ವಾರಾಣಸಿ( ಉತ್ತರಪ್ರದೇಶ): ಜನವರಿ 22ರಂದು ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮ ಲಲ್ಲಾ ಪಟ್ಟಾಭಿಷೇಕ ನಡೆದ ಒಂದು ತಿಂಗಳ ನಂತರ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕಾಶಿ ಪ್ರವಾಸ ಕೈಗೊಳ್ಳಲಿದ್ದಾರೆ. ಇಂದು ರಾತ್ರಿ 9 ಗಂಟೆ ಸುಮಾರಿಗೆ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದ್ದು, ರಾತ್ರಿ ವಾರಾಣಸಿಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ. ಪ್ರಧಾನಿ ಅವರನ್ನು ಸಿಎಂ ಯೋಗಿ ಆದಿತ್ಯನಾಥ್ ಮತ್ತು ರಾಜ್ಯಪಾಲ ಆನಂದಿಬೆನ್ ಪಟೇಲ್ ಸ್ವಾಗತಿಸಲಿದ್ದಾರೆ.
ಶುಕ್ರವಾರ ಪ್ರಧಾನಮಂತ್ರಿಗಳು ಸುಮಾರು 14316.07 ಕೋಟಿ ಮೌಲ್ಯದ 36 ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಇದನ್ನು ಪೂರ್ವಾಂಚಲ್ ಉಡುಗೊರೆ ಎಂದು ಕರೆಯಲಾಗುತ್ತಿದೆ. ಇದರಲ್ಲಿ 10972 ಕೋಟಿ ರೂ.ಗಳ 23 ಯೋಜನೆಗಳ ಉದ್ಘಾಟನೆ ಮತ್ತು 3344.07 ಕೋಟಿ ರೂ.ಗಳ 13 ಯೋಜನೆಗಳ ಶಂಕುಸ್ಥಾಪನೆ ನಾಳೆ ನಡೆಯಲಿವೆ. ಪ್ರಧಾನಿಗಳು ಫೆಬ್ರವರಿ 23 ರಂದು ಮುಖ್ಯವಾಗಿ ಮೂರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಬೆಳಗ್ಗೆ ಬಿಎಚ್‌ಯುನ ಸ್ವತಂತ್ರ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಶಿರೋಮಣಿ ರವಿದಾಸ್ ಅವರ ಜನ್ಮಸ್ಥಳ ಸೀರ್ ಗೋವರ್ಧನದಲ್ಲಿರುವ ದೇವಾಲಯಕ್ಕೆ ಸಂತರು ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಇದಾದ ನಂತರ, ಕಾರ್ಖಿಯವ್ ಕೈಗಾರಿಕಾ ಪ್ರದೇಶದಲ್ಲಿ ಕಾಶಿ ಸಂಕೀರ್ಣವನ್ನು ಪಿಎಂ ಉದ್ಘಾಟಿಸಲಿದ್ದಾರೆ. ಆ ಬಳಿಕ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಈ ಮೂಲಕ ಅವರು 2024ರ ಲೋಕಸಭೆ ಚುನಾವಣೆಗೆ ಸ್ವಕ್ಷೇತ್ರ ವಾರಾಣಸಿಯಿಂದಲೇ ಕಹಳೆ ಮೊಳಗಿಸಲಿದ್ದಾರೆ. ಕಾಶಿಗೆ ಭೇಟಿ ನೀಡುವ ಸಂದರ್ಭದಲ್ಲಿ ಆರೋಗ್ಯ, ಶಿಕ್ಷಣ, ಸಾರಿಗೆ, ಜಲಮಾರ್ಗಗಳು, ಕ್ರೀಡೆ, ಧರ್ಮ, ಆಧ್ಯಾತ್ಮಿಕತೆ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆಗಳು ಮತ್ತು ಉದ್ಯೋಗ ಆಧಾರಿತ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನ ಮಂತ್ರಿಯವರು ನೆರವೇರಿಸಲಿದ್ದಾರೆ. ಈ ಮೂಲಕ ಮುಂದಿನ ಸಲವೂ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರುವಂತಾಗಲು ಯೋಜನೆ ರೂಪಿಸಿದ್ದಾರೆ.
ಫೆಬ್ರವರಿ 23 ರ ಬೆಳಗ್ಗೆ ಸ್ವತಂತ್ರತಾ ಭವನದಲ್ಲಿ ಎಂಪಿ ಸ್ಪೋರ್ಟ್ಸ್, ಎಂಪಿ ಫೋಟೋಗ್ರಫಿ, ಎಂಪಿ ನಾಲೆಡ್ಜ್ ಮತ್ತು ಎಂಪಿ ಸಂಸ್ಕೃತ ಸ್ಪರ್ಧೆಗಳ ವಿಜೇತರೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂವಾದ ಕೂಡಾ ನಡೆಸಲಿದ್ದಾರೆ. ಸಂತ ಶಿರೋಮಣಿ ರವಿದಾಸ್ ಅವರ ಜನ್ಮಸ್ಥಳವಾದ ಸೀರ್ ಗೋವರ್ಧನದಲ್ಲಿರುವ ದೇವಾಲಯಕ್ಕೆ ಹೋಗಿ ನಮನ ಸಲ್ಲಿಸುವ ಅವರು ಸಂತ ನಿರಂಜನ್ ದಾಸ್ ಅವರನ್ನು ಭೇಟಿ ಮಾಡಿ ಮಾತನಾಡಲಿದ್ದಾರೆ. ಆ ಬಳಿಕ ಪ್ರಧಾನಿ ರವಿದಾಸ್ ಅವರ 25 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಇದಾದ ನಂತರ ಮೋದಿ, ಕಾರ್ಖಿಯಾವ್ ಕೈಗಾರಿಕಾ ಪ್ರದೇಶದಲ್ಲಿ ಬನಾರಸ್ ಕಾಶಿ ಕಾಂಪ್ಲೆಕ್ಸ್ ಉದ್ಘಾಟಿಸಲಿದ್ದಾರೆ.