ದೋಡಾ (ಜಮ್ಮು): ಕಣಿವೆ ರಾಜ್ಯದ ದೋಡಾ ಜಿಲ್ಲೆಯಲ್ಲಿಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಿಗಿ ಭದ್ರತೆಯೊಂದಿಗೆ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ. 43 ವರ್ಷಗಳ ಬಳಿಕ ಮೊದಲ ಬಾರಿಗೆ ಪ್ರಧಾನ ಮಂತ್ರಿ ದೋಡಾ ಜಿಲ್ಲೆಗೆ ಆಗಮಿಸುತ್ತಿದ್ದಾರೆ.
ಪ್ರಧಾನಿಯವರ ಆಗಮನ ಹಿನ್ನೆಲೆಯಲ್ಲಿ ದೋಡಾ ಮತ್ತು ಕಿಶ್ತ್ವಾರ್ನಲ್ಲಿ ಬಹು ಹಂತದ ಬಿಗಿ ಭದ್ರತೆ ನಿಯೋಜನೆ ಮಾಡಲಾಗಿದೆ. ಚುನಾವಣಾ ರ್ಯಾಲಿ ಶಾಂತಿ ಸುವ್ಯಸ್ಥೆಯಿಂದ ಸರಾಗವಾಗಿ ಸಾಗಲು ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರಧಾನಿಯವರು ದೋಡಾ ನಗರದ ಮೈದಾನದಲ್ಲಿ ಸಮಾವೇಶ ನಡೆಸಲಿದ್ದಾರೆ.
ಪ್ರಧಾನಿ ಸಮಾವೇಶ ಕುರಿತು ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಉಸ್ತುವಾರಿ ಜಿ ಕೃಷ್ಣ ರೆಡ್ಡಿ, ಪ್ರಧಾನಿ ಮೋದಿ ನಾಳೆ ದೋಡಾದಲ್ಲಿ ತಮ್ಮ ಮೊದಲ ಚುನಾವಣಾ ಸಭೆ ನಡೆಸಲಿದ್ದಾರೆ. 42 ವರ್ಷಗಳಲ್ಲಿ ಯಾವುದೇ ಪ್ರಧಾನಿ ದೋಡಾಗೆ ಮೊದಲ ಭೇಟಿ ಹಿನ್ನೆಲೆ ಈ ಸಮಾವೇಶ ಮಹತ್ವ ಪಡೆದಿದೆ.. 1982 ರಲ್ಲಿ ದೋಡಾಗೆ ಪ್ರಧಾನಿ ಭೇಟಿ ನೀಡಿದ್ದರು ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ 18ರಂದು ಮತದಾನ ಎದುರಿಸಲಿರುವ ಚೆನಾಬ್ ಕಣಿವೆ ದೋಡಾ, ಕಿಶ್ತ್ವಾರ್ ಮತ್ತು ರಾಂಬನ್ ಮೂರು ಜಿಲ್ಲೆಗಳ ಅಭ್ಯರ್ಥಿಗಳ ಪರ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸಲಿದ್ದಾರೆ.
2014 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ಕಿಶ್ತ್ವಾರ್ ಜಿಲ್ಲೆಯಲ್ಲಿ ಬಿಜೆಪಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಇದೀಗ ಅವರು ದೋಡಾದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಲಿದ್ದಾರೆ. ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಂಡ ಬಳಿಕ ನಡೆಯುತ್ತಿರುವ ಚುನಾವಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಅಭ್ಯರ್ಥಿಗಳಿಗೆ ಬಹುದೊಡ್ಡ ಬೆಂಬಲವಾಗಲಿದೆ ಎಂದು ಬಿಜೆಪಿ ನಾಯಕರು ನಂಬಿದ್ದಾರೆ.
ಬಿಜೆಪಿ ಜಮ್ಮು ಮತ್ತು ಕಾಶ್ಮೀರದ 43 ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು, ಈಗಾಗಲೇ ಕಣಿವೆ ರಾಜ್ಯದಲ್ಲಿ ಬಿಜೆಪಿ 25 ಶಾಸಕರನ್ನು ಹೊಂದಿದೆ.
ಮೂರು ಹಂತದಲ್ಲಿ ಜಮ್ಮು ಮತ್ತು ಕಾಶ್ಮೀರ ಚುನಾವಣೆ ನಡೆಯಲಿದ್ದು, ಮೊದಲ ಹಂತ ಸೆಪ್ಟೆಂಬರ್ 18ರಂದು ನಡೆದರೆ, ಎರಡನೇ ಹಂತ ಸೆಪ್ಟೆಂಬರ್ 25 ಮತ್ತು ಮೂರನೇ ಹಂತ ಅಕ್ಟೋಬರ್ 1ರಂದು ನಡೆಯಲಿದೆ. ಅಕ್ಟೋಬರ್ 8ರಂದು ಮತ ಏಣಿಕೆ ನಡೆದು ತೀರ್ಪು ಹೊರ ಬೀಳಲಿದೆ. 10 ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರ ಚುನಾವಣೆ ಎದುರಿಸುತ್ತಿದೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ಇಬ್ಬರು ಯೋಧರು ಹುತಾತ್ಮ