ಮುಂಬೈ: ಕೇಂದ್ರದ ಎನ್‌ಡಿಎ ಸರ್ಕಾರದ ಮಹತ್ವಾಕಾಂಕ್ಷೆಯ 'ಪಿಎಂ ವಿಶ್ವಕರ್ಮ ಯೋಜನೆ'ಗೆ ಇದೀಗ ವರ್ಷದ ಸಂಭ್ರಮ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಇಂದು ಮಹಾರಾಷ್ಟ್ರದ ವಾರ್ದಾಕ್ಕೆ ಆಗಮಿಸಿ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ, ಅಮರಾವತಿಯಲ್ಲಿ ಜವಳಿ ಪಾರ್ಕ್ಗೆ ಶಂಕುಸ್ಥಾಪನೆ ಸೇರಿದಂತೆ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಬೆಳಗ್ಗೆ 11.30ಕ್ಕೆ ಪ್ರಧಾನಿ ವಾರ್ದಾದಲ್ಲಿ ಪಿಎಂ ವಿಶ್ವಕರ್ಮ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಯೋಜನೆಯ ಫಲಾನುಭವಿಗಳಿಗೆ ಪ್ರಮಾಣಪತ್ರ ಮತ್ತು ಸಾಲ ವಿತರಿಸುವರು.
ದೇಶದ ಕುಶಲಕರ್ಮಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಳೆದ ವರ್ಷ ಸೆಪ್ಟೆಂಬರ್ 17ರಂದು ಈ ಯೋಜನೆಗೆ ಚಾಲನೆ ನೀಡಿತ್ತು.
ಇಂದಿನ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಯೋಜನೆಯಡಿ 18 ಉದ್ಯಮಗಳ 18 ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸಾಲ ವಿತರಣೆ ನಡೆಯಲಿದೆ. ಯೋಜನೆಗೆ ವರ್ಷ ತುಂಬಿದ ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ ನಡೆಯಲಿದೆ.
ಜವಳಿ ಪಾರ್ಕ್: ಇದಾದ ಬಳಿಕ, ಅಮರಾವತಿಯಲ್ಲಿ ಮೆಗಾ ಇಂಟಿಗ್ರೇಟೆಡ್ ಟೆಕ್ಸ್ಟೈಲ್ಸ್ ರೀಜನ್ಸ್ ಆ್ಯಂಡ್ ಅಪೆರೆಲ್ (ಪಿಎಂ- ಮಿತ್ರ) ಪಾರ್ಕ್ಗೆ ಮೋದಿ ಶಂಕುಸ್ಥಾಪನೆ ಮಾಡಲಿದ್ದಾರೆ. 1,000 ಎಕರೆ ಪ್ರದೇಶದಲ್ಲಿ ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ಕಾರ್ಪೋರೇಷನ್ (ಎಂಐಡಿಸಿ) ಇದನ್ನು ಅಭಿವೃದ್ಧಿಪಡಿಸಲಿದೆ.
ಕೇಂದ್ರ ಸರ್ಕಾರ ಜವಳಿ ಉದ್ಯಮಕ್ಕಾಗಿ 7 ಪಿಎಂ ಮಿತ್ರಾ ಪಾರ್ಕ್ ಸ್ಥಾಪನೆಗೆ ಅನುಮತಿ ನೀಡಿದೆ. ಜವಳಿ ಮತ್ತು ಉತ್ಪಾದನೆ ಹಾಗು ರಫ್ತಿನಲ್ಲಿ ದೇಶವನ್ನು ಜಾಗತಿಕ ತಾಣವಾಗಿ ಮಾಡುವಲ್ಲಿ ಪಿಎಂ ಮಿತ್ರ ಪಾರ್ಕ್‌ಗಳು ಪ್ರಮುಖ ಹೆಜ್ಜೆಯಾಗಿದೆ. ಇದು ನೇರ ವಿದೇಶಿ ಬಂಡವಾಳ ಹೂಡಿಕೆ ಸೇರಿದಂತೆ ದೊಡ್ಡ ಗಾತ್ರದ ಹೂಡಿಕೆಯನ್ನು ಆಕರ್ಷಿಸಿ ವಿಶ್ವ ದರ್ಜೆಯ ಕೈಗಾರಿಕಾ ಮೂಲಸೌಕರ್ಯ ಸೃಷ್ಟಿಸಲು ಸಹಾಯ ಮಾಡುತ್ತದೆ. ಉದ್ಯೋಗ ಸೃಷ್ಟಿ, ಅವಿಷ್ಕಾರಕ್ಕೂ ಪ್ರೋತ್ಸಾಹ ಸಿಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಕೌಶಲ್ಯ ಅಭಿವೃದ್ಧಿ ಯೋಜನೆಗೆ ಚಾಲನೆ: ಇದೇ ವೇಳೆ ಪ್ರಧಾನಿ ಮಹಾರಾಷ್ಟ್ರ ಸರ್ಕಾರದ ಆಚಾರ್ಯ ಚಾಣಕ್ಯ ಕೌಶಲ್ಯ ಅಭಿವೃದ್ಧಿ ಕೇಂದ್ರದ ಯೋಜನೆಗೂ ಚಾಲನೆ ನೀಡಲಿದ್ದಾರೆ.
ರಾಜ್ಯಾದ್ಯಂತ ಹೆಸರಾಂತ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಈ ಮೂಲಕ 15ರಿಂದ 45 ವರ್ಷದವರಿಗೆ ತರಬೇತಿ ನೀಡಿ ಅವರನ್ನು ಸ್ವಾವಲಂಬಿ ಮತ್ತು ಅನೇಕ ಉದ್ಯೋಗಾವಕಾಶ ಕಲ್ಪಿಸಲಾಗುವುದು. ಪ್ರತೀ ವರ್ಷ ರಾಜ್ಯದ 1,50,000 ಯುವಜನತೆ ಈ ಉಚಿತ ಕೌಶಲ್ಯ ಅಭಿವೃದ್ಧಿ ತರಬೇತಿ ಪಡೆಯಲಿದ್ದಾರೆ.
ಮಹಿಳಾ ಸ್ಟರ್ಟಪ್ ಯೋಜನೆಗೆ ಚಾಲನೆ: ಮಹಿಳಾ ಉದ್ಯಮಿಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಪುಣ್ಯಶ್ಲೋಕ ಅಹಲ್ಯಾದೇವಿ ಹೋಳ್ಕರ್ ಮಹಿಳಾ ಸ್ಟಾರ್ಟಪ್ ಯೋಜನೆಗೂ ಮೋದಿ ಚಾಲನೆ ನೀಡಲಿದ್ದಾರೆ. ಈ ಯೋಜನೆಯಡಿ ಮಹಿಳೆಯರಿಗೆ 25 ಲಕ್ಷ ರೂ ಆರ್ಥಿಕ ನೆರವು ನೀಡಲಾಗುತ್ತದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ: ಭಾಗಶಃ ಪ್ರತಿಭಟನೆ ನಿಲ್ಲಿಸಿದ ಕಿರಿಯ ವೈದ್ಯರು, ನಾಳೆಯಿಂದ ತುರ್ತು ಸೇವೆಗಳಿಗೆ ಹಾಜರು