ನವದೆಹಲಿ: ಉತ್ತರ ಪ್ರದೇಶದ ಜಾಗತಿಕ ಹೂಡಿಕೆದಾರರ ಶೃಂಗಸಭೆ 2023ರ ನಾಲ್ಕನೇ ಶಿಲಾನ್ಯಾಸ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಇಂದು (ಸೋಮವಾರ) ಉತ್ತರ ಪ್ರದೇಶದಾದ್ಯಂತ 10 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 14,000 ಯೋಜನೆಗಳಿಗೆ ಚಾಲನೆ ನೀಡಿದರು. ಉತ್ತರ ಪ್ರದೇಶಕ್ಕೆ ಪ್ರಧಾನಿಯವರ ಭೇಟಿ ಹಿನ್ನೆಲೆ ಲಖನೌ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.
ಪ್ರಧಾನಿ ಕಾರ್ಯಾಲಯದ ಮಾಹಿತಿ ಪ್ರಕಾರ, ಬೆಳಿಗ್ಗೆ 10.30 ರ ಸುಮಾರಿಗೆ ಪ್ರಧಾನ ಮಂತ್ರಿ ಸಂಭಾಲ್ ಜಿಲ್ಲೆಯ ಶ್ರೀ ಕಲ್ಕಿ ಧಾಮ್ ದೇವಾಲಯದ ಶಂಕುಸ್ಥಾಪನೆ ನೆರವೇರಿಸಿದರು. ಪ್ರಧಾನಿ ಶ್ರೀ ಕಲ್ಕಿ ಧಾಮ ದೇವಸ್ಥಾನದ ಮಾದರಿಯನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು. ಶ್ರೀ ಕಲ್ಕಿ ಧಾಮ ನಿರ್ಮಾಣ ಟ್ರಸ್ಟ್‌ನಿಂದ ಶ್ರೀ ಕಲ್ಕಿ ಧಾಮವನ್ನು ನಿರ್ಮಿಸಲಾಗುತ್ತದೆ. ಇದರ ಅಧ್ಯಕ್ಷ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಸೇರಿದಂತೆ ಸಾಧು ಸಂತರು, ಧಾರ್ಮಿಕ ಮುಖಂಡರು ಮತ್ತು ಇತರ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಅದಲ್ಲದೇ, ಉತ್ತರ ಪ್ರದೇಶದ ಜಾಗತಿಕ ಹೂಡಿಕೆದಾರರ ಶೃಂಗಸಭೆ 2023ರ (ಯುಪಿಜಿಐಎಸ್ 2023) ಸಂದರ್ಭದಲ್ಲಿ ಸ್ವೀಕರಿಸಿದ ಹೂಡಿಕೆಯ ಪ್ರಸ್ತಾವನೆಗಳಿಗೆ ನಾಲ್ಕನೇ ಶಿಲಾನ್ಯಾಸ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಉತ್ತರ ಪ್ರದೇಶದಾದ್ಯಂತ 10 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ 14,000 ಯೋಜನೆಗಳಿಗೆ ಹಸಿರು ನಿಶಾನೆ ತೋರಿಸಿದರು. ಈ ಯೋಜನೆಗಳು ಉತ್ಪಾದನೆ, ನವೀಕರಿಸಬಹುದಾದ ಇಂಧನ, ಐಟಿ ಮತ್ತು ಐಟಿಇಎಸ್, ಆಹಾರ ಸಂಸ್ಕರಣೆ, ವಸತಿ ಮತ್ತು ರಿಯಲ್ ಎಸ್ಟೇಟ್, ಆರೋಗ್ಯ ಮತ್ತು ಮನರಂಜನೆ ಮತ್ತು ಶಿಕ್ಷಣದಂತಹ ಕ್ಷೇತ್ರಗಳಿಗೆ ಸಂಬಂಧಿಸಿವೆ.
ಈ ಕಾರ್ಯಕ್ರಮದಲ್ಲಿ ಕೈಗಾರಿಕೋದ್ಯಮಿಗಳು, ಉನ್ನತ ಜಾಗತಿಕ ಮತ್ತು ಭಾರತೀಯ ಕಂಪನಿಗಳ ಪ್ರತಿನಿಧಿಗಳು, ರಾಯಭಾರಿಗಳು ಮತ್ತು ಹೈಕಮಿಷನರ್‌ಗಳು ಮತ್ತು ಇತರ ಗಣ್ಯ ಅತಿಥಿಗಳು ಸೇರಿದಂತೆ ಸುಮಾರು 5,000 ಪ್ರಮುಖರು ಭಾಗವಹಿಸಿದರು.
ಮೋದಿ ಭೇಟಿ ಹಿನ್ನೆಲೆ ಭದ್ರತಾ ಸಿಬ್ಬಂದಿ ನಿಯೋಜನೆ: ಲಖನೌ ಪೊಲೀಸ್ ಕಮಿಷನರೇಟ್ನಿಂದ ಸೋಮವಾರ ಲಖನೌ ನಗರದಲ್ಲಿ ಸಂಪೂರ್ಣ ಬಿಗಿ ಭದ್ರತೆ ಕೈಗೊಂಡಿದೆ. ಇದಕ್ಕಾಗಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಇದರಲ್ಲಿ ನಾಲ್ವರು ಪೊಲೀಸ್ ವರಿಷ್ಠಾಧಿಕಾರಿಗಳು (ಎಸ್‌ಪಿ), 12 ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು (ಎಎಸ್‌ಪಿ), 31 ಉಪ ಪೊಲೀಸ್ ವರಿಷ್ಠಾಧಿಕಾರಿಗಳು (ಡಿಎಸ್‌ಪಿ), 79 ಇನ್ಸ್ಪೆಕ್ಟರ್ಗಳು, 416 ಸಬ್ ಇನ್ಸ್ಪೆಕ್ಟರ್ಗಳು, 37 ಮಹಿಳಾ ಸಬ್ ಇನ್ಸ್ಪೆಕ್ಟರ್ಗಳು, 1,739 ಮುಖ್ಯ ಪೇದೆಗಳು, 318 ಮಹಿಳಾ ಕಾನ್ಸ್ಟೇಬಲ್ಗಳು ಸೇರಿದ್ದಾರೆ.
ಇದಲ್ಲದೇ ಡಿಜಿಪಿ ಕೇಂದ್ರ ಕಚೇರಿಯಿಂದಲೂ ಹೆಚ್ಚುವರಿ ಪೊಲೀಸ್ ಅಧಿಕಾರಿಗಳು ಮತ್ತು ನೌಕರರನ್ನು ನಿಯೋಜಿಸಲಾಗಿದೆ. ಇದರಲ್ಲಿ 5 ಪೊಲೀಸ್ ವರಿಷ್ಠಾಧಿಕಾರಿಗಳು (ಎಸ್‌ಪಿ), 10 ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು (ಎಎಸ್‌ಪಿ), 24 ಉಪ ಪೊಲೀಸ್ ವರಿಷ್ಠಾಧಿಕಾರಿಗಳು (ಡಿಎಸ್‌ಪಿ), 25 ಇನ್ಸ್ಪೆಕ್ಟರ್ಗಳು , 140 ಸಬ್ ಇನ್ಸ್ಪೆಕ್ಟರ್ಗಳು, 15 ಮಹಿಳಾ ಸಬ್ ಇನ್ಸ್ಪೆಕ್ಟರ್ಗಳು , 520 ಮುಖ್ಯ ಪೇದೆಗಳು, 50 ಮಹಿಳಾ ಕಾನ್ಸ್ಟೇಬಲ್ಗಳನ್ನು ನಿಯೋಜಿಸಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಅರೆಸೇನಾ ಪಡೆಗಳ ಐದು ತಂಡನ್ನು ನಿಯೋಜಿಸಲಾಗಿದೆ. ಸಂಚಾರ ವ್ಯವಸ್ಥೆ ನಿರ್ವಹಿಸಲು 16 ಸಂಚಾರ ನಿರೀಕ್ಷಕರು, 123 ಸಂಚಾರ ಉಪನಿರೀಕ್ಷಕರು, 190 ಮುಖ್ಯ ಪೇದೆಗಳು ಮತ್ತು 600 ಕಾನ್‌ಸ್ಟೆಬಲ್‌ಗಳನ್ನು ಪ್ರತ್ಯೇಕವಾಗಿ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: ಫೆ.21ರಂದು ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆ ಮುಂದುವರಿಸುತ್ತೇವೆ: ಕೇಂದ್ರ ಸಚಿವರ ಭೇಟಿ ಬಳಿಕ ರೈತ ಮುಖಂಡರ ಹೇಳಿಕೆ