ಅಯೋಧ್ಯೆ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಮತ್ತು ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಇಂದು ಮಧ್ಯಾಹ್ನ ಪೂರ್ಣಗೊಂಡಿದೆ. ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯ ವೈಭವದಿಂದ ಜರುಗಿತು. ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ವೇದ ಮಂತ್ರ, ಮಂಗಳವಾದ್ಯಗಳೊಂದಿಗೆ ಕಾರ್ಯಕ್ರಮ ನಡೆಯಿತು. ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ವಿಧಿವಿಧಾನಗಳನ್ನು ಪ್ರಧಾನಿ ಮೋದಿ ನೆರವೇರಿಸಿದರು. ಅಭಿಜಿತ್ ಲಗ್ನದಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡಲಾಯಿತು.
ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯ ಮುಗಿದ ಬಳಿಕ ಪ್ರಧಾನಿ ಮಾಡಿದ ಮತ್ತೊಂದು ವಿಶೇಷ ಕಾರ್ಯ ನೆರದಿದ್ದ ಜನರ ಗಮನ ಸೆಳೆಯಿತು. ಮಹಾಮಸ್ತಕಾಭಿಷೇಕದ ನಂತರ ದೇವಸ್ಥಾನದಿಂದ ಹೊರ ಬಂದ ಪ್ರಧಾನಿ ಮೋದಿ ರಾಮಮಂದಿರ ನಿರ್ಮಾಣದ ಭಾಗವಾಗಿದ್ದ ಕಾರ್ಮಿಕರ ಮೇಲೆ ಪುಷ್ಪವೃಷ್ಟಿ ಮಾಡಿ ಶುಭ ಹಾರೈಸಿದರು.
ಬಳಿಕ ರಾಮಮಂದಿರ ಆವರಣದಲ್ಲಿನ ಜಟಾಯುವಿನ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಿದ ಪ್ರಧಾನಿ ಮೋದಿ, ಶಿವನಿಗೂ ಪೂಜೆ ಸಲ್ಲಿಸಿದರು. ನಂತರ ಪ್ರಾಣಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಂಡ ಗಣ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆ ಸಂಭ್ರಮದ ಮತ್ತು ನಮ್ರತೆಯ ಕ್ಷಣವಾಗಿದೆ. ರಾಮಲಲ್ಲಾನ ಈ ಮಂದಿರ ಶಾಂತಿ, ತಾಳ್ಮೆ, ಸಾಮರಸ್ಯದ ಸಂಕೇತವಾಗಿದೆ ಎಂದು ಹೇಳಿದರು.
ಒಂದು ಗಂಟೆ ಕಾಲ ನಡೆದ ಧಾರ್ಮಿಕ ವಿಧಿ ವಿಧಾನಗಳ ಮೂಲಕ ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪೇಜಾವರ ಮಠದ ಶ್ರೀಗಳು ಪೂಜಾ ವಿಧಿವಿಧಾನದ ವೇಳೆ ಗರ್ಭಗುಡಿಯೊಳಗೆ ಉಪಸ್ಥಿತರಿದ್ದರು.
ಉಳಿದಂತೆ ಉದ್ಯಮಿ ಮುಖೇಶ್ ಅಂಬಾನಿ, ಬಾಲಿವುಡ್ ತಾರೆಯರಾದ, ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ರಣಬೀರ್ ಕಪೂರ್, ಆಲಿಯಾ ಭಟ್, ಸ್ಯಾಂಡಲ್ವುಡ್ನ ಡಿವೈನ್ಸ್ಟಾರ್ ರಿಷಭ್ ಶೆಟ್ಟಿ ಸೇರಿದಂತೆ ದೇಶ - ವಿದೇಶಿ ಅತಿಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವಾಲಯದ ಆವರಣದ ಹೊರಗೆ ಹಾಕಲಾಗಿದ್ದ ಕುರ್ಚಿಗಳಲ್ಲಿ ಕುಳಿತು ಎಲ್‌ಇಡಿ ಪರದೆಯಲ್ಲಿ ಈ ಮಹತ್ವದ ಕ್ಷಣವನ್ನು ವೀಕ್ಷಿಸಿದರು.
25 ರಾಜ್ಯಗಳ ವಾದ್ಯಗಾರರಿಂದ ಮಂಗಳವಾದ್ಯ: ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ 25 ರಾಜ್ಯಗಳ ವಾದ್ಯಗಾರರು ಭಾಗಿಯಾಗಿ ಮಂಗಳವಾದ್ಯಗಳನ್ನು ನುಡಿಸಿದರು. ಪ್ರಾಣ ಪ್ರತಿಷ್ಠೆ ಸಂದರ್ಭದಲ್ಲಿ ಹೆಲಿಕಾಪ್ಟರ್ ಮೂಲಕ ದೇವಸ್ಥಾನದ ಮೇಲೆ ಪುಷ್ಪವೃಷ್ಟಿ ಮಾಡಲಾಯಿತು. ಈ ವೇಳೆ ನೆರೆದಿದ್ದ ಭಕ್ತರಿಂದ ಜೈ ಶ್ರೀರಾಮ್ ಎಂಬ ಘೋಷಣೆ ಮೊಳಗಿತು.
ಇದನ್ನೂ ಓದಿ: ಶ್ರೀರಾಮನ ಕಟೌಟ್ ಮುಂದೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನವ ಜೋಡಿ