ವಾರಾಣಸಿ: ವಾರಾಣಸಿಯ ಲೋಕಸಭಾ ಅಭ್ಯರ್ಥಿ ನರೇಂದ್ರ ಮೋದಿ ಅವರು ಭಾನುವಾರ ವರ್ಚುಯಲ್ ಉಪಾಹಾರ ಸಭೆಯ ಮೂಲಕ ಪಕ್ಷದ ಕಾರ್ಯಕರ್ತರು ಮತ್ತು ಬೂತ್ ಮಟ್ಟದ ಪದಾಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ಲೋಕಸಭೆ ಚುನಾವಣೆಗೆ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವುದರೊಂದಿಗೆ ಗೆಲುವಿಗೆ ಬೇಕಾದ ಸಲಹೆಗಳನ್ನು ನೀಡಿದರು. ಈ ಸಂದರ್ಭದಲ್ಲಿ, ಪ್ರಧಾನಿಯವರು ಬನಾರಸಿ ಶೈಲಿಯಲ್ಲಿ ಮಾತನಾಡಿರುವುದು ಕಾರ್ಯಕರ್ತರನ್ನು ಆಕರ್ಷಿಸಿತು.
ನಿಮ್ಮೆಲ್ಲರ ಪರಿಶ್ರಮದಿಂದ ಇಂದು ನಮ್ಮ ಕಾಶಿ ಭಾರತದ ಅಭಿವೃದ್ಧಿಗೆ ಮಾದರಿಯಾಗುತ್ತಿದೆ ಎಂದ ಪ್ರಧಾನಿ ಕಾಶಿಯ ಅಭಿವೃದ್ಧಿ ಮತ್ತು ಪರಂಪರೆಯ ಬಗ್ಗೆ ದೇಶ ಮತ್ತು ವಿಶ್ವದಲ್ಲಿ ಚರ್ಚೆಯಾಗುತ್ತಿದೆ. ಬನಾರಸ್‌ನಲ್ಲಿ ಇಷ್ಟು ಅಭಿವೃದ್ಧಿ ಆಗಬಹುದು ಎಂದು 10 ವರ್ಷಗಳ ಹಿಂದೆ ಯಾರೊಬ್ಬರು ಭಾವಿಸಿರಲಿಲ್ಲ. ಆದರೆ, ಬನಾರಸ್‌ನಲ್ಲಿಯೂ ಅಭಿವೃದ್ಧಿಯ ಗಂಗೆ ವೇಗವಾಗಿ ಹರಿಯಬಹುದು ಎಂದು ನಾವೆಲ್ಲರೂ ತೋರಿಸಿಕೊಟ್ಟಿದ್ದೇವೆ ಎಂದರು.
ಈ ಬಾರಿಯೂ ಪಕ್ಷದ ಗೆಲುವಿನ ಬಗ್ಗೆ ಸಂಪೂರ್ಣ ವಿಶ್ವಾಸ ಹೊಂದಿದ್ದೇವೆ, ನಾವು ಬಿಜೆಪಿಯ ಜನರು ಕಷ್ಟಪಟ್ಟು ದುಡಿಯುವ ಜನರು. ಹಾಗಾಗಿ ಹಿಂದಿನ ಚುನಾವಣೆ ದಾಖಲೆಗಳನ್ನು ಮುರಿಯಲು ನೀವೆಲ್ಲ ಶ್ರಮಿಸಬೇಕು. 2014 ರಲ್ಲಿ ನಾನು ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಲು ಬಂದಾಗಿನಿಂದ ಇಂದಿನವರೆಗೆ ಎಲ್ಲ ಕೆಲಸಗಳನ್ನು ನೀವೇ ನಿಭಾಯಿಸಿದ್ದೀರಿ. ನನಗೆ ವಾರಾಣಸಿಯಿಂದ ಸ್ಪರ್ಧಿಸುವಂತೆ ಯಾರೋಬ್ಬರು ಹೇಳಿಲ್ಲ ಗಂಗಾಮಾತೆಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ. ನನ್ನನ್ನು ಮಗನಾಗಿ ದತ್ತು ಪಡೆದಿದ್ದಾಳೆ ಎಂದರು.
ಇದೇ ವೇಳೆ, ಕಾರ್ಯಕರ್ತರಿಗೆ ಕೆಲ ಸಲಹೆಗಳನ್ನು ನೀಡಿದ ಅವರು ಮುಂದಿನ ಭಾನುವಾರ ನೀವೆಲ್ಲರೂ ಸೇರಿ ಬೂತ್ ಮಟ್ಟದಲ್ಲಿ ಟಿಫಿನ್ ಸಭೆಯನ್ನು ಆಯೋಜಿಸಿ ಪ್ರತಿಯೊಬ್ಬರು ಮತದಾನ ಮಾಡುವಂತೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ, ಬೂತ್ ಅಧ್ಯಕ್ಷ ರಾಕೇಶ್ ಸೋಂಕರ್ಗೆ ಕೆಲ ಪ್ರಶ್ನೆಗಳನ್ನು ಕೇಳಿದ ಪ್ರಧಾನಿಯವರು ಸದ್ಯ ವಾರಾಣಸಿಯಲ್ಲಿ ಜನರ ಅಭಿಪ್ರಾಯ ಹೇಗಿದೆ ಎಂದು ಕೇಳಿದರು. ಈ ಪ್ರಶ್ನೆಗೆ ಕಾಶಿಯಲ್ಲಿ 'ಹರ್ ಹರ್ ಮೋದಿ, ಗರ್ ಗರ್ ಮೋದಿ' ಎಂಬ ಘೋಷಣೆ ಮೊಳಗುತ್ತಿದೆ. ಈ ಬಾರಿಯೂ ದಾಖಲೆಯ ಅಂತರದ ಮತಗಳಿಂದ ಗೆಲ್ಲುವಿರಿ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ, ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣದಿಂದ ಯಾವೆಲ್ಲ ಬದಲಾವಣೆಯಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೌರಭ್ ಸಾಹ್ನಿ, ಸಣ್ಣ ವ್ಯಾಪಾರಿಗಳು ಮತ್ತು ನಾವಿಕ ಸಮುದಾಯದ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಇದರಿಂದ ಎಲ್ಲರ ಆರ್ಥಿಕ ಸ್ಥಿತಿ ಬಲಗೊಂಡಿದೆ ಎಂದರು. ಬಳಿಕ ಮಹಿಳಾ ಮೋರ್ಚಾದ ಸಚಿವೆ ರಿಚಾ ಸಿಂಗ್ ಅವರಿಗೆ ಸದ್ಯ ಯುವತಿಯರು ಸರ್ಕಾರದ ಬಗ್ಗೆ ಏನು ಯೋಚಿಸುತ್ತಾರೆ ಎಂದು ಪ್ರಧಾನಿ ಕೇಳಿದರು.
ಈ ಕುರಿತು ರಿಚಾ ಸಿಂಗ್ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಹಿಳೆಯರ ಗೌರವ ಮತ್ತು ಸುರಕ್ಷತೆ ಎರಡೂ ಹೆಚ್ಚಾಗಿದೆ ಎಂದು ತಿಳಿಸಿದರು. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಎಲ್ಲ ಯೋಜನೆಗಳಲ್ಲಿ ನಾವು ಮಾತೃಶಕ್ತಿಗೆ ಆದ್ಯತೆ ನೀಡಿದ್ದೇವೆ, ಈ ಬಗ್ಗೆ ಕಾಶಿಯ ತಾಯಂದಿರು ಮತ್ತು ಸಹೋದರಿಯರ ಪ್ರತಿಕ್ರಿಯೆ ಏನು ಎಂದು ಪ್ರಧಾನಿ ಕೇಳಿದ ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ರಿಚಾ ಸಿಂಗ್, ಗ್ರಾಮದ ಮಹಿಳೆಯರನ್ನು ಸಂಪರ್ಕಿಸಿದ ನಂತರ, ನೀವು ಉಜ್ವಲ ಯೋಜನೆಯಡಿ ಅನಿಲ ಸಂಪರ್ಕವನ್ನು ನೀಡಿದ್ದೀರಿ ಎಂದು ಹೇಳಿದರು. ಅಂದಿನಿಂದ ಅವರ ಜೀವನವು ಹೊಗೆ ಮುಕ್ತವಾಗಿದೆ ಮತ್ತು ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಬೀರಿದೆ ಎಂದಿದ್ದಾರೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಪ್ರಧಾನಿ, ಮುಂಬರುವ ಐದು ವರ್ಷಗಳಲ್ಲಿ 3 ಕೋಟಿ ತಾಯಂದಿರು ಮತ್ತು ಸಹೋದರಿಯರನ್ನು ಲಖ್ಪತಿ ದೀದಿಯನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದೆ: ಅತ್ತಿಗೆ-ನಾದಿನಿ ಫೈಟ್; ಬಾರಾಮತಿಯಲ್ಲಿ ಸುಪ್ರಿಯಾ ಸುಳೆ ವಿರುದ್ಧ ಅಜಿತ್ ಪವಾರ್ ಪತ್ನಿ ಸ್ಪರ್ಧೆ! - Pawar vs Pawar