ ಎಂದೂ ಪೊಲೀಸರು ಪತ್ತೆ ಹಚ್ಚಿಸಿದ್ದಾರೆ.
ಮುಂಬೈನಲ್ಲಿ ಅಕ್ರಮ ವಲಸಿಗ ಸೆರೆ: ಮತ್ತೊಂದೆಡೆ, ಇದೇ ಸಂಸದರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನಲ್ಲಿ ನೆಲೆಸಿರುವ ಬಾಂಗ್ಲಾದೇಶದ ಅಕ್ರಮ ವಲಸಿಗ ಜಿಹಾದ್ ಹವಾಲ್ದಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕೋಲ್ಕತ್ತಾದ ನ್ಯೂಟೌನ್ ಫ್ಲಾಟ್‌ನಲ್ಲಿ ನಡೆದ ಸಂಸದರ ಕೊಲೆಯಲ್ಲಿ ತಾನು ಭಾಗಿಯಾಗಿದ್ದನ್ನು ಹವಾಲ್ದಾರ್ ಒಪ್ಪಿಕೊಂಡಿದ್ದಾನೆ. ಬಾಂಗ್ಲಾದೇಶ ಮೂಲದ ಅಮೆರಿಕ ಪ್ರಜೆ ಅಖ್ತರುಝಾಮಾನ್ ಎಂಬುವರ ಸೂಚನೆ ಮೇರೆಗೆ ಇತರ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳೊಂದಿಗೆ ಸೇರಿ ಸಂಸದರನ್ನು ಹತ್ಯೆ ಮಾಡಿರುವುದಾಗಿ ಆರೋಪಿ ಹವಾಲ್ದಾರ್ ಬಹಿರಂಗಪಡಿಸಿದ್ದಾನೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಭಾರತಕ್ಕೆ ಚಿಕಿತ್ಸೆಗೆ ಬಂದು ಕೋಲ್ಕತ್ತಾದಲ್ಲಿ ಶವವಾಗಿ ಪತ್ತೆಯಾದ ಬಾಂಗ್ಲಾದೇಶ ಸಂಸದ, ಮೂವರ ಬಂಧನ